ಎಂಟು ವರ್ಷಗಳ ಬಳಿಕ ಪತ್ತೆಯಾದ ಭಾರತೀಯ ವಾಯುಸೇನೆ ವಿಮಾನದ ಅವಶೇಷ!
ಎಂಟು ವರ್ಷಗಳ ಹಿಂದೆ ಬಂಗಾಳ ಕೊಲ್ಲಿಯಲ್ಲಿ ನಾಪತ್ತೆಯಾಗಿದ್ದ ಭಾರತೀಯ ವಾಯುಸೇನೆಯ ವಿಮಾನದ ಅವಶೇಷ ಕೊನೆಗೂ ಪತ್ತೆಯಾಗಿದೆ. ಚೆನ್ನೈ ಕರಾವಳಿಯಿಂದ 310 ಕಿಲೋಮೀಟರ್ ದೂರದಲ್ಲಿ 3.4 ಕಿಲೋಮೀಟರ್ ಆಳದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದೆ.
ನವದೆಹಲಿ (ಜ.12): ಎಂಟು ವರ್ಷಗಳ ಹಿಂದೆ 29 ಸಿಬ್ಬಂದಿಗಳನ್ನು ಹೊತ್ತು ಅಚ್ಚರಿಯ ರೀತಿಯಲ್ಲಿ ನಾಪತ್ತೆಯಾಗಿದ್ದ ಭಾರತೀಯ ವಾಯುಸೇನೆಯ ಟ್ರಾನ್ಸ್‌ಪೋರ್ಟ್ ವಿಮಾನದ ಅವಶೇಷಗಳು ಕೊನೆಗೂ ಪತ್ತೆಯಾಗಿದೆ. 2016ರ ಜುಲೈ 22 ರಂದು ಈ ವಿಮಾನ ಬಂಗಾಳ ಕೊಲ್ಲಿಯಲ್ಲಿ ಅಚ್ಚರಿಯ ರೀತಿಯಲ್ಲಿ ನಾಪತ್ತೆಯಾಗಿತ್ತು. ಅಂದಾಜು 8 ವರಷ್ಳ ಬಳಿಕ ಚೆನ್ನೈ ಕರಾವಳಿಯಿಂದ 310 ಕಿಲೋಮೀಟರ್ ದೂರದಲ್ಲಿ 3.4 ಕಿಲೋಮೀಟರ್ ಆಳದಲ್ಲಿ ಈ ವಿಮಾನದ ಅವಶೇಷಗಳು ಪತ್ತೆಯಾಗಿದೆ. 2016ರ ಜುಲೈ 22ರ ಬೆಳಗ್ಗೆ ಭಾರತೀಯ ವಾಯುಸೇನೆಯ ಆಂಟೋನೋವ್ ಎನ್ 32 ಕೆ 2743 ವಿಮಾನ ಚೆನ್ನೈನ ತಾಂಬರಂ ಏರ್‌ಫೋರ್ಸ್ ಸ್ಟೇಷನ್‌ನಿಂದ ಹಾರಾಟ ಆರಂಭಿಸಿತ್ತು. ವಿಮಾನದ ಸಿಬ್ಬಂದಿಯೊಂದಿಗೆ ಒಟ್ಟು 29 ಮಂದಿ ಇದರಲ್ಲಿದ್ದರು. ಅಂಡಮಾನ್ ನಿಕೋಬಾರ್ ಐಸ್ಲೆಂಡ್‌ನ ಪೋರ್ಟ್‌ಬ್ಲೇರ್‌ಗೆ ಪ್ರತಿವಾರದಂತೆ ಈ ವಿಮಾನ ಟ್ರಿಪ್ ಆರಂಭಿಸಿತ್ತು. ಬೆಳಗ್ಗೆ 8 ಗಂಟೆಗೆ ಚೆನ್ನೈನಿಂದ ಹಾರಾಟ ಆರಂಭಿಸಿದ್ದ ವಿಮಾನ, ಪೋರ್ಟ್ ಬ್ಲೇರ್‌ನ ಭಾರತೀಯ ನೌಕಾಸೇನೆಯ ಏರ್ ಸ್ಟೇಷನ್ ಐಎನ್‌ಎಸ್ ಉತ್ಕೋರ್ಷ್‌ನಲ್ಲಿ ಲ್ಯಾಂಡ್ ಆಗಬೇಕಿತ್ತು.
