Amarnath : ಮೇಘಸ್ಫೋಟಕ್ಕೆ ಈವರೆಗೂ 16 ಭಕ್ತರ ಸಾವು, ಸೇನಾ ಹೆಲಿಕಾಪ್ಟರ್ ಬಳಸಿ ರಕ್ಷಣಾ ಕಾರ್ಯ
ಶುಕ್ರವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಅಮರನಾಥ ಗುಹೆಯ ಸಮೀಪದಲ್ಲಿ ಸಂಭವಿಸಿದ ಭೀಕರ ಮೇಘಸ್ಪೋಟದಲ್ಲಿ ಈವರೆಗೂ 16 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಲಕ್ಷಣ ಕಾಣುತ್ತಿದೆ. ನಾಪತ್ತೆಯಾಗಿರುವ 40ಕ್ಕೂ ಅಧಿಕ ಮಂದಿಯ ಪತ್ತೆಗಾಗಿ ಭಾರತೀಯ ಸೇನೆ ರಕ್ಷಣಾ ಕಾರ್ಯ ಆರಂಭಿಸಿದ್ದು, ಸೇನಾ ಹೆಲಿಕಾಪ್ಟರ್‌ಗಳನ್ನು ಘಟನಾ ಸ್ಥಳದಲ್ಲಿ ನಿಯೋಜನೆ ಮಾಡಿದೆ.
ಶ್ರೀನಗರ (ಜುಲೈ 9): ದಕ್ಷಿಣ ಕಾಶ್ಮೀರದ ಅಮರನಾಥ ಗುಹೆಯ (holy cave shrine of Amarnath) ಬಳಿ ಸಂಭವಿಸಿದ ಮೇಘಸ್ಪೋಟದ (cloudburst ) ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ಪ್ರತಿಯೊಂದು ವಿಡಿಯೋಗಳು ಕೂಡ ಸ್ಥಳದಲ್ಲಿನ ಭೀಕರ ಸ್ಥಿತಿ ಚಿತ್ರಣ ನೀಡಿದೆ. ಭಾರೀ ಪ್ರವಾಹದಲ್ಲಿ ಹಲವು ಭಕ್ತರು ಕೊಚ್ಚಿ ಹೋಗಿದ್ದಾರೆ.
ಇದುವರೆಗೆ 16 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಅವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಐಟಿಬಿಪಿ (ITBP) ಮತ್ತು ಎನ್‌ಡಿಆರ್‌ಎಫ್ (NDRF) ತಂಡಗಳು ಸ್ಥಳದಲ್ಲಿ ನಿಂತಿವೆ. ಪರಿಹಾರ ಮತ್ತು ರಕ್ಷಣಾ ಕಾರ್ಯ (rescue operation ) ತಡರಾತ್ರಿಯವರೆಗೂ ಮುಂದುವರಿದಿತ್ತು. ಶನಿವಾರ ಬೆಳಗ್ಗೆಯಿಂದ ಮತ್ತೊಮ್ಮೆ ಕಾರ್ಯಾಚರಣೆ ಚುರುಕುಗೊಳಿಸಲಾಗುತ್ತಿದೆ. ಶನಿವಾರ ಭಾರತೀಯ ಸೇನೆ ತನ್ನ ರಕ್ಷಣಾ ಕಾರ್ಯಾಚರಣೆ ಚುರುಕು ಮಾಡಿದ್ದು, ಸೇನಾ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಲಾಗಿದೆ.
ಈ ಮಧ್ಯೆ, ಹವಾಮಾನ ಇಲಾಖೆ ಮತ್ತೆ ಅಮರನಾಥ ಸಮೀಪ ಭಾರೀ ಮಳೆಯಾಗುವ ಎಚ್ಚರಿಕೆ ನೀಡಿದೆ. ಪ್ರವಾಹದಿಂದಾಗಿ ಟೆಂಟ್‌ಗಳು ಮತ್ತು ಅಡುಗೆ ಕೋಣೆಗಳಲ್ಲಿ ಮಣ್ಣು ಮತ್ತು ಕಲ್ಲುಗಳು ಬಿದ್ದಿವೆ. ದುರಂತದ ನಂತರ ಜೂನ್ 30 ರಂದು ಆರಂಭವಾದ ಅಮರನಾಥ ಯಾತ್ರೆಯನ್ನು ಮುಂದೂಡಲಾಗಿದೆ ಮತ್ತು ರಕ್ಷಣಾ ಕಾರ್ಯಾಚರಣೆ ಮುಗಿದ ನಂತರ ಅದನ್ನು ಪುನರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರಾಡಳಿತ ಪ್ರದೇಶದ ಆಡಳಿತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
NewsHour ಅಮರನಾಥ ಮೇಘಸ್ಫೋಟ 15 ಬಲಿ, ಪ್ರವಾಹದಲ್ಲಿ ಕೊಚ್ಚಿ ಹೊದ 40 ಭಕ್ತರು!
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಡಿಜಿ ಅತುಲ್ ಕರ್ವಾಲ್ ಮಾತನಾಡಿ, ಈಗಾಗಲೇ ನಮ್ಮ ಒಂದು ತಂಡ ಈಗಾಗಲೇ ಪ್ರದೇಶದಲ್ಲಿದೆ ಮತ್ತು ಇನ್ನೂ ಎರಡು ತಂಡ ಬುರಾರಿ ಮಾರ್ಗ ಮತ್ತು ಪಂಚತಾರ್ನಿ ಸ್ಥಳಗಳಿಂದ ಸ್ಥಳಕ್ಕೆ ತಲುಪಲಿದೆ. ಒಟ್ಟಾರೆ 75 ರಕ್ಷಣಾ ತಂಡಗಳು ಕಾರ್ಯ ಕ್ರಮದಲ್ಲಿವೆ" ಎಂದು ಕರ್ವಾಲ್ ಹೇಳಿದ್ದಾರೆ.
