* ತುರ್ತು ಬಳಕೆಗೆ ಅನುಮತಿ ಕೋರಿದ ಝೈಡಸ್ ಲಸಿಕೆ* ಅನುಮತಿ ಸಿಕ್ಕರೆ 12ರಿಂದ 18 ವರ್ಷದ ಮಕ್ಕಳಿಗೂ ಲಭ್ಯ* ಗುಜರಾತ್‌ನ ಫಾರ್ಮಾ ಕಂಪನಿಯಿಂದ ಅಭಿವೃದ್ಧಿ* ಕೋವ್ಯಾಕ್ಸಿನ್ ನಂತರ ಇನ್ನೊಂದು ಅಪ್ಪಟ ದೇಸಿ ಲಸಿಕೆ* ಭಾರತಕ್ಕೆ ಶೀಘ್ರದಲ್ಲೇ ಸಿಗಲಿದೆಯೇ 4, 5ನೇ ಲಸಿಕೆ?
ನವದೆಹಲಿ(ಜು.02): ಗುಜರಾತ್‌ನ ಝೈಡಸ್ ಕ್ಯಾಡಿಲಾ ಫಾರ್ಮಾಸುಟಿಕಲ್ ಕಂಪನಿ ತನ್ನ ಜೈಕೋವ್-ಡಿ ಕೊರೋನಾ ಲಸಿಕೆಯ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ)ದ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಒಪ್ಪಿಗೆ ದೊರೆತರೆ ಶೀಘ್ರದಲ್ಲೇ ಭಾರತಕ್ಕೆ ಕೋವ್ಯಾಕ್ಸಿನ್ ನಂತರ ಮತ್ತೊಂದು ಅಪ್ಪಟ ದೇಸಿ ಲಸಿಕೆ ಸಿಕ್ಕಂತಾಗಲಿದೆ. ಜೊತೆಗೆ, ಮಕ್ಕಳ ಮೇಲೂ ಈ ಲಸಿಕೆಯ ಪ್ರಯೋಗ ಕರ್ನಾಟಕ ಸೇರಿದಂತೆ ಅನೇಕ ಕಡೆ ನಡೆಯುತ್ತಿದ್ದು, ಡಿಸಿಜಿಐನ ಅನುಮತಿ ಸಿಕ್ಕಿರೆ ದೇಶದಲ್ಲಿ 12ರಿಂದ 18 ವರ್ಷದ ಮಕ್ಕಳಿಗೆ ನೀಡುವ ಮೊದಲ ಲಸಿಕೆ ಇದಾಗಲಿದೆ.
ಜೈಕೋವ್-ಡಿ ಲಸಿಕೆಯ ಪ್ರಯೋಗ ಈಗಾಗಲೇ ಭಾರತದ 50ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಡೆಯುತ್ತಿದೆ. ಇದು ಭಾರತದಲ್ಲಿ ಈವರೆಗೆ ನಡೆದ ಕೊರೋನಾ ಲಸಿಕೆಯೊಂದರ ಅತಿದೊಡ್ಡ ಕ್ಲಿನಿಕಲ್ ಪ್ರಯೋಗವಾಗಿದೆ. ಈ ಪ್ರಯೋಗದ ಅಂಕಿಅಂಶಗಳೊಂದಿಗೆ ತುರ್ತು ಅನುಮತಿಗೆ ಝೈಡಸ್ ಕ್ಯಾಡಿಲಾ ಕಂಪನಿ ಅರ್ಜಿ ಸಲ್ಲಿಸಿದೆ. ಭಾರತದಲ್ಲಿ ಈಗಾಗಲೇ ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ ಲಸಿಕೆಗಳನ್ನು ನೀಡಲಾಗುತ್ತಿದ್ದು, ಅಮೆರಿಕದ ಮಾಡೆರ್ನಾ ಲಸಿಕೆಯ ತುರ್ತು ಆಮದಿಗೂ ಅನುಮತಿ ದೊರೆತಿದೆ. ಜೈಕೋವ್ ಡಿ ಲಸಿಕೆ ನೀಡಿಕೆ ಆರಂಭವಾದರೆ ಇದು ಭಾರತದಲ್ಲಿ ವಿತರಣೆಯಾಗುವ 4 ಅಥವಾ 5ನೇ ಲಸಿಕೆಯಾಗಲಿದೆ.
