ದೂರು ನೀಡಿದ ರೈಲ್ವೆ ಪ್ರಯಾಣಿಕರ ಮೇಲೆ ಕೆಟರಿಂಗ್ ಸಿಬ್ಬಂದಿ ಪ್ರಯಾಣಿಕರ ಪಿಎನ್‌ಆರ್ ನಂಬರ್ ನೋಡಿಬಂದು ಹಲ್ಲೆ ಮಾಡಿದಂತಹ ಆಘಾತಕಾರಿ ಘಟನೆ ರೈಲೊಂದರಲ್ಲಿ ನಡೆದಿದ್ದು, ಇದರ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
ಭಾರತೀಯ ರೈಲ್ವೆಯೂ ರೈಲಿನಲ್ಲಿ ಏನಾದರೂ ಸಮಸ್ಯೆ ಆದರೆ ದೂರು ನೀಡುವಂತೆ ರೈಲ್ವೆಯ ಪ್ರಯಾಣಿಕರಿಗೆ ಆನ್‌ಲೈನ್‌ನಲ್ಲಿ ಹಲವು ವ್ಯವಸ್ಥೆಗಳನ್ನು ಮಾಡಿದೆ. ರೈಲಿನಲ್ಲಿ ಬುಕ್ ಮಾಡಿದ ಪ್ರಯಾಣಿಕರ ಸೀಟನ್ನು ಯಾರಾದರೂ ಆಕ್ರಮಿಸಿಕೊಂಡರೆ, ರೈಲಿನಲ್ಲಿ ನೀಡುತ್ತಿರುವ ಊಟ ಸರಿ ಇಲ್ಲದೇ ಹೋದರೆ ರೈಲಿನಲ್ಲಿ ದುಬಾರಿ ದರ ಪಡೆದರೆ ಹೀಗೆ ಯಾವುದೇ ಸಮಸ್ಯೆಗೂ ಪ್ರಯಾಣಿಕರು ರೈಲಿನಲ್ಲಿ ಕುಳಿತೇ ಭಾರತೀಯ ರೈಲ್ವೆಯ ರೈಲ್ ಮದದ್ ಪೋರ್ಟಲ್ ಮೂಲಕ ದೂರು ನೀಡಬಹುದು ಅಥವಾ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡಬಹುದು, ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಅಥವಾ @RailMinIndia ಗೆ ಟ್ವೀಟ್ ಕಳುಹಿಸುವ ಮೂಲಕವೂ ರೈಲಿನಲ್ಲಿನ ಸಮಸ್ಯೆಗೆ ದೂರು ಕೊಡಬಹುದು.
ಆದರೆ ಹೀಗೆ ದೂರು ನೀಡಿದ ಪ್ರಯಾಣಿಕರು ಎಷ್ಟು ಸುರಕ್ಷಿತ ಎಂಬ ಬಗ್ಗೆ ಪ್ರಶ್ನೆಯೊಂದು ಮೂಡಿದೆ. ಹೌದು, ಹೀಗೆ ದೂರು ನೀಡಿದ ರೈಲ್ವೆ ಪ್ರಯಾಣಿಕರ ಮೇಲೆ ಕೆಟರಿಂಗ್ ಸಿಬ್ಬಂದಿ ಪ್ರಯಾಣಿಕರ ಪಿಎನ್‌ಆರ್ ನಂಬರ್ ನೋಡಿಬಂದು ಹಲ್ಲೆ ಮಾಡಿದಂತಹ ಆಘಾತಕಾರಿ ಘಟನೆ ರೈಲೊಂದರಲ್ಲಿ ನಡೆದಿದ್ದು, ಇದರ ವೀಡಿಯೋ ಈಗ ಭಾರಿ ವೈರಲ್ ಆಗಿದೆ. ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ದೂರು ನೀಡುವ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಆತಂಕ ಉಂಟು ಮಾಡಿದೆ.
ಆಗಿದ್ದೇನು?
ರೈಲ್ವೆಯಲ್ಲಿ ಪ್ರಯಾಣಿಕರಿಗೆ ಟೀ ಕಾಫಿ, ತಿಂಡಿ ಅಂತ ಆಗಾಗ ರೈಲ್ವೆಯಲ್ಲಿ ಆಹಾರ ಒದಗಿಸುವ ಕೆಟರಿಂಗ್ ಸಂಸ್ಥೆಯ ಸಿಬ್ಬಂದಿ ಮಾರುತ್ತಾ ಬರುವುದನ್ನು ನೀವು ಕಾಣಬಹುದು. ಹೀಗೆ ಏನು ತಿನಿಸು ಮಾರಿಕೊಂಡು ಬಂದವರು ಪ್ರಯಾಣಿಕರಿಗೆ ನಿಗದಿತ ಬೆಲೆಗಿಂತ ಹೆಚ್ಚು ಹಣ ವಸೂಲಿ ಮಾಡಿದ್ದಾರೆ. ಈ ಅನ್ಯಾಯದ ವಿರುದ್ಧ ಸಿಟ್ಟಾದ ಪ್ರಯಾಣಿಕರೊಬ್ಬರು ಈ ಬಗ್ಗೆ ರೈಲ್ ಸೇವಾ ಆಪ್‌ನಲ್ಲಿ ದೂರು ನೀಡಿದ್ದಾರೆ.ಕೆಟರರ್ ಅಗತ್ಯಕ್ಕಿಂತ ಹೆಚ್ಚು ಚಾರ್ಜ್ ಮಾಡುತ್ತಿರುವ ಬಗ್ಗೆ ಅವರು ದೂರು ನೀಡಿದ್ದಾರೆ. ರೈಲು ಸೇವಾ ಆಪ್‌ನಲ್ಲಿ ಹೀಗೆ ದೂರು ನೀಡಿದ ಪ್ರಯಾಣಿಕನ ಪಿಎನ್ಆರ್ ನಂಬರ್, ಅವರಿದ್ದ ಸೀಟು ನಂಬರ್ ಇದನ್ನು ಪಡೆದುಕೊಂಡು ಈ ಸಮಸ್ಯೆಯನ್ನು ಪರಿಹರಿಸುವಂತೆ ಐಆರ್‌ಸಿಟಿಸಿಗೆ ಅವರ ವಿವರ ನೀಡಿದೆ.