ಅಮರನಾಥ ಯಾತ್ರೆ ಬೇಸ್ ಕ್ಯಾಂಪ್ ವಲಯದಲ್ಲಿ ಮೇಘಸ್ಫೋಟ, ಹಲವು ಭಕ್ತರ ಸಾವು!
ಪ್ರವಾಹದಿಂದಾಗಿ ಪವಿತ್ರ ಗುಹೆ ಪ್ರದೇಶದ ಬಳಿ ಸಿಲುಕಿರುವ ಹೆಚ್ಚಿನ ಪ್ರಯಾಣಿಕರನ್ನು ಪಂಜತರ್ನಿಗೆ ಕಳುಹಿಸಲಾಗಿದೆ. ಐಟಿಬಿಪಿ, ಗುಹೆಯಿಂದ ಪಂಜತರ್ನಿಯವರೆಗಿನ ಮಾರ್ಗಗಳನ್ನು ತೆರೆಯಲು ವ್ಯವಸ್ಥೆ ಮಾಡಿದೆ. ಇಂದು ಮುಂಜಾನೆ 3.38ರವರೆಗೆ ತೆರವು ಕಾರ್ಯ ಮುಂದುವರಿದಿತ್ತು. ಈಗ ಯಾವುದೇ ಪ್ರಯಾಣಿಕರು ಮಾರ್ಗಮಧ್ಯದಲ್ಲಿಲ್ಲ. ಇಲ್ಲಿಯವರೆಗೆ ಸುಮಾರು 15,000 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ವೈದ್ಯರೊಂದಿಗೆ ಅಲ್ಲಿದ್ದ ಬಿಎಸ್‌ಎಫ್ ವೈದ್ಯರು ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸೆ ಮತ್ತು ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ನೀಡಿದ್ದಾರೆ.
ಸಹಾಯವಾಣಿ ನಂಬರ್‌ಗಳು
ಎನ್‌ಡಿಆರ್‌ಎಫ್: 011-23438252, 011-23438253
ಕಾಶ್ಮೀರ ವಿಭಾಗೀಯ ಸಹಾಯವಾಣಿ: 0194-2496240
ದೇವಳ ಮಂಡಳಿಯ ಸಹಾಯವಾಣಿ: 0194-2313149
ರಕ್ಷಣಾ ಕಾರ್ಯಾಚರಣೆಯ ಮಾಹಿತಿ
* ಈವರೆಗೂ 15 ಮಂದಿ ಮೃತಪಟ್ಟಿದ್ದು, ಇದರಲ್ಲಿ 7 ಮಹಿಳೆಯರು, 2 ಪುರುಷರು, ಮೂವರ ಮಾಹಿತಿ ಲಭ್ಯವಾಗಬೇಕಿದೆ.
* ಒಟ್ಟಾರೆ 65 ಮಂದಿ ಗಾಯಗೊಂಡಿದ್ದು, ಕಲ್ಲಿನ ಆಳದಿಂದ ಗಾಯಗೊಂಡ ಇಬ್ಬರನ್ನು ರಕ್ಷಣೆ ಮಾಡಲಾಗಿದೆ.
* ಗಾಯಗೊಂಡ 11 ಮಂದಿಯನ್ನು ಸೇನಾ ಹೆಲಿಕಾಪ್ಟರ್‌ಗಳ ಮೂಲಕ ಪವಿತ್ರ ಗುಹೆಯಿಂದ ನೀಲಗರ್ ಹೆಲಿಪ್ಯಾಡ್‌ಗೆ ರವಾನಿಸಲಾಗಿದೆ. ಅವಶೇಷಗಳನ್ನು ತೆರವುಗೊಳಿಸಲು ಮತ್ತು ನಾಪತ್ತೆಯಾದವರ ಹುಡುಕಾಟಕ್ಕೆ ಪ್ರಯತ್ನಿಸಲಾಗುತ್ತಿದೆ.
* ವಾತಾವರಣ ಪ್ರಸ್ತುತ ತಿಳಿಯಾಗಿದ್ದು, ಎರಡು ಹೆಲಿಕಾಪ್ಟರ್‌ಗಳು ಪವಿತ್ರ ಗುಹೆಯ ಬಳಿ ಇಳಿಯಲು ಯಶಸ್ವಿಯಾಗಿದೆ. ಹಾಗಿದ್ದರೂ ಬೆಳಗ್ಗೆ ಗುಹೆಯ ಬಳಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
* 2 ಶ್ವಾನದಳ, ವಾಲ್ ರಾಡಾರ್ ಮತ್ತು ಇತರ ವಿಶೇಷ ದಳಗಳು ಪವಿತ್ರ ಗುಹೆಯನ್ನು ತಲುಪಿವೆ.
*ಗಾಯಗೊಂಡವರು ಮತ್ತು ರೋಗಿಗಳಿಗಾಗಿ ಸೇನಾ ವೈದ್ಯಕೀಯ ತಂಡವು ನೀಲಗಾರರ್ ಹೆಲಿಪ್ಯಾಡ್‌ನಲ್ಲಿದೆ.
* ಜಾರುತ್ತಿರುವ ರಸ್ತೆಯಿಂದಾಗಿ ಪವಿತ್ರ ಗುಹೆಗೆ ಹೋಗುವ ಕಣಿವೆಯಲ್ಲಿ ಚಲನೆ ಕಡಿಮೆಯಾಗಿದೆ. ನಡೆದುಕೊಂಡು ಅಮರನಾಥ ಗುಹೆಗೆ ಹೋಗುವುದನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.