ಪ್ರವಾಹ ಪೀಡಿತ ಪಂಜಾಬ್‌ನಲ್ಲಿ ಸಿಲುಕಿದ್ದ ನವಜಾತ ಶಿಶು ಮತ್ತು ತಾಯಿಯನ್ನು ಭಾರತೀಯ ಸೇನೆ ರಕ್ಷಿಸಿದೆ.  ತಾಯಿ ಮತ್ತು 15 ದಿನಗಳ ಮಗು, ನಾಲ್ಕು ದಿನಗಳಿಂದ ನೀರಿನಿಂದ ಮುಳುಗಿದ್ದ  ಮನೆಯ ಮೊದಲ ಮಹಡಿಯಲ್ಲಿ ಸಿಲುಕಿಕೊಂಡಿದ್ದರು. 

ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಎಂಬಂತೆ ಉತ್ತರ ಭಾರತದಲ್ಲಿ ಈ ಭಾರಿಯ ಮಳೆ ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ. ಧಾರಾಕಾರ ಮಳೆ ನಿಂತಿದ್ದರು ಅದು ಮಾಡಿದ ಪ್ರವಾಹದ ಅವಾಂತರಗಳ ಪರಿಣಾಮ ಮಾತ್ರ ಕಡಿಮೆ ಆಗಿಲ್ಲ. ಜಮ್ಮುಕಾಶ್ಮೀರ, ಪಂಜಾಬ್, ಉತ್ತರಾಖಂಡ್ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಈ ಬಾರಿಯ ಮಳೆ ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ. ಹಲವು ಕಡೆಗಳಲ್ಲಿ ರಸ್ತೆಗಳು ಸೇತುವೆಗಳು ಕೊಚ್ಚಿ ಹೋಗಿದ್ದು, ಸಂಪರ್ಕಗಳೇ ಕಡಿತಗೊಂಡಿವೆ. ಮನೆಗಳು ಕುಸಿದು ಅನೇಕರು ನಿರಾಶ್ರಿತರಾಗಿದ್ದಾರೆ. ಭಾರತೀಯ ಸೇನೆ, ಎನ್‌ಡಿಆರ್‌ಎಫ್ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಪ್ರವಾಹ ಪೀಡಿತ ಸ್ಥಳಗಳಲ್ಲಿ ರಕ್ಷಣಾ ಕಾರ್ಯಗಳಲ್ಲಿ ತೊಡಗಿವೆ. ಇಲ್ಲಿ ಒಂದಕ್ಕಿಂತ ಒಂದು ಮನಕಲುಕುವ ದೃಶ್ಯಗಳ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ.

ಭಾರತೀಯ ಸೇನೆಯಿಂದ 15 ದಿನಗಳ ನವಜಾತ ಶಿಶು, ಮಗುವಿನ ರಕ್ಷಣೆ:

ಭೂಕಂಪವಾಗಲಿ ಪ್ರವಾಹವೇ ಬರಲಿ ಮೊದಲು ಆ ಸ್ಥಳವನ್ನು ತಲುಪುವುದು ಭಾರತೀಯ ಸೇನೆ. ಅದೇ ರೀತಿ ಪ್ರವಾಹ ಪೀಡಿತ ಪಂಜಾಬ್‌ನಲ್ಲಿ ಭಾರತೀಯ ಯೋಧರು ನವಜಾತ ಶಿಶು ಹಾಗೂ ತಾಯಿಯನ್ನು ರಕ್ಷಣೆ ಮಾಡಿದ್ದಾರೆ. ಸೇನೆಯ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಪಂಜಾಬ್‌ನಲ್ಲಿ ಪ್ರವಾಹದಿಂದಾಗಿ ಮುಳುಗಿದ ಕಟ್ಟಡದ ಮೊದಲನೇ ಮಹಡಿಯಲ್ಲಿ ತನ್ನ 15 ತಿಂಗಳ ನವಜಾತ ಶಿಶುವಿನೊಂದಿಗೆ ಸಿಲುಕಿದ್ದ ತಾಯಿಯನ್ನು ಭಾರತೀಯ ಸೇನೆ ರಕ್ಷಣೆ ಮಾಡಿದೆ. ಈ ತಾಯಿ ಸಿ-ಸೆಕ್ಷನ್(ಸಿಸೇರಿಯನ್‌) ಮೂಲಕ ಮಗುವಿಗೆ ಜನ್ಮ ನೀಡಿದ್ದರು. ಅವರ ಹೊಟ್ಟೆಯ ಗಾಯಗಳು ಇನ್ನೂ ಒಣಗಿರಲಿಲ್ಲ. ಆ ನೋವಿನಿಂದ ಚೇತರಿಸಿಕೊಳ್ಳುವುದಕ್ಕೂ ಮೊದಲೇ ಈ ನೈಸರ್ಗಿಕ ವಿಕೋಪದಿಂದಾಗಿ ಆ ಮಹಿಳೆ ವಾಸವಿದ್ದ ಮನೆ ಮುಳುಗಿತ್ತು. ಹೀಗೆ ನೀರಿನಿಂದ ಆವೃತ್ತವಾಗಿದ್ದ ತಮ್ಮ ಮನೆಯ ಮೊದಲ ಮಹಡಿಯಲ್ಲಿ 4 ದಿನಗಳಿಂದ ರಕ್ಷಣೆಗಾಗಿ ಕಾಯ್ತಿದ್ದ ಬಾಣಂತಿ ಮಹಿಳೆ ಹಾಗೂ ಆಕೆ 15 ದಿನಗಳ ಕಂದನನ್ನು ಭಾರತೀಯ ಸೇನೆಯ ಯೋಧರು ರಕ್ಷಣೆ ಮಾಡಿದ್ದಾರೆ.