ಆದರೆ ಐಆರ್‌ಸಿಟಿಸಿಯಲ್ಲಿರುವ ಸಿಬ್ಬಂದಿ ಯಾರೋ ಈ ವಿಚಾರವನ್ನು ಆಹಾರ ಪೂರೈಕೆಯ ಗುತ್ತಿಗೆ ವಹಿಸಿಕೊಂಡ ವ್ಯಕ್ತಿಗೆ ನೀಡಿದ್ದು, ಈ ಗುತ್ತಿಗೆದಾರ ತನ್ನ ಜನರಿಗೆ ಹೇಳಿ ರೈಲೊಳಗೆಯೇ ಪ್ರಯಾಣಿಕರಿಗೆ ಹಲ್ಲೆ ಮಾಡುವಂತೆ ಮಾಡಿದ್ದು, ಈ ಭಯಾನಕ ವಿಡಿಯೋ ಈಗ ವೈರಲ್ ಆಗಿದೆ.
ಟ್ವಿಟ್ಟರ್‌ನಲ್ಲಿ @theskindoctor13 ಎಂಬ ಖಾತೆಯಿಂದ ಈ ವೀಡಿಯೋ ವೈರಲ್ ಆಗಿದ್ದು, ಅವರು ಹೀಗೆ ಬರೆದುಕೊಂಡಿದ್ದಾರೆ. ಪ್ರಯಾಣಿಕರೊಬ್ಬರು ಅಡುಗೆ ಪೂರೈಕೆದಾರರು ಹೆಚ್ಚಿನ ಶುಲ್ಕ ವಿಧಿಸುತ್ತಿರುವ ಬಗ್ಗೆ @RailwaySeva ಗೆ ದೂರು ನೀಡಿದ್ದಾರೆ. ರೈಲ್‌ಸೇವಾ ಪ್ರಯಾಣಿಕನ PNR ಮತ್ತು ಸೀಟ್ ಸಂಖ್ಯೆ ಪಡೆದು ಅದನ್ನು ಪರಿಹರಿಸಲು irctc ಗೆ ರವಾನಿಸುತ್ತದೆ, ಅವರು ಗುತ್ತಿಗೆದಾರರಿಗೆ ಹೇಳುತ್ತಾರೆ. ಅವರು ತಮ್ಮ ಸಿಬ್ಬಂದಿಗೆ ಹೇಳುತ್ತಾರೆ, ಮತ್ತು ಅವರು ಪ್ರಯಾಣಿಕರಿಗೆ ಹೊಡೆಯಲು ಬರುತ್ತಾರೆ. ನಾನು ಕನಿಷ್ಠ ಎರಡು ಅಂತಹ ಪ್ರಕರಣಗಳನ್ನು ನೋಡಿದ್ದೇನೆ. ದೂರು ನೀಡಿ, ನಿಮ್ಮ ವಿವರಗಳನ್ನು ಹಂಚಿಕೊಳ್ಳಿ, ಮತ್ತು ಆ ವಿವರಗಳಿಂದಾಗಿ ಏಟು ತಿನ್ನಿ.
ಇದನ್ನು ಸುವ್ಯವಸ್ಥಿತಗೊಳಿಸಬೇಕಾಗಿದೆ. ದೂರುಗಳನ್ನು ಮೂರನೇ ವ್ಯಕ್ತಿಯಿಂದ ತನಿಖೆ ಮಾಡಬೇಕು. ದೂರು ಯಾರ ವಿರುದ್ಧವಾಗಿದೆಯೋ ಅವರೊಂದಿಗೆ ಪ್ರಯಾಣಿಕರ ವಿವರಗಳನ್ನು ಹಂಚಿಕೊಳ್ಳುವುದು ಮತ್ತು ನಂತರ ನೇರ ಸಂಪರ್ಕವನ್ನು ಒತ್ತಾಯಿಸುವುದು ಅರ್ಥಹೀನವಾದುದು. ಬದಲಾಗಿ, ಪ್ರಯಾಣಿಕರ ವಿವರಗಳನ್ನು ಸಂಗ್ರಹಿಸಿ, ದೂರನ್ನು ಪರಿಶೀಲಿಸಿ ಮತ್ತು ಅವರನ್ನು ಮುಖಾಮುಖಿಯಾಗಿ ತರದೆ ನೇರವಾಗಿ ಅವರ ಖಾತೆಗೆ ಮರುಪಾವತಿ ಮಾಡಬೇಕಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವೀಡಿಯೋ ನೋಡಿದ ಅನೇಕರು ದೂರು ನೀಡಿದ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


