ಜೈಪುರ(ನ.30): ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ಮಣ್ಣಿನ ಕಪ್‌ಗಳಲ್ಲಿ ಚಹಾ-ಕಾಫಿ ವಿತರಣೆಗೆ ಕ್ರಮ ಜರುಗಿಸಲಾಗುವುದು ಎಂದು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

ಭಾನುವಾರ ರಾಜಸ್ಥಾನದ ಅಳ್ವರ್‌ ಜಿಲ್ಲೆಯ ದಿಗ್ವಾಡಾ ರೈಲು ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪ್ಲಾಸ್ಟಿಕ್‌ ಮುಕ್ತ ಭಾರತ ಮಾಡುವ ಸರ್ಕಾರದ ಆಶಯಕ್ಕೆ ಅನುಗುಣವಾಗಿ ರೈಲ್ವೆ ಕೆಲಸ ಮಾಡುತ್ತಿದೆ. ಈಗಾಗಲೇ 400 ರೈಲು ನಿಲ್ದಾಣಗಳಲ್ಲಿ ಮಣ್ಣಿನ ಕಪ್‌ನಲ್ಲಿ ಚಹಾ ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲ ನಿಲ್ದಾಣಗಳಲ್ಲಿ ಮಣ್ಣಿನ ಕಪ್‌ನಲ್ಲೇ ಚಹಾ ವಿತರಿಸಲು ಯೋಜನೆ ರೂಪಿಸಲಾಗುತ್ತಿದೆ’ ಎಂದರು.

‘ನಾನು ಈ ಸಮಾರಂಭಕ್ಕೂ ಮುನ್ನ ಮಣ್ಣಿನ ಕಪ್‌ನಲ್ಲೇ ಚಹಾ ಕುಡಿದೆ. ಅದರ ರುಚಿಯೇ ವಿಭಿನ್ನವಾಗಿತ್ತು’ ಎಂದು ಹರ್ಷ ವ್ಯಕ್ತಪಡಿಸಿದರು.

‘ಮಣ್ಣಿನ ಕಪ್‌ನಲ್ಲಿ ಚಹಾ ಸೇವಿಸುವುದರಿಂದ ಪ್ಲಾಸ್ಟಿಕ್‌ ಬಳಕೆ ತಗ್ಗುತ್ತದೆ ಹಾಗೂ ಪರಿಸರ ರಕ್ಷಣೆ ಸಾಧ್ಯವಾಗುತ್ತದೆ. ಮಣ್ಣಿನ ಕಪ್‌ ತಯಾರಿಸುವ ಲಕ್ಷಾಂತರ ಕುಂಬಾರರಿಗೂ ಉದ್ಯೋಗ ದೊರಕುತ್ತದೆ’ ಎಂದು ಗೋಯಲ್‌ ನುಡಿದರು.