Asianet Suvarna News Asianet Suvarna News

ನೌಕಾಪಡೆಗೆ ‘ಇಂಫಾಲ್‌’ ಬಲ, ಈಶಾನ್ಯ ಭಾರತದ ಹೆಸರು ಹೊಂದಿದ ಮೊದಲ ನೌಕೆ ರಾಷ್ಟ್ರಕ್ಕೆ ಸಮರ್ಪಣೆ

 ನೌಕಾಪಡೆಗೆ ‘ಇಂಫಾಲ್‌’ ಬಲ. ಕಣ್ತಪ್ಪಿಸಿ ಬರುವ ಶತ್ರುಪಡೆಗಳ ಗೈಡೆಡ್‌ ಮಿಸೈಲ್‌ ಹೊಡೆದುರುಳಿಸುವ ಶಕ್ತಿ. ಅಣ್ವಸ್ತ್ರ, ಜೈವಿಕ, ರಾಸಾಯನಿಕ ದಾಳಿ ವೇಳೆ ದೇಶ ರಕ್ಷಣೆಗೆ ನಿಲ್ಲುವ ನೌಕೆ. ಈಶಾನ್ಯ ಭಾರತದ ಹೆಸರು ಹೊಂದಿದ ಮೊದಲ ನೌಕೆ ರಾಷ್ಟ್ರಕ್ಕೆ ಸಮರ್ಪಣೆ.

Indian Navy strengthens arsenal with commissioning of INS Imphal gow
Author
First Published Dec 27, 2023, 10:15 AM IST

ಮುಂಬೈ (ಡಿ.27): ರಾಡಾರ್‌ಗಳ ಕಣ್ತಪ್ಪಿಸಿ ದಾಳಿ ನಡೆಸಲು ಬರುವ ಗೈಡೆಡ್‌ ಕ್ಷಿಪಣಿಗಳನ್ನು ಹೊಡೆದುರುಳಿಸುವ ಹಾಗೂ ಅಣು, ಜೈವಿಕ ಮತ್ತು ರಾಸಾಯನಿಕ ಯುದ್ಧಗಳ ಸಂದರ್ಭದಲ್ಲಿ ದೇಶದ ರಕ್ಷಣೆಗೆ ನಿಲ್ಲುವ ಭಾರತೀಯ ನೌಕಾಪಡೆಯ ‘ಇಂಫಾಲ್‌’ ಯುದ್ಧ ನೌಕೆ ರಾಷ್ಟ್ರಕ್ಕೆ ಸಮರ್ಪಣೆಯಾಗಿದೆ. ಇದರಿಂದಾಗಿ ನೌಕಾಪಡೆಗೆ ಹೊಸ ಬಲ ಬಂದಿದೆ.

ರಕ್ಷಣಾ ಸಚಿವ ರಾಜನಾಥ ಸಿಂಗ್‌, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌. ಹರಿಕುಮಾರ್‌ ಅವರು ‘ಇಂಫಾಲ್‌’ ಅನ್ನು ನೌಕಾಪಡೆಗೆ ಸೇರ್ಪಡೆ ಮಾಡುವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇಂಫಾಲ್‌ ಎಂಬುದು ಮಣಿಪುರದ ರಾಜಧಾನಿಯ ಹೆಸರು. ಇದೇ ಮೊದಲ ಬಾರಿಗೆ ಯುದ್ಧ ನೌಕೆಯೊಂದಕ್ಕೆ ಈಶಾನ್ಯ ಭಾರತದ ನಗರವೊಂದರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂಬುದು ಗಮನಾರ್ಹ.

ಮಜಗಾಂವ್‌ ಡಾಕ್‌ ಕಂಪನಿ ಈ ನೌಕೆಯನ್ನು ನಿರ್ಮಾಣ ಮಾಡಿ ಕಳೆದ ಅ.30ರಂದು ನೌಕಾಪಡೆಗೆ ಹಸ್ತಾಂತರಿಸಿತ್ತು. ಶೇ.75ರಷ್ಟು ಸ್ವದೇಶಿ ವಸ್ತುಗಳನ್ನೇ ಬಳಸಿ ಇಂಫಾಲ್‌ ಅನ್ನು ನಿರ್ಮಿಸಲಾಗಿದೆ. ದೇಶದ ಕರಾವಳಿ ಭದ್ರತೆಯನ್ನು ಬಲಗೊಳಿಸುವ ಉದ್ದೇಶದಿಂದ ಇಂಫಾಲ್‌ ಅನ್ನು ವಿನ್ಯಾಸಗೊಳಿಸಲಾಗಿದೆ.

ನೌಕೆಯ ವಿಶೇಷತೆ: ಶತ್ರುಪಡೆಗಳಿಗೆ ಅತ್ಯಂತ ಅಪಾಯಕಾರಿ ಯುದ್ಧ ನೌಕೆ ಇದಾಗಿದ್ದು, 163 ಮೀಟರ್‌ ಉದ್ದವಿದೆ. 17 ಮೀಟರ್‌ ಅಗಲವಿದ್ದು, 7400 ಟನ್‌ ತೂಕವಿದೆ. ಮಧ್ಯಮ ವ್ಯಾಪ್ತಿಯ, ನೆಲದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಗಳನ್ನು ಇಂಫಾಲ್‌ ಹೊಂದಿದೆ. ಕಣ್ಗಾವಲು ಇಡುವ ಅತ್ಯಾಧುನಿಕ ರಾಡಾರ್‌ ಅನ್ನು ಕೂಡ ಹೊಂದಿದೆ. ಬ್ರಹ್ಮೋಸ್‌ ಕ್ಷಿಪಣಿಗಳನ್ನು ಕೂಡ ಉಡಾಯಿಸಬಲ್ಲದು. ಭಾರತದ ಬಳಿ ಸದ್ಯ 132 ಯುದ್ಧ ನೌಕೆಗಳು ಇವೆ. 2035ರ ವೇಳೆಗೆ ಇವುಗಳ ಸಂಖ್ಯೆಯನ್ನು 170ರಿಂದ 175ಕ್ಕೆ ಹೆಚ್ಚಿಸುವ ಗುರಿಯನ್ನು ನೌಕಾಪಡೆ ಹೊಂದಿದೆ.

Follow Us:
Download App:
  • android
  • ios