ತಪ್ಪಿ ಹೋಗುತ್ತಿದ್ದ ಯುವಕನ ಮದುವೆ ಉಳಿಸಿದ ಭಾರತೀಯ ರೈಲ್ವೆ; ಅಶ್ವಿನಿ ವೈಷ್ಣವ್ ಕೆಲಸಕ್ಕೆ ನೆಟ್ಟಿಗರ ಶ್ಲಾಘನೆ!
ರೈಲು ತಡವಾಗುವುದರಿಂದ ಮದುವೆ ಮುರಿದುಬೀಳುವ ಆತಂಕದಲ್ಲಿದ್ದ ಯುವಕನಿಗೆ ಭಾರತೀಯ ರೈಲ್ವೆ ನೆರವು ನೀಡಿದೆ. ಚಂದ್ರಶೇಖರ್ ವಾಘ್ ಮತ್ತು ಅವರ 34 ಸದಸ್ಯರ ಕುಟುಂಬ ಸಕಾಲದಲ್ಲಿ ಮದುವೆ ಮನೆ ತಲುಪಲು ರೈಲ್ವೆ ಅಧಿಕಾರಿಗಳು ಸಂಘಟಿತ ಪ್ರಯತ್ನ ಮಾಡಿದರು.
ನವದೆಹಲಿ (ನ.16): ಭಾರತೀಯ ರೈಲ್ವೆ ದೇಶದ ಅತಿದೊಡ್ಡ ಸಾರಿಗೆಯಾಗಿದ್ದರೂ ಜನರಿಗೆ ಇದರ ಮೇಲೆ ತಾತ್ಸಾರ. ಯಾಕೆಂದರೆ, ಪ್ರಯಾಣಿಕರಿಗೆ ಇಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲ. ಟ್ರೇನ್ ಸರಿಯಾದ ಸಮಯಕ್ಕೆ ಬರೋದಿಲ್ಲ ಅನ್ನೋ ದೂರುಗಳು ಸಾಮಾನ್ಯ. ಆದರೆ, ಇತ್ತೀಚೆಗೆ ಭಾರತೀಯ ರೈಲ್ವೆ ಯುವಕನೊಬ್ಬನ ಮದುವೆಯನ್ನು ಉಳಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಶ್ರಮವಹಿಸಿ ಅದರಲ್ಲಿ ಯಶಸ್ವಿಯೂ ಆಗಿದೆ. ರೈಲು ತಡವಾಗಲಿರುವ ಕಾರಣಕ್ಕೆ ಚಂದ್ರಶೇಖರ್ ವಾಘ್ ಎನ್ನುವ ಯುವಕನ ಮದುವೆ ಮುರಿದುಬೀಳುವ ಅಪಾಯವಿತ್ತು. ಆದರೆ, ರೈಲ್ವೆ ಅಧಿಕಾರಿಗಳ ತುರ್ತು ಕ್ರಮದ ಕಾರಣದಿಂದಾಗಿ ವರ ಹಾಗೂ ಆತನ 34 ಸದಸ್ಯರ ಕುಟುಂಬ ಮದುವೆ ಮನೆಗೆ ಸರಿಯಾದ ಸಮಯಕ್ಕೆ ಹೋಗಿ ಮುಟ್ಟುವಲ್ಲಿ ಯಶಸ್ವಿಯಾಗಿದೆ.
ಚಂದ್ರಶೇಖರ್ ವಾಘ್ ಇತ್ತೀಚೆಗೆ ತಮ್ಮ ಮದುವೆಗಾಗಿ ಮುಂಬೈನಿಂದ ಗುವಾಹಟಿಗೆ ತಮ್ಮ 34 ಮಂದಿ ಕುಟುಂಬದೊಂದಿಗೆ ಗೀತಾಂಜಲಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣ ಮಾಡಿದ್ದರು. ಆದರೆ, ಈ ಟ್ರೇನ್ 3-4 ಗಂಟೆ ಲೇಟ್ ಆಗಿ ತಲುಪಲಿದೆ ಎನ್ನುವುದು ಅಂದಾಜಾಗಿತ್ತು. ಹಾಗೇನಾದರೂ ಟ್ರೇನ್ ಮುಟ್ಟುವುದು ತಡವಾದಲ್ಲಿ ಕೋಲ್ಕತ್ತಾದ ಹೌರಾ ಸ್ಟೇಷನ್‌ನಲ್ಲಿ ಕನೆಕ್ಟಿಂಗ್ ರೈಲು ಆಗಿದ್ದ ಸರೈಘಾಟ್ ಎಕ್ಸ್‌ಪ್ರೆಸ್ ಹಿಡಿಯುವುದು ಕಷ್ಟವಾಗಲಿದೆ ಎನ್ನುವ ಅಂದಾಜಿಗೆ ಬಂದಿದ್ದ ಚಂದ್ರಶೇಖರ್ ವಾಘ್ ತಕ್ಷಣಕ್ಕೆ ಕಾರ್ಯಪ್ರವೃತ್ತರಾಗಿದ್ದರು.
