ನವದೆಹಲಿ(ಜೂ.10): ಲಡಾಖ್‌ ಗಡಿಯಲ್ಲಿ ಕಾಣಿಸಿಕೊಂಡಿದ್ದ ಬಿಕ್ಕಟ್ಟು ಮತ್ತೊಂದು ಡೋಕ್ಲಾಂ ಆಗುವತ್ತ ಸಾಗುತ್ತಿದೆ ಎಂಬ ಆತಂಕಗಳ ಬೆನ್ನಲ್ಲೇ, ಉಭಯ ದೇಶಗಳ ಗಡಿ ಸಂಘರ್ಷ ಶಮನವಾಗುವ ಲಕ್ಷಣಗಳು ಗೋಚರಿಸಿವೆ. ಬಿಕ್ಕಟ್ಟು ಇತ್ಯರ್ಥ ಸಂಬಂಧ ಉಭಯ ದೇಶಗಳ ನಡುವೆ ಮಾತುಕತೆ ಆರಂಭವಾಗುತ್ತಿದ್ದಂತೆ ಭಾರತ ಹಾಗೂ ಚೀನಾದ ಸೇನಾಪಡೆಗಳು ಲಡಾಖ್‌ನ ಗಡಿಯಿಂದ ಸುಮಾರು 2 ಕಿ.ಮೀ.ನಷ್ಟು ಹಿಂದೆ ಸರಿದಿವೆ. ಈ ಬೆಳವಣಿಗೆಯು ಮುಂದಿನ ಮಾತುಕತೆಗೆ ಪೂರಕವಾಗಿ ಪರಿಣಮಿಸಿದೆ.

ನಮ್ಮ ಉತ್ಪನ್ನ ಬಹಿಷ್ಕಾರ ಭಾರತೀಯರಿಗೆ ಅಸಾಧ್ಯ: ಚೀನಾ ಕುಹಕ!

ಶನಿವಾರ ಎರಡೂ ದೇಶಗಳ ಮಿಲಿಟರಿಗಳ ನಡುವೆ ಮಾತುಕತೆ ನಡೆದಿದೆ. ಅದು ಧನಾತ್ಮಕವಾಗಿ ಸಾಗಿದ ಪರಿಣಾಮ ಪೂರ್ವ ಲಡಾಖ್‌ನ ಗಾಲ್ವನ್‌ ಪ್ರದೇಶ ಹಾಗೂ ಫಿಂಗರ್‌ ಏರಿಯಾದಿಂದ ಎರಡೂ ದೇಶಗಳ ಸೇನೆಗಳು ಒಂದರಿಂದ ಎರಡು ಕಿ.ಮೀ.ನಷ್ಟುಹಿಂದೆ ಸರಿದಿವೆ. ಆದರೆ, ಅದಕ್ಕೂ ಹಿಂದಿನ ಪ್ರದೇಶಗಳಲ್ಲಿ ಚೀನಾದ 100 ಟ್ಯಾಂಕ್‌ಗಳೂ ಸೇರಿದಂತೆ ಸಶಸ್ತ್ರ ಪಡೆಗಳು ಸನ್ನದ್ಧ ಸ್ಥಿತಿಯಲ್ಲೇ ಇವೆ ಎಂದು ಸೇನಾ ಮೂಲಗಳು ಹೇಳಿವೆ.

‘ಗಾಲ್ವನ್‌ ಪ್ರದೇಶದಲ್ಲಿ 20 ಲಾರಿಗಳಲ್ಲಿ ಚೀನಾದ ಯೋಧರು ಹಿಂದೆ ಸರಿದಿದ್ದಾರೆ. ಅವರೇ ಮೊದಲು ಮುಂದೆ ಬಂದಿದ್ದರು. ಹೀಗಾಗಿ ಅವರೇ ಮೊದಲು ಹಿಂದೆ ಸರಿಯಬೇಕಿತ್ತು. ಫಿಂಗರ್‌ ಏರಿಯಾದಲ್ಲೂ ಹಿಂದೆಗೆತ ಆರಂಭವಾಗಿವೆ. ಈ ವಾರ ಎರಡೂ ಸೇನೆಗಳು ವಿವಿಧ ವಿವಾದಿತ ಕೇಂದ್ರಗಳ ಕುರಿತು ಮಾತುಕತೆ ನಡೆಸಲಿವೆ. ಗಡಿಯಲ್ಲಿನ ಪರಿಸ್ಥಿತಿಯ ಆಧಾರದ ಮೇಲೆ ಮಾತುಕತೆ ನಡೆಯಲಿದೆ’ ಎಂದು ಹಿರಿಯ ಸೇನಾಧಿಕಾರಿಗಳು ಹೇಳಿದ್ದಾರೆ.

ಸಾವಿರಾರು ಪ್ಯಾರಾಚೂಟ್‌ಗಳಲ್ಲಿ ಯೋಧರ ಇಳಿಸಿ ಚೀನಾ ಧಿಮಾಕು, ಡಿಜಿಟಲ್ ಬೆದರಿಕೆ!

ಆದರೆ, ಗಡಿಗಿಂತ ಹಿಂದಿನ ಪ್ರದೇಶಗಳಲ್ಲಿ ಈಗಲೂ ಚೀನಾದ ಸೇನಾಪಡೆಗಳು ಯುದ್ಧಸನ್ನದ್ಧ ಸ್ಥಿತಿಯಲ್ಲೇ ಇವೆ. ಚುಶುಲ್‌ ಪ್ರದೇಶದಲ್ಲಿ 10,000ಕ್ಕೂ ಹೆಚ್ಚು ಯೋಧರು, ಟ್ಯಾಂಕ್‌ಗಳು ಹಾಗೂ ಶಸ್ತ್ರಾಸ್ತ್ರಗಳು ಜಮಾವಣೆಗೊಂಡಿವೆ. ಜೊತೆಗೆ ಚೀನಾದ ಸೇನೆಯು ಯುದ್ಧವಿಮಾನಗಳು, ರಾಡಾರ್‌ಗಳು ಹಾಗೂ ರಕ್ಷಣಾ ವ್ಯವಸ್ಥೆಗಳನ್ನೂ ನಿಯೋಜಿಸಿಟ್ಟುಕೊಂಡಿದೆ. ಗಾಲ್ವನ್‌ ಹಾಗೂ ಫಿಂಗರ್‌ ಏರಿಯಾದಲ್ಲಿ ಚೀನಾ ಯೋಧರು ಬಂಕರ್‌ಗಳನ್ನು ನಿರ್ಮಿಸುತ್ತಿದ್ದಾರೆ. ಇದು ಆತಂಕಕಾರಿ ವಿಚಾರ ಎಂದು ಹೇಳಲಾಗಿದೆ.