Indian Railways Record: ಭಾರತೀಯ ರೈಲ್ವೆ ಚೀನಾ ಮತ್ತು ಜರ್ಮನಿಯನ್ನು ಹಿಂದಿಕ್ಕಿ ಹೊಸ ದಾಖಲೆ ಬರೆದಿದೆ. ಕಳೆದ 11 ವರ್ಷಗಳಲ್ಲಿ ಈ ಪ್ರಗತಿ ಸಾಧಿಸಿದ ರೈಲ್ವೆ, ಈಗ ಕಾರ್ ಉತ್ಪಾದಕರಿಗೆ ಪ್ರಮುಖ ಸಾರಿಗೆ ಮಾಧ್ಯಮವಾಗಿದೆ.
ನವದೆಹಲಿ: ಭಾರತೀಯ ರೈಲ್ವೆ ಎರಡು ದೊಡ್ಡ ರಾಷ್ಟ್ರಗಳನ್ನು ಹಿಂದಿಕ್ಕಿದೆ. ಚೀನಾ ಮತ್ತು ಜರ್ಮನಿ ದೇಶಗಳನ್ನು ಹಿಂದಿಕ್ಕಿರುವ ಭಾರತೀಯ ರೈಲ್ವೆ ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಕಳೆದ 11 ವರ್ಷಗಳಲ್ಲಿ ಭಾರತೀಯ ರೈಲ್ವೆ ಕಾರುಗಳನ್ನು ಸಾಗಿಸುವಲ್ಲಿ ಅಗಾಧ ಪ್ರಗತಿ ಸಾಧಿಸಿದೆ. ಹಂತ ಹಂತವಾಗಿ ರೈಲ್ವೆ ದಾಖಲೆಯನ್ನು ಬರೆದಿದ್ದು ಹೇಗೆ? ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ಇಂದು ಹೊಸ ಕಾರ್‌ಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರವಾನಿಸಲು ರೈಲುಗಳನ್ನು ಅಧಿಕವಾಗಿ ಬಳಕೆ ಮಾಡಲಾಗುತ್ತಿದೆ. ಕಳೆದ 11 ವರ್ಷಗಳಲ್ಲಿ ಭಾರತೀಯ ರೈಲು ಗಣನೀಯವಾಗಿ ಬೆಳವಣಿಗೆ ಕಾಣುತ್ತಿದೆ. ರಸ್ತೆ ಮಾರ್ಗದ ಮೂಲಕ ಕಾರ್ ಸಾಗಿಸುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈಗ ಹೆಚ್ಚಿನ ಕಾರುಗಳು ರೈಲಿನ ಮೂಲಕವೇ ಸ್ಥಳಾಂತರಿಸಲಾಗುತ್ತಿದೆ. 2013-14ನೇ ಸಾಲಿನಲ್ಲಿ ಶೇ.1.5ರಷ್ಟು ಹೊಸ ಕಾರ್‌ಗಳನ್ನು ರೈಲಿನ ಮೂಲಕ ಸಾಗಿಸಲಾಗಿತ್ತು. 2024-25ನೇ ಹಣಕಾಸಿನ ವರ್ಷದಲ್ಲಿ ಕಾರ್ ರವಾನೆ ಪ್ರಮಾಣ ಶೇ.24ಕ್ಕಿಂತಲೂ ಅಧಿಕವಾಗಿದೆ. ಈ ಮೂಲಕ ಜರ್ಮನಿ ಮತ್ತು ಚೀನಾವನ್ನು ಹಿಂದಿಕ್ಕೆ 2ನೇ ಸ್ಥಾನವನ್ನು ಭಾರತ ಪಡೆದುಕೊಂಡಿದೆ.
12.5 ಲಕ್ಷ ಕಾರ್‌ಗಳ ಶಿಫ್ಟಿಂಗ್
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಈ ಹಿಂದಿನ ಆರ್ಥಿಕ ವರ್ಷದಲ್ಲಿ ಒಟ್ಟು 50.6 ಲಕ್ಷ ಕಾರುಗಳನ್ನು ತಯಾರಿಸಲಾಗಿದೆ. ಇವುಗಳಲ್ಲಿ ಸುಮಾರು 12.5 ಲಕ್ಷ ಕಾರುಗಳನ್ನು ರೈಲುಗಳ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳುಹಿಸಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕಾರ್ ರವಾನಿಸುವ ಪ್ರಮಾಣ ಏರಿಕೆಯಾಗಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಳೆದ ನಾಲ್ಕು ಹಣಕಾಸಿನ ವರ್ಷದಲ್ಲಿ ಕಾರ್ ರವಾನೆ ಪ್ರಮಾಣ ಶೇ.14.7ರಿಂದ ಶೇ.24.5ಕ್ಕೆ ಏರಿಕೆಯಾಗಿದೆ. ಉತ್ಪಾದನಾ ಕಂಪನಿಗಳು ಕಾರ್ ರವಾನಿಸಲು ಮೊದಲ ಆಯ್ಕೆಯಾಗಿ ರೈಲು ಮಾರ್ಗವನ್ನು ನೋಡುತ್ತಿವೆ. ರೈಲು ಹೆಚ್ಚು ಅನುಕೂಲಕರ, ಸುರಕ್ಷಿತ ಮತ್ತು ಆರ್ಥಿಕವಾಗಿ ಲಾಭವಾಗೋದರಿಂದು ಕಾರ್ ಉತ್ಪದನಾ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಶಿಫ್ಟ್ ಮಾಡಲು ರೈಲು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಿವೆ. ರೈಲು ಮಾರ್ಗ ಬಳಕೆ ಪರಿಸರದ ಹಿತದೃಷ್ಟಿಯಿಂದಲೂ ಒಳ್ಳೆಯದು ಎಂಬ ಉದ್ದೇಶವನ್ನು ಕಂಪನಿಗಳು ಹೊಂದಿವೆ.
