ರೈಲನ್ನೇ ತಡೆದು ಮದುವೆ ದಿಬ್ಬಣಕ್ಕೆ ನೆರವಾದ ರೈಲ್ವೆ

ಮುಂಬೈನಿಂದ ಅಸ್ಸಾಂಗೆ ಹೊರಟಿದ್ದ ಮದುವೆ ದಿಬ್ಬಣದ ತಂಡವೊಂದು ರೈಲು ತಡವಾದ ಕಾರಣ ಮುಂದಿನ ರೈಲು ತಪ್ಪುವ ಆತಂಕ ಎದುರಿಸಿತ್ತು. ಟ್ವಿಟರ್ ಮೂಲಕ ನೆರವು ಕೋರಿದ್ದಕ್ಕೆ ಸ್ಪಂದಿಸಿದ ರೈಲ್ವೆ, ಮುಂದಿನ ರೈಲನ್ನು ತಡೆಹಿಡಿದು ದಿಬ್ಬಣದವರನ್ನು ಸಮಯಕ್ಕೆ ಸರಿಯಾಗಿ ಮದುವೆ ಸ್ಥಳಕ್ಕೆ ತಲುಪಿಸಿದೆ.

Indian railway staff stopped the train for few minutes for marriage ceremony team

ಕೋಲ್ಕತಾ: ವರ ಸರಿಯಾಗಿ ಮದುವೆ ಸ್ಥಳಕ್ಕೆ ತಲುಪುವುದನ್ನು ಖಾತರಿ ಪಡಿಸುವ ಸಲುವಾಗಿ ರೈಲ್ವೆ ಸಿಬ್ಬಂದಿ, ಹೌರಾದಿಂದ- ಅಸ್ಸಾಂನ ಗುವಾಹಟಿಗೆ ಹೊರಟಿದ್ದ ರೈಲೊಂದನ್ನು ಕೆಲ ಕಾಲ ತಡೆಹಿಡಿದ ಘಟನೆ ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದಿದೆ.

ಶುಕ್ರವಾರ ವರನ ಕಡೆಯ 34 ಜನರ ದಿಬ್ಬಣದ ತಂಡವೊಂದು ಮುಂಬೈ - ಹೌರಾ ಗೀತಾಂಜಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿತ್ತು. ರೈಲು ಮಧ್ಯಾಹ್ನ 1.05ಕ್ಕೆ ಹೌರಾ ತಲುಪಬೇಕಿತ್ತು. ಬಳಿಕ ಈ ತಂಡ ಸಂಜೆ 4 ಗಂಟೆಗೆ ಹೌರಾ- ಗುವಾಹಟಿ ಸರಾಯ್‌ಘಾಟ್ ಎಕ್ಸ್‌ಪ್ರೆಸ್‌ ರೈಲು ಏರಬೇಕಿತ್ತು. ಆದರೆ ಗೀತಾಂಜಲಿ ಎಕ್ಸಪ್ರೆಸ್ ರೈಲಿನ ಪ್ರಯಾಣ ತಡವಾದ ಕಾರಣ, ದಿಬ್ಬಣದ ತಂಡಕ್ಕೆ ಸಂಜೆಯ 4 ಗಂಟೆಯ ರೈಲು ಮಿಸ್ ಆಗುವ ಆತಂಕ ಕಾಡಿತ್ತು.

ಹೀಗಾಗಿ ದಿಬ್ಬಣದ ತಂಡದಲ್ಲಿದ್ದ ಚಂದ್ರಶೇಖರ್ ಟ್ವಿಟ‌ರ್ ಮೂಲಕ ರೈಲ್ವೆ ನೆರವು ಕೋರಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ರೈಲ್ವೆಯ ಹಿರಿಯ ಅಧಿಕಾರಿಗಳು ದಿಬ್ಬಣದ ತಂಡಕ್ಕೆ ಅಗತ್ಯ ನೆರವು ನೀಡುವಂತೆ ಹೌರಾ ಡಿಆರ್‌ಎಂಗೆ ಸೂಚಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಗೀತಾಂಜಲಿ ರೈಲಿನ ತ್ವರಿತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದೂ ಅಲ್ಲದೆ, ಹೌರಾ- ಗುವಾಹಟಿ ರೈಲನ್ನು ಕೆಲ ಕಾಲ ತಡೆಹಿಡಿದರು.

ಗೀತಾಂಜಲಿ ಎಕ್ ಪ್ರೆಸ್ ರೈಲು ಸಂಜೆ 4.08ಕ್ಕೆ ಹೌರಾ ತಲುಪಿದ ಕೂಡಲೇ ಕೂಡಲೇ ಬ್ಯಾಟರಿ ಚಾಲಿತ ವಾಹನಗಳ ಮೂಲಕ 34 ಜನರನ್ನು ಫ್ಲ್ಯಾಟ್‌ಫಾರಂ 24ರಿಂದ ಗುವಾಹಟಿ ರೈಲು ನಿಂತಿದ್ದ ಫ್ಲ್ಯಾಟ್‌ಫಾರಂ 9 ಕರೆದೊಯ್ಯಲಾಯಿತು. ಬಳಿಕ ದಿಬ್ಬಣದ ಜನರ ಹೊತ್ತ ರೈಲು ಕೆಲವೇ ಕ್ಷಣಗಳ ವಿಳಂಬದ ಬಳಿಕ ಗುವಾಹಟಿ ಯತ್ತ ಪ್ರಯಾಣ ಬೆಳೆಸಿತು. ವರ ಸಮಯಕ್ಕೆ ಸರಿಯಾಗಿ ಮದುವೆ ಮಂಟಪ ತಲುಪಲು ರೈಲ್ವೆ ಸಿಬ್ಬಂದಿ ನೀಡಿದ ನೆರವು ಫಲಕೊಟ್ಟಿತು. ಈ ನಡುವೆ ಸಕಾಲಕ್ಕೆ ಭಾನುವಾರ ಮದುವೆ ನಡೆದಿದ್ದು, ವರನ ಕಡೆಯವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಧನ್ಯವಾದ ಸಲ್ಲಿಸಿದ್ದಾರೆ.

Latest Videos
Follow Us:
Download App:
  • android
  • ios