ಈ ಹಂತದಲ್ಲಿ ಒಂದು ಕ್ಷಣ ಕೂಡ ಮಿಸ್ ಮಾಡದ ಯುವಕ, ಎಕ್ಸ್‌ನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ತಾನಿರುವ ಪರಿಸ್ಥಿತಿಯನ್ನು ವಿವರಿಸಿದ್ದ, ಅಲ್ಲದೆ, ತಮ್ಮ ಪ್ರಯಾಣದಲ್ಲಿ ಕುಟುಂಬದ ಹಿರಿಯ ಸದಸ್ಯರು ಕೂಡ ಇದ್ದಾರೆ. ಅದಲ್ಲದೆ, 34 ಮಂದಿ ಪ್ರಯಾಣಿಕರನ್ನು ಸಾಗಾಣೆ ಮಾಡಲು ಬೇರೆ ಯಾವುದೇ ಟ್ರಾನ್ಸ್‌ಪೋರ್ಟ್‌ನ ವ್ಯವಸ್ಥೆ ಕೂಡ ಇಲ್ಲ. ಇದರಿಂದಾಗಿ ಸರಿಯಾದ ಸಮಯಕ್ಕೆ ಮದುವೆ ಮನೆಗೆ ಹೋಗಿ ಮುಟ್ಟುವುದಕ್ಕೆ ಸಾಧ್ಯವಾಗೋದಿಲ್ಲ ಅನ್ನೋದನ್ನು ವಿವರಿಸಿದ್ದರು.
ರೈಲ್ವೆ ಸಚಿವರಿಗೆ ಟ್ವೀಟ್ ಮಾಡಿದ್ದರೂ ಅವರಿಂದ ಪ್ರತಿಕ್ರಿಯೆಯನ್ನು ಆತ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಅಶ್ವಿನಿ ವೈಷ್ಣವ್ ತಕ್ಷಣವೇ ಆತನಿಗೆ ಪ್ರತಿಕ್ರಿಯೆ ನೀಡಿದ್ದರು.ಪೂರ್ವ ರೈಲ್ವೇಯ ಜನರಲ್ ಮ್ಯಾನೇಜರ್ ನಿರ್ದೇಶನದ ಅಡಿಯಲ್ಲಿ ಮತ್ತು ಹೌರಾದ ವಿಭಾಗೀಯ ರೈಲ್ವೇ ಮ್ಯಾನೇಜರ್ (DRM) ಮತ್ತು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ (Sr DCM) ರ ಸಂಘಟಿತ ಪ್ರಯತ್ನಗಳ ಮೂಲಕ ಯುವಕ ಸರಿಯಾದ ಸಮಯದಲ್ಲಿ ಮದುವೆ ಮನೆಗೆ ಹೋಗಿ ಮುಟ್ಟುವಲ್ಲಿ ಶ್ರಮಿಸಲಾಯಿತು.