ಪಂಜಾಬ್‌ನ ಗುರುದಾಸ್‌ಪುರದ ಕಪುರ್ತಲಾದಲ್ಲಿ ಘಟನೆ

ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಯ ವೆಸ್ಟರ್ನ್‌ ಕಮಾಂಡ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ. ಖಾರ್ಗಾ ಕಾರ್ಪ್ಸ್‌ನ ಸಪ್ಪರ್‌ಗಳು ಸಿ ಸೆಕ್ಷನ್‌ಗೆ ಒಳಗಾಗಿ ಮಗುವಿಗೆ ಜನ್ಮ ನೀಡಿದ ತಾಯಿ ತೊಂದರೆಯಲ್ಲಿರುವ ಬಗ್ಗೆ ಮಾಹಿತಿ ಪಡೆದರು. ಆಕೆ 15 ದಿನಗಳ ಮಗುವಿನೊಂದಿಗೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದರು.. ತಕ್ಷಣವೇ ಕಾರ್ಯಪ್ರವೃತ್ತರಾದ #KhargaSappers ಕಟ್ಟಡದ ಮೊದಲ ಮಹಡಿಯಲ್ಲಿದ್ದ ಅವರನ್ನು ಸುಧಾರಿತ ಏಣಿಯ ಸಹಾಯದಿಂದ ರಕ್ಷಿಸಿ, ದೋಣಿಯಲ್ಲಿ 3 ಕಿ.ಮೀ ಸಾಗಿ ನಂತರ ಸೇನಾ ವಾಹನದಲ್ಲಿ 15 ಕಿ.ಮೀ ದೂರದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿತು ಎಂದು ಈ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಪಂಜಾಬ್‌ನ ಗುರುದಾಸ್‌ಪುರದ ಕಪುರ್ತಲಾದಲ್ಲಿ ಈ ಘಟನೆ ನಡೆದಿದೆ.

ಮಳೆಯಿಂದಾಗಿ ಉಕ್ಕಿ ಹರಿದ ಹಲವು ನದಿಗಳು: ನದಿಗಳ ನಾಡಿಗೆ ಭಾರಿ ಸಂಕಷ್ಟ

ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆ ಆಗ್ತಿರುವುದರಿಂದ ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳು ಉಕ್ಕಿ ಹರಿಯುತ್ತಿದ್ದು, ಪಂಜಾಬ್ ಭಾರಿ ಪ್ರವಾಹಕ್ಕೆ ತುತ್ತಾಗಿದೆ. ಗುರುದಾಸ್ಪುರ, ಪಠಾಣ್‌ ಕೋಟ್‌, ಫಜಿಲ್ಕಾ, ಕಪುರ್ತಲಾ, ತರಣ್ ತರಣ್, ಫಿರೋಜ್ಪುರ, ಹೋಶಿಯಾರ್ಪುರ್ ಮತ್ತು ಅಮೃತಸರ ಜಿಲ್ಲೆಗಳ ಗ್ರಾಮಗಳು ಪ್ರವಾಹದಿಂದ ತೀವ್ರಹಾನಿಗೊಳಗಾಗಿವೆ. ಮನುಷ್ಯರ ಜೊತೆ ಪ್ರಾಣಿಗಳು ಕೂಡ ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದು, ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋವೊಂದರಲ್ಲಿ ಎಮ್ಮೆ ಹಾಗೂ ಹಸುಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಮನಕಲುಕುವ ದೃಶ್ಯ ಸೆರೆ ಆಗಿತ್ತು. ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಈ ಜಾನುವಾರುಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪರದಾಡುತ್ತಿದ್ದವು.

ಇದನ್ನೂ ಓದಿ: ಪ್ರವಾಸಿಗರ ಗೇಲಿ ಮಾಡ್ತಿದ್ದ ಗಿಳಿಗಳು: ಗಿಳಿಗಳ ಕೆಟ್ಟ ಮಾತು ಕೇಳಲಾಗದೇ ಪ್ರತ್ಯೇಕಗೊಳಿಸಿದ ಝೂ ಸಿಬ್ಬಂದಿ..

ಇದನ್ನೂ ಓದಿ: ಅಯ್ಯೋ ಕಂದಾ.. ಪೋಷಕರು ತೊರೆದ ಮಗುವಿಗೆ ಆಸ್ಪತ್ರೆಯಲ್ಲಿ ಇಲ್ಲಿ ಕಚ್ಚಿ ಸಾವು

Scroll to load tweet…