ಆದರೆ, ವಿಮಾನ ಹಾರಾಟ ಆರಂಭವಾದ ಕೆಲವೇ ಹೊತ್ತಿನಲ್ಲಿ ಗ್ರೌಂಡ್ ಸ್ಟೇಷನ್‌ನೊಂದಿಗೆ ತನ್ನೆಲ್ಲಾ ಸಂಪರ್ಕವನ್ನು ಕಳೆದುಕೊಂಡಿತ್ತು. ಬಂಗಾಳಕೊಲ್ಲಿಯಲ್ಲಿ ವಿಮಾನ ಹಾರಾಟದ ವೇಳೆ ರಾಡಾರ್‌ನ ಸಂಪರ್ಕಕ್ಕೂ ಇದು ಸಿಕ್ಕಿರಲಿಲ್ಲ. ಅಂದಿನಿಂದ ಏರ್‌ಫೋರ್ಸ್, ನೌಕಾಸೇನೆ ಹಾಗೂ ಭಾರತೀಯ ಸರ್ಕಾರದ ಸಂಬಂಧಿತ ಇಲಾಖೆ ದೊಡ್ಡ ಪ್ರಮಾಣದ ಶೋಧ ಕಾರ್ಯ ನಡೆಸಿದರೂ ಈ ವಿಮಾನದ ಸಣ್ಣ ಮಾಹಿತಿ ಕೂಡ ಲಭ್ಯವಾಗಿರಲಿಲ್ಲ. ಸಮುದ್ರದಲ್ಲಿ ಕಾಣೆಯಾದ ವಿಮಾನಕ್ಕಾಗಿ ಭಾರತ ಈವರೆಗೂ ನಡೆಸಿರುವ ಅತಿದೊಡ್ಡ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಇದಾಗಿತ್ತು.
ನಾಪತ್ತೆಯಾಗಿದ್ದ AN-32 ವಿಮಾನದಲ್ಲಿದ್ದವರು ಮೃತಪಟ್ಟಿದ್ದಾರೆ: ವಾಯುಸೇನೆ
ಸಾಕಷ್ಟು ಹುಡುಕಾಟದ ಬಳಿಕ 2016ರ ಸೆಪ್ಟೆಂಬರ್ 15 ರಂದು ಭಾರತೀಯ ವಾಯುಸೇನೆ ತನ್ನ ಶೋಧ ಕಾರ್ಯವನ್ನು ವಿಫಲವಾಗಿದ್ದಾಗಿ ಘೋಷಿಸಿ ಕಾರ್ಯಚರಣೆ ಮುಕ್ತಾಯ ಮಾಡಿತ್ತು. ಅದರೊಂದಿಗೆ ವಿಮಾನದಲ್ಲಿದ್ದ ಎಲ್ಲಾ 29 ಕುಟುಂಬಗಳಿಗೆ ಪತ್ರ ಬರೆದ ಏರ್‌ಫೋರ್ಸ್, ನಾಪತ್ತೆಯಾಗಿರುವ ವಿಮಾನದ ಅವಶೇಷಗಳನ್ನು ಪತ್ತೆ ಮಾಡುವ ಎಲ್ಲಾ ಪ್ರಯತ್ನ ವಿಫಲವಾಗಿದೆ. ಹಾಗಾಗಿ ನಮ್ಮ ಮುಂದೆ ಯಾವುದೇ ಆಯ್ಕೆಗಳು ಇರದ ಕಾರಣ, ವಿಮಾನದಲ್ಲಿದ್ದ ಎಲ್ಲರೂ ಸತ್ತುಹೋಗಿರಬಹುದು ಎಂದು ಘೋಷಣೆ ಮಾಡುತ್ತಿರುವುದಾಗಿ ತಿಳಿಸಿತ್ತು.
13 ಜನರಿದ್ದ ಭಾರತೀಯ ವಾಯುಸೇನೆ ವಿಮಾನ ನಾಪತ್ತೆ