ಎರಡನೇ ಸ್ಥಾನದಲ್ಲಿ ಭಾರತ
ರೈಲುಗಳ ಮೂಲಕ ಕಾರ್‌ಗಳನ್ನು ಸಾಗಿಸುವ ವಿಷಯದಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಜರ್ಮನಿ ಮೂರನೇ ಸ್ಥಾನದಲ್ಲಿದೆ. ಒಂದು ವರ್ಷದಲ್ಲಿ ಸುಮಾರು 75 ಲಕ್ಷ ಕಾರುಗಳನ್ನು ರೈಲಿನ ಮೂಲಕ ಸಾಗಿಸುವ ಮೂಲಕ ಅಮೆರಿಕ ಮೊದಲ ಸ್ಥಾನದಲ್ಲಿದೆ. ಜರ್ಮನಿ ಸುಮಾರು 6 ಲಕ್ಷ ಕಾರ್ ಸಾಗಿಸಿ ಮೂರನೇ ಸ್ಥಾನದಲ್ಲಿದೆ. ಭಾರತ ರೈಲಿನ ಮೂಲಕ 12.5 ಲಕ್ಷ ಕಾರ್‌ಗಳ ಶಿಫ್ಟಿಂಗ್ ಮಾಡಿದೆ.
600 ಕಿ.ಮೀ.ಗಿಂತಲೂ ದೂರ ಕಾರ್‌ಗಳನ್ನು ರಸ್ತೆ ಮಾರ್ಗದ ಮೂಲಕ ಸಾಗಿಸಲು ಕಂಪನಿಗಳು ಹಿಂದೇಟು ಹಾಕುತ್ತಿವೆ. ದೂರದ ಸ್ಥಳಕ್ಕೆ ರೈಲು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ರೈಲಿನ ಮೂಲಕ ಏಕಕಾಲದಲ್ಲಿ ಹೆಚ್ಚಿನ ಕಾರ್ ಶಿಫ್ಟ್ ಮಾಡಬಹುದು. ರಸ್ತೆ ಮಾರ್ಗವಾದ್ರೆ ಹೆಚ್ಚಿನ ಸಂಖ್ಯೆಯ ನೌಕರನ್ನು ಸಹ ಬಳಕೆ ಮಾಡಬೇಕಾಗುತ್ತದೆ. ನೌಕರರ ಸಂಬಳ ಉಳಿತಾಯ ಮಾಡಲು ರೈಲು ಮಾರ್ಗ ಸೂಕ್ತವಾಗಿದೆ. ಆದ್ರೆ ಈ ನಡೆಯಿಂದ ರಸ್ತೆ ಸಾರಿಗೆ ಉದ್ಯಮಕ್ಕೆ ಸಾಕಷ್ಟು ನಷ್ಟವುಂಟಾಗುತ್ತಿದೆ ಎಂದು ಲಾಜಿಸ್ಟಿಕ್ಸ್ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾರತೀಯ ರೈಲ್ವೆ ಈ ವ್ಯವಹಾರ ಪ್ರೋತ್ಸಾಹಿಸಲು ಕಂಪನಿಗಳಿಗೆ ಹೆಚ್ಚಿನ ರ‍್ಯಾಕ್‌ಗಳನ್ನು ಒದಗಿಸುತ್ತಿವೆ. ಕಾರ್ ಶಿಫ್ಟಿಂಗ್ ಭಾರತೀಯ ರೈಲ್ವೆಗೆ ಒಳ್ಳೆಯ ಆದಾಯದ ಮೂಲ ಸಹ ಆಗಿದೆ. ಹಾಗಾಗಿ ಕಾರ್ ಸಾಗಣೆಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ರೈಲ್ವೆ ಮಾಡುತ್ತಿದೆ.
ಏರಿಕೆ ಕಂಡು ಬಂದಿದ್ದು ಹೇಗೆ?
ನಿರಂತರ ಪ್ರಯತ್ನದ ಫಲವಾಗಿ ರೈಲುಗಳಲ್ಲಿ ಕಾರ್ ಸಾಗಿಸುವ ಸಂಖ್ಯೆ ಹೆಚ್ಚಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. 2013-14ರಲ್ಲಿ ಕಾರ್ ಸಾಗಣೆಗಾಗಿ ಕೇವಲ 10 ರ‍್ಯಾಕ್‌ಗಳು ಮಾತ್ರ ಇದ್ದವು. 2021ರ ವೇಳೆಗೆ ರ‍್ಯಾಕ್ ಸಂಖ್ಯೆ 29ಕ್ಕೆ ಏರಿಕೆಯಾಯ್ತು. ಸದ್ಯ 170 ರ‍್ಯಾಕ್‌ಗಳನ್ನು ಭಾರತೀಯ ರೈಲ್ವೆ ಹೊಂದಿದೆ. 2024-25ರಲ್ಲಿ ಕಾರುಗಳನ್ನು ಸಾಗಿಸಲು ಒಟ್ಟು 7,578 ಟ್ರಿಪ್‌ಗಳನ್ನು ಮಾಡಲಾಗಿದೆ ಎಂದು ವರದಿಯಾಗಿದೆ.