ಜೈಕೋವ್-ಡಿ 3 ಡೋಸ್‌ನಲ್ಲಿ ನೀಡಬೇಕಾದ ಲಸಿಕೆಯಾಗಿದೆ. ಆದರೆ, ತಲಾ 3 ಎಂ.ಜಿ.ಯಂತೆ ಎರಡೇ ಡೋಸ್ ನೀಡುವ ಪ್ರಯೋಗವೂ ನಡೆದಿದೆ. ಅದರಿಂದಲೂ ಸಾಕಷ್ಟುಆ್ಯಂಟಿಬಾಡಿ ಉತ್ಪತ್ತಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಜಗತ್ತಿನ ಮೊದಲ ಪ್ಲಾಸ್ಮಿಡ್ ಡಿಎನ್‌ಎ ವ್ಯಾಕ್ಸಿನ್
ಸದ್ಯ ಜಗತ್ತಿನಲ್ಲಿ ಬಳಕೆಯಲ್ಲಿರುವ ಬೇರೆಲ್ಲಾ ಲಸಿಕೆಗಳ ತಂತ್ರಜ್ಞಾನಕ್ಕಿಂತ ಭಿನ್ನವಾದ ಪ್ಲಾಸ್ಮಿಡ್ ಡಿಎನ್‌ಎ ಎಂಬ ತಂತ್ರಜ್ಞಾನ ಬಳಸಿ ಜೈಕೋವ್-ಡಿ ಲಸಿಕೆ ತಯಾರಿಸಲಾಗಿದೆ. ಇದು ನೇರವಾಗಿ ಮನುಷ್ಯನ ಡಿಎನ್‌ಎ (ವಂಶವಾಹಿ) ಮೇಲೇ ಪರಿಣಾಮ ಬೀರಿ, ಅಲ್ಲಿಂದಲೇ ಹೆಚ್ಚು ರೋಗನಿರೋಧಕ ಶಕ್ತಿ ಉತ್ಪತ್ತಿಯಾಗುವಂತೆ ಮಾಡುತ್ತದೆ. ಮೇಲಾಗಿ ಈ ಲಸಿಕೆಯನ್ನು ಕಡಿಮೆ ಉಷ್ಣಾಂಶದಲ್ಲಿ ಶೇಖರಿಸುವ ಅಗತ್ಯವಿಲ್ಲ. 25 ಡಿಗ್ರಿ ಸೆಲ್ಸಿಯಸ್‌ನಲ್ಲೂ ಇಡಬಹುದಾಗಿದೆ. ಹೀಗಾಗಿ ಸಾಗಾಟ ಹಾಗೂ ದಾಸ್ತಾನಿಗೆ ಅನುಕೂಲವಾಗಲಿದೆ. ಕೋವ್ಯಾಕ್ಸಿನ್‌ನಂತೆ ಇದನ್ನು ಅತ್ಯಂತ ಸುರಕ್ಷಿತ ಪ್ರಯೋಗಾಲಯದಲ್ಲಿ ಉತ್ಪಾದನೆ ಮಾಡಬೇಕಿಲ್ಲ. ಬಿಎಸ್‌ಎಲ್-1 ಹಂತದ ಸಾಮಾನ್ಯ ಕಾರ್ಖಾನೆಗಳಲ್ಲೂ ಉತ್ಪಾದನೆ ಮಾಡಬಹುದಾಗಿದೆ.
ದಕ್ಷತೆ ಎಷ್ಟು?
ಕೊರೋನಾದ ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ ಇತ್ಯಾದಿಗಳು ಕಾಣಿಸಿಕೊಳ್ಳದಂತೆ ಶೇ.66.6ರಷ್ಟುಹಾಗೂ ಮಧ್ಯಮ ತೀವ್ರತೆಯ ಸೋಂಕು ಬಾರದಂತೆ ಶೇ.100ರಷ್ಟುಈ ಲಸಿಕೆ ರಕ್ಷಣೆ ನೀಡುತ್ತದೆ ಎಂದು ಝೈಡಸ್ ಕ್ಯಾಡಿಲಾ ಕಂಪನಿ ಹೇಳಿಕೊಂಡಿದೆ.
