ಬೆಂಗಳೂರು(ಫೆ.02): ಈ ಬಾರಿಯ ಏರೋ ಇಂಡಿಯಾ 2021ರ ಮೊದಲ ದಿನ ಐತಿಹಾಸಿಕ ಒಪ್ಪಂದಕ್ಕೆ ಸಹಿ ಬೀಳಲಿದೆ. ಇದೇ ಮೊದಲ ಬಾರಿಗೆ ಭಾರತೀಯ ವಾಯುಸೇನೆ ಬರೋಬ್ಬರಿ 48,000 ಕೋಟಿ ಮೊತ್ತದ ತೇಜಸ್ ಯುದ್ಧ ವಿಮಾನ ಖರೀದಿಗೆ ಹೆಚ್ಎಎಲ್ ಜೊತೆ ಒಪ್ಪಂದಕ್ಕೆ ಸಹಿ ಹಾಕಲಿದೆ. ಫೆಬ್ರವರಿ 3 ರಂದು IAF-HAL ಒಪ್ಪಂದಕ್ಕೆ ಸಹಿ ಹಾಕಲಿದೆ.

83 ತೇಜಸ್‌ ಯುದ್ಧ ವಿಮಾನ ಖರೀದಿ, ಬೆಂಗಳೂರಿನ HAL‌ಗೆ ಇದರ ಹೊಣೆ!.

83 ತೇಜಸ್ ಯುದ್ಧ ವಿಮಾನ ಖರೀದಿ ಒಪ್ಪಂದ ಇದಾಗಿದ್ದು, ಇದರಲ್ಲಿ 73 LCA ತೇಜಸ್ MK -1A ಹಾಗೂ 10 LCA ತೇಜಸ್  MK-1 ಯುದ್ಧ ವಿಮಾನಗಳಿವೆ. ಜನವರಿ 13ರಂದು ಕ್ಯಾಬಿನೆಟ್ ಈ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಇಷ್ಟೇ ಅಲ್ಲ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಈ ಒಪ್ಪಂದ ಹೊಸ ಅಧ್ಯಾಯ ಬರೆಯಲಿದೆ ಎಂದು  ಭಾರತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು.

1980 ಕಿ.ಮೀ ಪ್ರತಿ ಗಂಟೆಗೆ ಚಲಿಸುವ ಸಾಮರ್ಥ್ಯ ಹೊಂದಿರುವ ತೇಜಸ್ ಯುದ್ಧ ವಿಮಾನ, 13,500 ಕೆಜಿ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಶಕ್ತಿಯುತ ಎಂಜಿನ್ ಅಧಿಕ ಭಾರ ಹೊರುವ ಸಾಮರ್ಥ್ಯ, ಅತ್ಯಾಧುನಿಕ ಯುದ್ಧ ಕೌಶಲ್ಯ ವ್ಯವಸ್ಥೆ ಹೊಂದಿರುವ ಈ ತೇಜಸ್ ಯುದ್ಧ ವಿಮಾನಗಳು ಭಾರತೀಯ ರಕ್ಷಣಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ತರಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

2023ರಲ್ಲಿ ತೇಜಸ್ ಯುದ್ಧ ವಿಮಾನಗಳ ಟ್ರಯಲ್ ಆರಂಭಗೊಳ್ಳಲಿದೆ. ಇನ್ನು 2025ರಲ್ಲಿ ಉತ್ಪಾದನೆ ಆರಂಭಗೊಳ್ಳಲಿದೆ ಎಂದು ಹೆಚ್ಎಎಲ್ ತಿಳಿಸಿದೆ.