ನವದೆಹಲಿ(ಮೇ.15): ಕೊರೋನಾ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹಲವು ಮಿತವ್ಯಯಿ ಕ್ರಮಗಳನ್ನು ಪ್ರಕಟಿಸಿದ್ದಾರೆ. 

10 ಕೋಟಿ ರು. ಮೌಲ್ಯದ ಐಷಾರಾಮಿ ಕಾರು ಖರೀದಿ ಮುಂದೂಡಿಕೆ, ಮಾಸಿಕ 1.5 ಲಕ್ಷ ರು. ಸಂಬಳ ಸ್ವಯಂ ಕಡಿತ (ಶೇ.30), ದೇಶೀಯ ಪ್ರಯಾಣ ಕಡಿಮೆ, ಅದ್ಧೂರಿ ಸಮಾರಂಭಗಳ ಸರಳ ಆಯೋಜನೆ, ಪುಷ್ಪಾಲಂಕಾರ, ಮತ್ತಿತರೆ ಅಲಂಕಾರಿಕ ವಸ್ತುಗಳ ಕಡಿಮೆ ಬಳಕೆ, ಭೂರಿ ಭೋಜನ ಪ್ರಮಾಣ ಕಡಿತದಂತಹ ನಿರ್ಧಾರಗಳನ್ನು ಘೋಷಿಸಿದ್ದಾರೆ. ಇದರಿಂದಾಗಿ ಒಂದು ವರ್ಷದಲ್ಲಿ 40ರಿಂದ 45 ಕೋಟಿ ರು. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

81000 ಸೋಂಕಿತರು: ಚೀನಾ ಹಿಂದಿಕ್ಕುವತ್ತ ಭಾರತ! ಒಂದೇ ದಿನ 99 ಸಾವು

ರಾಷ್ಟ್ರಪತಿಗಳಿಗೆ ವಾರ್ಷಿಕ 200 ಕೋಟಿ ರು. ಬಜೆಟ್‌ ಇರುತ್ತದೆ. ಅದರಲ್ಲಿ ನೌಕರರ ಸಂಬಳದ ಬಾಬ್ತು 80.98 ಕೋಟಿ ರು. ಕೂಡ ಸೇರಿದೆ. ರಾಷ್ಟ್ರಪತಿಗಳಿಗೆ 5 ಲಕ್ಷ ರು. ವೇತನವಿದ್ದು, ಮುಂದಿನ 1 ವರ್ಷ ಶೇ.30ರಷ್ಟು ಕಡಿಮೆ ಅಂದರೆ 3.5 ಲಕ್ಷ ರು. ಪಡೆಯಲಿದ್ದಾರೆ. ಈಗಾಗಲೇ ಒಂದು ತಿಂಗಳ ಸಂಬಳವನ್ನು ಅವರು ಪ್ರಧಾನಿ ಕೇರ್‌ ನಿಧಿಗೆ ನೀಡಿದ್ದಾರೆ.

ಸಭೆ- ಸಮಾರಂಭಗಳಿಗಾಗಿ ಜ.26ರೊಳಗೆ ಐಷಾರಾಮಿ ಲಿಮೊಸಿನ್‌ ಕಾರನ್ನು 10 ಕೋಟಿ ರು. ವೆಚ್ಚದಲ್ಲಿ ಖರೀದಿಸಲು ಉದ್ದೇಶಿಸಲಾಗಿತ್ತು. ಅದನ್ನು ಈಗ ಮುಂದೂಡಿದ್ದಾರೆ. ಜತೆಗೆ ರಾಷ್ಟ್ರಪತಿ ಭವನದಲ್ಲಿ ಹೊಸ ನಿರ್ಮಾಣ ಚಟುವಟಿಕೆ ಕೈಗೊಳ್ಳುವುದಿಲ್ಲ. ದುರಸ್ತಿ ಪ್ರಮಾಣವನ್ನು ಕಡಿತಗೊಳಿಸಲಾಗುತ್ತದೆ ಎಂದು ರಾಷ್ಟ್ರಪತಿ ಭವನ ಪ್ರಕಟಣೆಯಲ್ಲಿ ತಿಳಿಸಿದೆ.