ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಲು ಭಾರತ ಸಜ್ಜಾಗಿದೆ. ಹಮಾಸ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ನಡೆಸಿದ ದಾಳಿ ರೀತಿಯಲ್ಲೇ ಭಾರತ ಪಾಕಿಸ್ತಾನ ಉಗ್ರರ ಮೇಲೆ ದಾಳಿಗೆ ಸಜ್ಜಾಗುತ್ತಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ 42 ಉಗ್ರರ ಲಾಂಚ್ ಪ್ಯಾಡ್ ಗುರುತಿಸಿರುವ ಭಾರತೀಯ ಸೇನೆ, ದಾಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ನವದೆಹಲಿ(ಏ.24) ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಲು ಭಾರತ ಸಜ್ಜಾಗುತ್ತಿದೆ. ಈಗಾಗಲೇ ಕೆಲ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಸಿಂಧೂ ನದಿ ಜಲ ಒಪ್ಪಂದ, ವಾಘ ಗಡಿ ಸ್ಥಗಿತ ಸೇರಿದಂತೆ ಕೆಲ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇದರ ಬೆನ್ನಲ್ಲೇ ಭಾರತೀಯ ಸೇನೆ ಇದೀಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ದಾಳಿಗೆ ಸಜ್ಜಾಗಿದೆ ಅನ್ನೋ ಮಾಹಿತಿಗಳು ಬಹಿರಂಗವಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸಕ್ರಿಯವಾಗಿರುವ 42 ಉಗ್ರರ ಕ್ಯಾಂಪ್, ಲಾಂಚ್ ಪ್ಯಾಡ್ ಧ್ವಂಸಗೊಳಿಸಲು ಭಾರತ ಮುಂದಾಗಿದೆ.
ಸೇನೆ ಪತ್ತೆ ಹಚ್ಚಿದೆ 42 ಉಗ್ರರ ಕ್ಯಾಂಪ್
ಕಳೆದ ಕೆಲ ತಿಂಗಳುಗಳಿಂದ ಭಾರತೀಯ ಗುಪ್ತಚರ ಇಲಾಖೆ ಭಾರತದ ಗಡಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ತೀವ್ರ ನಿಘಾ ಇಟ್ಟಿದೆ. ಈ ವೇಳೆ 42 ಲಾಂಚ್ ಪ್ಯಾಡ್ ಹಾಗೂ ಉಗ್ರ ತರಬೇತಿ ಕೇಂದ್ರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದೆ. ಈ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಭಾರತೀಯ ಸೇನೆ ಮಾಹಿತಿ ಹಂಚಿಕೊಂಡಿದೆ. ಇದೇ ಲಾಂಚ್ ಪ್ಯಾಡ್, ತರಬೇತಿ ಕೇಂದ್ರಗಳಿಂದಲೇ ಉಗ್ರರು ಭಾರತದೊಳಕ್ಕೆ ನುಸುಳುತ್ತಿದ್ದಾರೆ ಅನ್ನೋ ಮಾಹಿತಿಯನ್ನು ಇಲಾಖೆ ಕಲೆ ಹಾಕಿದೆ.
ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ, ಭಾರತದ ಕ್ರಮದಿಂದ ಕರಾಚಿ ಷೇರುಮಾರುಕಟ್ಟೆ ಭಾರಿ ಕುಸಿತ
200 ತರಬೇತಿ ಪಡೆದ ಉಗ್ರರು ಟಾರ್ಗೆಟ್
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಗುರುತಿಸಿರುವ 42 ಉಗ್ರರ ಕ್ಯಾಂಪ್‌ಗಳಲ್ಲಿ 150 ರಿಂದ 200 ತರಬೇತಿ ಪಡೆದ ಉಗ್ರರಿದ್ದಾರೆ. ಇವರಿಗೆ ಪಾಕಿಸ್ತಾನ ಸೇನೆಯ ಬೆಂಬಲವಿದೆ. ಹೀಗಾಗಿ ಗಡಿಯಲ್ಲಿ ಯಾವುದೇ ಸಮಸ್ಯೆ ಇಲ್ಲದ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಹಿಜ್ಬುಲ್ ಮುಜಾಹಿದ್ದೀನ್, ಜೈಶ್ ಇ ಮೊಹಮ್ಮದ್, ಲಷ್ಕರ್ ಇ ತೈಬಾ ಸೇರಿದಂತೆ ಕೆಲ ಉಗ್ರ ಸಂಘಟನೆಗಳ 100ಕ್ಕೂ ಹೆಚ್ಚು ಭಯೋತ್ಪಾದಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಸ್ಥಳೀಯ ಅಂದರೆ ಕಾಶ್ಮೀರದ 17ಕ್ಕೂ ಹಚ್ಚು ಉಗ್ರರು ಸಕ್ರಿಯವಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಹಮಾಸ್ ರೀತಿ ಪಹಲ್ಗಾಮ್ ದಾಳಿ
ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿ ರೀತಿಯಲ್ಲೇ ಇದೀಗ ಭಾರತದ ಪಹಲ್ಗಾಮ್ ಮೇಲೆ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಹಮಾಸ್ ಉಗ್ರ ದಾಳಿಗೆ ಇಸ್ರೇಲ್ ಈಗಲೂ ಪ್ರತಿಕಾರ ತೀರಿಸುತ್ತಿದೆ. ಇದೀಗ ಭಾರತ ಇದೇ ರೀತಿ ದಾಳಿ ನಡೆಸುತ್ತಾ? ಇದೇ ರೀತಿ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಡುತ್ತಾ ಅನ್ನೋ ಪ್ರಶ್ನೆ, ಚರ್ಚೆ ಶುರುವಾಗಿದೆ.
ಪಹಲ್ಗಾಮ್ ದಾಳಿ
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ. ಪ್ರವಾಸಿಗರ ಸ್ವರ್ಗ ಎಂದೇ ಕರೆಯಿಸಿಕೊಳ್ಳುವ ಪಹಲ್ಗಾಮ್ ಬಳಿ ಉಗ್ರರು ದಾಳಿ ನಡೆಸಿದ್ದಾರೆ. ಪ್ರವಾಸಿಗರ ಮೇಲೆ ಈ ದಾಳಿ ನಡೆಸಲಾಗಿದೆ. ಹಲವು ರಾಜ್ಯಗಳು, ನೇಪಾಳ ಸೇರಿದೆಂತೆ ವಿದೇಶದಿಂದ ಪ್ರವಾಸಕ್ಕೆ ಆಗಮಿಸಿದವರ ಮೇಲೆ ದಾಳಿ ನಡೆದಿದೆ. ಇದು ಪೂರ್ವನಿಯೋಜಿತ ದಾಳಿಯಾಗಿದೆ. ಹಿಂದೂಗಳು ಗುರಿಯಾಗಿಸಿ ನಡೆದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ.
ಸಿನಿಮಾ ಬಹಿಷ್ಕಾರ ಭೀತಿ ಬೆನ್ನಲ್ಲೇ ಪಹಲ್ಗಾಮ್ ದಾಳಿ ಖಂಡಿಸಿದ ಪಾಕ್ ನಟ ಫಾವದ್ ಖಾನ್
