ದೇಶದಲ್ಲಿ 19 ರೂಪಾಂತರಿ ವೈರಸ್| ಆಂಧ್ರಪ್ರದೇಶದ 34% ಸೋಂಕಿತರಲ್ಲಿ ರೂಪಾಂತರಿ ವೈರಾಣು| ಕರ್ನಾಟಕದಲ್ಲೂ ಹರಡುತ್ತಿದೆ ‘ಎನ್440ಕೆ’ ಹೆಸರಿನ ಹೊಸ ತಳಿ| ಬ್ರಿಟನ್ ರೂಪಾಂತರಿ ವೈರಸ್‌ನ ಬೆನ್ನಲ್ಲೇ ಇನ್ನೊಂದು ಆಘಾತ?
ಹೈದರಾಬಾದ್(ಡಿ.29): ಬ್ರಿಟನ್ನಿನ ಹೊಸ ಮಾದರಿಯ ಕೊರೋನಾ ವೈರಸ್ ಎಲ್ಲೆಡೆ ಹರಡುತ್ತಿರುವುದರ ನಡುವೆಯೇ ಭಾರತದಲ್ಲೂ ಕೊರೋನಾದ 19 ಬೇರೆ ಬೇರೆ ತಳಿಯ ವೈರಸ್‌ಗಳು ಹರಡುತ್ತಿರುವುದು ಪತ್ತೆಯಾಗಿದೆ. ಅದರಲ್ಲಿ ‘ಎನ್440ಕೆ’ ಹೆಸರಿನ ಹೊಸ ರೂಪಾಂತರಿ ವೈರಸ್ ಆಂಧ್ರಪ್ರದೇಶದ ಶೇ.34ರಷ್ಟುಸೋಂಕಿತರಲ್ಲಿ ಪತ್ತೆಯಾಗಿದೆ. ಆತಂಕದ ಸಂಗತಿಯೆಂದರೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣದ ಕೆಲ ಕೊರೋನಾ ರೋಗಿಗಳಲ್ಲೂ ಈ ವೈರಸ್ ಕಂಡುಬಂದಿದೆ.
ದೆಹಲಿಯಲ್ಲಿರುವ ಸಿಎಸ್‌ಐಆರ್‌ನ ಇನ್‌ಸ್ಟಿಟ್ಯೂಟ್ ಫಾರ್ ಜೀನಾಮಿಕ್ಸ್ ಆ್ಯಂಡ್ ಇಂಟಿಗ್ರೇಟಿವ್ ಬಯಾಲಜಿ ಸಂಸ್ಥೆಯಲ್ಲಿ ಜಗತ್ತಿನ 2.4 ಲಕ್ಷ ಕೊರೋನಾ ಸೋಂಕಿತರಲ್ಲಿ ಪತ್ತೆಯಾದ ವೈರಸ್ಸನ್ನು ಪರೀಕ್ಷೆಗೊಳಪಡಿಸಲಾಗಿದೆ. ಆಗ ಕೊರೋನಾದ 126 ತಳಿಗಳು ಪತ್ತೆಯಾಗಿದ್ದು, ಇವು ಸಾಮಾನ್ಯ ಸಾರ್ಸ್ ಕೋವ್-2 ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ ಹೊಂದಿರುವವರಿಗೂ ಸೋಂಕು ಅಂಟಿಸಬಹುದಾದ ಸಾಧ್ಯತೆಯಿದೆ. ಭಾರತದಲ್ಲಿ 19 ತಳಿಗಳು ಪತ್ತೆಯಾಗಿದ್ದು, ಅವುಗಳ ಪೈಕಿ ಎನ್440ಕೆ ತಳಿಯ ವೈರಸ್ ಆಂಧ್ರದಲ್ಲಿ ವೇಗವಾಗಿ ಹರಡುತ್ತಿದೆ. ಕರ್ನಾಟಕದಲ್ಲೂ ಕೆಲ ಕೊರೋನಾ ಸೋಂಕಿತರಲ್ಲಿ ಈ ತಳಿ ಕಂಡುಬಂದಿದೆ ಎಂದು ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ.
ಆದರೆ, ಹೊಸ ತಳಿ ಈಗ ಪತ್ತೆಯಾಗಿರುವುದಲ್ಲ. ಜುಲೈ-ಆಗಸ್ಟ್ ವೇಳೆಯಲ್ಲೇ ಇದು ಪತ್ತೆಯಾಗಿದೆ. ದೇಶದ ಶೇ.2ರಷ್ಟುಕೊರೋನಾ ರೋಗಿಗಳಲ್ಲಿ ಈ ತಳಿಯ ವೈರಸ್ಸೇ ಇರಬಹುದು. ಇದು ಬ್ರಿಟನ್ನಿನ ರೂಪಾಂತರಿ ವೈರಸ್‌ನಂತೆ ವೇಗವಾಗಿ ಹರಡುತ್ತದೆಯೇ ಅಥವಾ ಸಾಮಾನ್ಯ ಕೊರೋನಾ ವೈರಸ್‌ಗಿಂತ ಕಡಿಮೆ ವೇಗದಲ್ಲಿ ಹರಡುತ್ತದೆಯೇ ಅಥವಾ ಇದರಿಂದ ಹೆಚ್ಚು ಅನಾರೋಗ್ಯ ಉಂಟಾಗುತ್ತದೆಯೇ ಎಂಬುದೂ ಸೇರಿದಂತೆ ಈ ವೈರಸ್‌ನ ಪರಿಣಾಮಗಳ ಬಗ್ಗೆ ಇನ್ನಷ್ಟೇ ಅಧ್ಯಯನ ನಡೆಯಬೇಕಿದೆ. ಸದ್ಯಕ್ಕೆ ಅಂತಹ ಯಾವ ಸಂಗತಿಗಳ ಬಗ್ಗೆಯೂ ನಮಗೆ ಏನೂ ತಿಳಿದಿಲ್ಲ ಎಂದು ತಿಳಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 29, 2020, 8:36 AM IST