ನವದೆಹಲಿ(ಮೇ.15): ಮೂರನೇ ಹಂತದ ಲಾಕ್‌ಡೌನ್‌ ಭಾನುವಾರ ಮುಕ್ತಾಯವಾಗಲಿದ್ದು, ಸೋಮವಾರದಿಂದ ಜಾರಿಗೆ ಬರಲಿರುವ ಲಾಕ್‌ಡೌನ್‌ 4.0 ವೇಳೆ ದೇಶೀಯ ವಿಮಾನಗಳ ಸಂಚಾರ ಸೀಮಿತ ಪ್ರಮಾಣದಲ್ಲಿ ಆರಂಭವಾಗುವ ಸಾಧ್ಯತೆ ಇದೆ. 

ದಿಲ್ಲಿ-ಮುಂಬೈ ಸೇರಿದಂತೆ ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಮೊದಲು ವಿಮಾನ ಸಂಚಾರ ಆರಂಭವಾಗಬಹುದು ಎನ್ನಲಾಗಿದೆ. ಆದರೆ ಈವರೆಗೂ ಇದರ ಅಂತಿಮ ನಿರ್ಣಯ ಆಗಿಲ್ಲ ಎಂದು ಮೂಲಗಳು ಹೇಳಿವೆ. ಇದೇ ವೇಳೆ, ಕಚೇರಿಗಳಲ್ಲಿ ಶೇ.33ರಷ್ಟು ನೌಕರರಿಗೆ ಅನುಮತಿ ನೀಡಿ ಸಾರ್ವಜನಿಕ ಸಾರಿಗೆಗೆ ನಿರ್ಬಂಧ ಮುಂದುವರಿಸಿರುವುದು ಟೀಕೆಗೆ ಕಾರಣವಾಗಿದೆ. ಹೀಗಾಗಿ ಬಸ್‌, ಮೆಟ್ರೋದಂತಹ ಸಾರಿಗೆಗೆ ಹಂತ ಹಂತವಾಗಿ ಸೀಮಿತ ಅವಕಾಶ ನೀಡುವ ನಿರೀಕ್ಷೆಯಿದೆ.

14 ದಿನಗಳಿಂದ ಸೋಂಕಿಲ್ಲ: ಮೈಸೂರು ಕಿತ್ತಳೆ ವಲಯದತ್ತ

ಇನ್ನು ಕೊರೋನಾ ಪ್ರಕರಣಗಳ ತೀವ್ರತೆ ಆಧರಿಸಿ ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳೆಂದು ಮಾಡಲಾಗಿದ್ದ ವರ್ಗೀಕರಣದಲ್ಲಿ ಹೆಚ್ಚು ಬದಲಾವಣೆ ಆಗುವ ಸಾಧ್ಯತೆ ಇಲ್ಲ. ಆದಾಗ್ಯೂ ಕಂಟೈನ್ಮೆಂಟ್‌ ವಲಯದ ವ್ಯಾಪ್ತಿಯಿಂದ ಹೊರಗಿರುವ ಪ್ರದೇಶಗಳಲ್ಲಿ ಹೆಚ್ಚೆಚ್ಚು ಆರ್ಥಿಕ ಚಟುವಟಿಕೆಗಳು, ಕಚೇರಿಗಳು, ಉದ್ದಿಮೆಗಳ ಆರಂಭಕ್ಕೆ ಅನುವು ಮಾಡಿಕೊಡಲಾಗುತ್ತದೆ. ಈ ಬಗ್ಗೆ ಗೃಹ ಸಚಿವಾಲಯ ಮಾರ್ಗದರ್ಶಿ ನಿಯಮಗಳನ್ನು ರೂಪಿಸುತ್ತಿದೆ ಎಂದು ತಿಳಿದುಬಂದಿದೆ.
ಇನ್ನುಳಿದಂತೆ ಶಾಪಿಂಗ್‌ ಮಾಲ್‌, ಸಲೂನ್‌ ಆರಂಭಕ್ಕೆ ಹಸಿರು ನಿಶಾನೆ ತೋರುವ ಸಾಧ್ಯತೆ ಕಮ್ಮಿ.

ಬಿಲ್‌ ಗೇಟ್ಸ್‌ ಜತೆ ಮೋದಿ ಕೊರೋನಾ ಮಾತುಕತೆ

ಕೊರೋನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಜಾಗತಿಕ ಸಹಕಾರ ಮತ್ತು ವೈಜ್ಞಾನಿಕ ಸಂಶೋಧನೆಗಳ ಕುರಿತಂತೆ ಉದ್ಯಮಿ ಬಿಲ್‌ಗೇಟ್ಸ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಕೊರೋನಾಕ್ಕೆ ಸಂಬಂಧಿಸಿದ ವಿಷಯಗಳ ಚರ್ಚೆಯಲ್ಲಿ ಭಾರತವನ್ನು ಸೇರಿಸಿಕೊಳ್ಳಬೇಕು ಎಂಬುದನ್ನು ಮೋದಿ ಪ್ರತಿಪಾದಿಸಿದ್ದಾರೆ.

ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ಭಾರತದ ಪ್ರಜ್ಞಾಪೂರ್ವಕ ಪ್ರಯತ್ನ ಹಾಗೂ ಆರ್ಥಿಕ ನೆರವಿನ ಘೋಷಣೆಯ ಬಗ್ಗೆ ವಿವರಿಸಿದರು. ಅಲ್ಲದೇ ಕೊರೋನಾ ವೈರಸ್‌ ವಿರುದ್ಧದ ಹೋರಾಟಕ್ಕೆ ಗೇಟ್ಸ್‌ ಫೌಂಡೇಶನ್‌ನ ಕೊಡುಗೆ, ತಂತ್ರಜ್ಞಾನದ ಪಾತ್ರ, ನಾವೀನ್ಯತೆ, ಔಷಧ ತಯಾರಿಕೆಯ ಕುರಿತಂತೆ ಚರ್ಚೆ ನಡೆಸಲಾಯಿತು.