ನವದೆಹಲಿ(ಆ.07): ಚೀನಾ ಸೇನೆಯ ಮೇಲೆ ಹದ್ದಿನ ಕಣ್ಣು ಇರಿಸುವ ಉದ್ದೇಶದಿಂದ 4ರಿಂದ 6 ಉಪಗ್ರಹಗಳ ಅವಶ್ಯಕತೆ ಇದೆ ಎಂದು ಭಾರತದ ಭದ್ರತಾ ಪಡೆಗಳು ಬೇಡಿಕೆ ಇರಿಸಿವೆ. 

ಚೀನಾ-ಭಾರತದ 4 ಸಾವಿರ ಕಿ.ಮೀ. ಗಡಿಯವರೆಗೂ ಚೀನಾ ಸೇನೆಯ ಮೇಲೆ ನಿಗಾ ಇಡಲು ಸೇನೆಗೆಂದೇ ಮೀಸಲಾದ ಉಪಗ್ರಹಗಳ ಅಗತ್ಯವಿದೆ ಎಂದು ಅವು ಪ್ರತಿಪಾದಿಸಿವೆ.

ಮೊದಲ ಬಾರಿ ಎಲ್‌ಒಸಿಯಲ್ಲಿ ‘ರೈಫಲ್‌ ವಿಮೆನ್‌’!

ಗಡಿಯ ಆಚೆ ಚೀನಾ 40 ಸಾವಿರ ಯೋಧರನ್ನು ಜಮೆ ಮಾಡಿದೆ. ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ಕ್ರೋಡೀಕರಿಸಿದೆ. ಲೇಹ್‌ ಸೇರಿದಂತೆ ಅನೇಕ ಕಡೆ ಒಳನುಸುಳಲು ಯತ್ನ ನಡೆಸುವ ಸಾಧ್ಯತೆ ಇದೆ ಎಂಬ ವರದಿಗಳಿವೆ. ಇದೇ ಕಾರಣಕ್ಕೆ ಚೀನಾ ಸೇನೆ ಚಟುವಟಿಕೆ ಮೇಲೆ ನಿಗಾ ಇರಿಸಲು, ಸೇನೆಗೆಂದೇ ಮೀಸಲಾದ 4-6 ಉಪಗ್ರಹಗಳು ಬೇಕು ಎಂದು ರಕ್ಷಣಾ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.

ಈಗಾಗಲೇ ಭಾರತವು ಹಲವು ಮಿಲಿಟರಿ ಉಪಗ್ರಹಗಳನ್ನು ಹೊಂದಿದೆ. ಆದರೆ ಅವುಗಳ ಬಲ ಹೆಚ್ಚಾಗುವಂತೆ ಮಾಡಲು ಮತ್ತಷ್ಟು ಸೇನೆಗೆಂದೇ ಮೀಸಲಾದ ಉಪಗ್ರಹಗಳು ಬೇಕು ಎಂದು ಕೋರಿಕೆ ಸಲ್ಲಿಸಿವೆ. ಮೇ ತಿಂಗಳಿನಲ್ಲಿ ನಡೆದ ಗಲ್ವಾನ್ ಘರ್ಷಣೆಯಲ್ಲಿ ಭಾರತದ 20 ಯೋಧರು ವೀರ ಮರಣವನ್ನು ಅಪ್ಪಿದ್ದರು. ಅಲ್ಲದೇ ಅರವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.