ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಎನ್‌ಕೌಂಟರ್‌ನಿಂದ ಸ್ಥಳೀಯರೇ ಉಗ್ರರಿಗೆ ಮಣೆ ಹಾಕ್ತಿದ್ದಾರೆ ಎಂಬ ಸಂಶಯ ಮೂಡಿದೆ. ಮನೆಯೊಂದರ ವಾರ್ಡ್‌ರೋಬ್‌ನ ಹಿಂಬದಿಯೇ ಮಾಡಿದ್ದ ಬಂಕರ್‌ನಲ್ಲಿ ಇಲ್ಲಿ ಉಗ್ರರು ಅಡಗಿದ್ದರು ಎಂಬ ವಿಚಾರ ದಿಗ್ಭ್ರಮೆ ಮೂಡಿಸಿದೆ. ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. 

ಶ್ರೀನಗರ: ಜಮ್ಮು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ಶನಿವಾರ ರಾತ್ರಿ ನಡೆದ ಎನ್ಕೌಂಟರ್‌ ಸ್ಥಳದಲ್ಲಿ ಮತ್ತೆ ಇಬ್ಬರು ಉಗ್ರರ ಶವ ಪತ್ತೆಯಾಗಿದೆ. ಇದರೊಂದಿಗೆ ಯೋಧರಿಂದ ಹತರಾದ ಉಗ್ರರ ಸಂಖ್ಯೆ 6ಕ್ಕೆ ಏರಿಕೆ ಆಗಿದೆ. ಈ ಗುಂಡಿನ ಚಕಮಕಿ ವೇಳೆ ಇಬ್ಬರು ಯೋಧರು ಕೂಡ ಹುತಾತ್ಮರಾಗಿದ್ದಾರೆ. ಆದರೆ ಅಚ್ಚರಿಯ ವಿಚಾರ ಎಂದರೆ ಈ ಉಗ್ರರು ಚಿನ್ನಿಂಗಾಮ್‌ ಫ್ರಿಸಾಲ್ ಎಂಬ ಸ್ಥಳದಲ್ಲಿದ್ದ ಮನೆಯೊಂದರ ವಾರ್ಡ್‌ರೋಬ್‌ನ ಹಿಂಬದಿ ಮಾಡಿದ್ದ ಅಡಗುತಾಣವೊಂದರಲ್ಲಿ ಅಡಗಿದ್ದರು ಎಂಬುದು. ಈ ವಾರ್ಡ್‌ ರೋಬ್‌ನ ಹಿಂಬದಿ ಇದ್ದ ಅಡಗುತಾಣದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ದಿಗ್ಭ್ರಮೆ ಮೂಡಿಸಿದೆ. ಈ ಮೂಲಕ ಸ್ಥಳೀಯರೇ ಉಗ್ರರಿಗೆ ಮಣೆ ಹಾಕ್ತಿದ್ದಾರೆ ಎಂಬ ಸಂಶಯ ಮೂಡಿದ್ದು, ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 

ಇಲ್ಲಿ ಮನೆಯೊಂದರ ವಾರ್ಡ್‌ರೋಬ್ ಹಿಂಭಾಗದಲ್ಲಿಯೇ ಉಗ್ರರು ಅಡಗುವುದಕ್ಕಾಗಿಯೇ ಬಂಕರ್ ಅಥವಾ ಅಡಗುತಾಣವನ್ನು ನಿರ್ಮಿಸಲಾಗಿತ್ತು. ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಕಾಶ್ಮೀರದ ನಾಗರಿಕರೊಬ್ಬರಿಗೆ ಸೇರಿದ್ದ ಮನೆಯಲ್ಲಿ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸುವುದನ್ನು ಕಾಣಬಹುದಾಗಿದೆ. ಇದು ಸಣ್ಣದಾಗಿದ್ದರು, ಭದ್ರವಾಗಿರುವ ಕಾಂಕ್ರೀಟ್‌ನಿಂದ ನಿರ್ಮಿತವಾದ ಅಡಗುತಾಣವಾಗಿದೆ. ಮನೆಯೊಳಗೆ ಅಡಗಿದ್ದ ಈ ಉಗ್ರರ ಹೆಡೆಮುರಿ ಕಟ್ಟುವ ಕಾರ್ಯದ ವೇಳೆ ಇಬ್ಬರು ಯೋಧರು ಉಸಿರುಚೆಲ್ಲಿದ್ದಾರೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಒಟ್ಟು 6 ಹಿಜ್ಬುಲ್ ಉಗ್ರರನ್ನು ಸೇನೆ ಸದೆಬಡಿದಿದೆ. 

ಜಮ್ಮು ಕಾಶ್ಮೀರಲ್ಲಿ 3 ಭಯೋತ್ಪಾದಕರ ಹತ್ಯೆ ಮಾಡಿದ ಭಾರತೀಯ ಸೇನೆ!

ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ಜಮ್ಮು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಆರ್ ಆರ್ ಸ್ವೈನ್, ಇಷ್ಟೊಂದು ದೊಡ್ಡ ಸಂಖ್ಯೆಯ ಉಗ್ರರನ್ನು ಸದೆಬಡಿದಿರುವುದು ದೊಡ್ಡ ಸಾಧನೆ. ಈ ಕಾರ್ಯಾಚರಣೆ ವೇಳೆ ಒಬ್ಬ ಇಲೈಟ್ ಪ್ಯಾರಾ ಕಮಾಂಡೋ ಹಾಗೂ ಮತ್ತೋರ್ವ ಸೇನಾ ಯೋಧ ಸೇರಿ ಇಬ್ಬರು ಹುತಾತ್ಮರಾಗಿದ್ದಾರೆ ಎಂದು ಹೇಳಿದರು. 

ಈ ಹೋರಾಟದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಲ್ಯಾನ್ಸ್ ನಾಯ್ಕ್ ಪ್ರದೀಪ್ ಕುಮಾರ್ ಹಾಗೂ ಸಿಪಾಯಿ ಪ್ರವೀಣ್ ಜಂಜಲ್ ಪ್ರಭಾಕರ್ ಅವರಿಗೆ ಸೇನೆಯ ಚೀನಾರ್ ಕಾರ್ಪ್ ಕಮಾಂಡರ್, ಜಮ್ಮು ಕಾಶ್ಮೀರದ ಡಿಜಿಪಿ, ಜಮ್ಮು ಕಾಶ್ಮೀರದ ಮುಖ್ಯ ಕಾರ್ಯದರ್ಶಿ, ಹಾಗೂ ಎಲ್ಲಾ ಹಂತದ ಎಲ್ಲಾ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ. ಜೂನ್ 6 ರಂದು ನಡೆದ ಕುಲ್ಗಾಮ್ ಕಾರ್ಯಾಚರಣೆ ವೇಳೆ ಇವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಭಾರತೀಯ ಸೇನೆಯ ಚೀನಾರ್ ಕಾರ್ಪ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ. 

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ, ಸೇನಾಪಡೆಗಳ ಪೂರ್ಣ ನಿಯೋಜನೆಗೆ ಮೋದಿ ಸೂಚನೆ!

ಕುಲ್ಗಾಮ್‌ನಲ್ಲಿ ಒಟ್ಟು ಎರಡು ಎನ್‌ಕೌಂಟರ್‌ಗಳು ನಡೆದಿದ್ವು ಕುಲ್ಗಾಮ್‌ನ ಮಡೆರ್ಗಾಮ್‌ನಲ್ಲಿ ಒಬ್ಬರು ಯೋಧರು ಸಾವನ್ನಪಿದ್ದರೆ, ಕುಲ್ಗಾಮ್‌ನ ಛಿನ್ನಿಗಮ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 4 ಹಿಜ್ಬುಲ್ ಉಗ್ರರು ಮೃತಪಟ್ಟು ಸೇನಾ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಈ ಎಲ್ಲಾ ಉಗ್ರರು ಹಿಜ್ಬುಲ್ ಮುಜಾಹಿದ್ದೀನ್‌ಗೆ ಸೇರಿದವರಾಗಿದ್ದಾರೆ. ಅವರಲ್ಲೊಬ್ಬ ಸ್ಥಳೀಯನಾಗಿದ್ದಾನೆ. ಚಿನಿಗಾಮ್‌ನಲ್ಲಿ ಹತರಾದ ನಾಲ್ವರು ಉಗ್ರರನ್ನು ಯಾರ್ ಬಶೀರ್ ದಾರ್, ಜಾಹಿದ್ ಅಹ್ಮದ್ ದಾರ್, ತೌಹೀದ್ ಅಹ್ಮದ್ ರಾಥರ್ ಮತ್ತು ಶಕೀಲ್ ಅಹ್ಮದ್ ವಾನಿ ಎಂದು ಗುರುತಿಸಲಾಗಿದೆ. ಮದರ್ಗಾಮ್‌ನಲ್ಲಿ ಹತರಾದ ಇಬ್ಬರು ಭಯೋತ್ಪಾದಕರನ್ನು ಫೈಸಲ್ ಮತ್ತು ಆದಿಲ್ ಎಂದು ಗುರುತಿಸಲಾಗಿದೆ. 

ಒಟ್ಟಿನಲ್ಲಿ ಈ ಘಟನೆ ಕಾಶ್ಮೀರದ ಕೆಲ ನಿವಾಸಿಗಳೇ ಉಗ್ರರಿಗೆ ಆಶ್ರಯ ನೀಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. 

Scroll to load tweet…