ಸರೈಘಾಟ್ ಎಕ್ಸ್‌ಪ್ರೆಸ್ ಹೌರಾದಲ್ಲಿ ಕೆಲ ಕಾಲ ನಿಲ್ಲಿಸಿದರೆ, ಇದೇ ಸಮಯದಲ್ಲಿ ಗೀತಾಂಜಲಿ ಎಕ್ಸ್‌ಪ್ರೆಸ್‌ನ ಪೈಲಟ್‌ಗೆ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿ, ಆದಷ್ಟು ಬೇಗ ರೈಲು ಹೌರಾ ಸ್ಟೇಷನ್‌ಗೆ ಬರುವಂತೆ ವ್ಯವಸ್ಥೆ ಮಾಡಲಾಯಿತು. ಗೀತಾಂಜಲಿ ಎಕ್ಸ್‌ಪ್ರೆಸ್ ಯಾವುದೇ ವಿಳಂಬವಿಲ್ಲದೆ ತನ್ನ ಗಮ್ಯಸ್ಥಾನವನ್ನು ತಲುಪಲು ರೈಲ್ವೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿತ್ತು. ಈ ಎಲ್ಲದರ ನಡುವೆ ಹೌರಾದಲ್ಲಿರುವ ರೈಲ್ವೆ ಸಿಬ್ಬಂದಿಗಳು, ಗೀತಾಂಜಲಿ ಎಕ್ಸ್‌ಪ್ರೆಸ್‌ನಲ್ಲಿದ್ದ ಯುವಕ ಹಾಗೂ ಆತನ ಕುಟುಂಬ ಅವರ ಲಗೇಜ್‌ಗಳನ್ನು 21ನೇ ಫ್ಲಾಟ್‌ಫಾರ್ಮ್‌ನಿಂದ ಸರೈಘಾಟ್ ಎಕ್ಸ್‌ಪ್ರೆಸ್ ನಿಂತಿದ್ದ 9ನೇ ಫ್ಲಾಟ್‌ಫಾರ್ಮ್‌ಗೆ ಅತ್ಯಂತ ತ್ವರಿತವಾಗಿ ಸಾಗಿಸಲಾಗಿತ್ತು.
ಈ ಪ್ರಯತ್ನಗಳಿಂದಾಗಿ, ಗೀತಾಂಜಲಿ ಎಕ್ಸ್‌ಪ್ರೆಸ್ ತನ್ನ ಪರಿಷ್ಕೃತ ವೇಳಾಪಟ್ಟಿಗಿಂತ ಮುಂಚಿತವಾಗಿ ಹೌರಾ ತಲುಪಿತು. ಗೀತಾಂಜಲಿ ಎಕ್ಸ್‌ಪ್ರೆಸ್ ಬಂದ ಬೆನ್ನಲ್ಲಿಯೇ ರೈಲ್ವೆ ಸಿಬ್ಬಂದಿಗಳು 35 ಸದಸ್ಯರ ಕುಟುಂವನ್ನು ಅತ್ಯಂತ ತ್ವರಿತವಾಗಿ ಸರೈಘಾಟ್ ಎಕ್ಸ್‌ಪ್ರೆಸ್ ಏರುವಲ್ಲಿ ನೆರವಾದರು.
Bengaluru:'ಜನಗಣಮನ..' ಹಾಡುವ ಮೂಲಕ ಪ್ರತಿದಿನದ ಕೆಲಸ ಆರಂಭಿಸುವ ರಾಮೇಶ್ವರಂ ಕೆಫೆ!
ಈ ಬಗ್ಗೆ ರೈಲ್ವೇಸ್‌ಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ ವಾಘ್, "ಇದು ಕೇವಲ ಸೇವೆಯಾಗಿರದೆ ಅಪಾರ ಕರುಣೆಯ ಕಾರ್ಯವಾಗಿತ್ತು. ಈ ಮಧ್ಯಸ್ಥಿಕೆ ಇಲ್ಲದಿದ್ದರೆ, ನನ್ನ ಕುಟುಂಬ ಮತ್ತು ನಾನು ನಮ್ಮ ಜೀವನದಲ್ಲಿ ಒಂದು ಭರಿಸಲಾಗದ ಕ್ಷಣವನ್ನು ಕಳೆದುಕೊಳ್ಳುತ್ತಿದ್ದೆವು. ನಾನು ಭಾರತೀಯ ರೈಲ್ವೇಸ್ಗೆ ಆಳವಾಗಿ ಕೃತಜ್ಞನಾಗಿದ್ದೇನೆ' ಎಂದು ಹೇಳಿದ್ದಾರೆ. ಪೂರ್ವ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಕೌಶಿಕ್ ಮಿತ್ರ, "ನಾವು ನಮ್ಮ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಯಾವಾಗಲೂ ಸಿದ್ಧರಿದ್ದೇವೆ. ಇಂದಿನ ಪ್ರಯತ್ನವು ಅವರಿಗಾಗಿ ಮತ್ತು ಮೀರಿದ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ವರನಿಗೆ ನಮ್ಮ ಶುಭಾಶಯಗಳು." ಎಂದು ಹೇಳಿದ್ದಾರೆ.
ಇದು ಬೆಂಗಳೂರಿನ 'ಬಿಲಿಯನೇರ್ ಸ್ಟ್ರೀಟ್', 67.5 ಕೋಟಿಗೆ ಸೇಲ್ ಆಗಿದೆ ಇಲ್ಲಿನ ಒಂದು ಸೈಟ್!