ದೇಶದಲ್ಲಿ 23000 ಕೇಸ್‌: 78 ದಿನದ ಗರಿಷ್ಠ!| ಮತ್ತೆ ಕೊರೋನಾ ಅಬ್ಬರ, 117 ಮಂದಿ ಬಲಿ| ಆರೇ ದಿನದಲ್ಲಿ 1.16 ಲಕ್ಷ ಮಂದಿಗೆ ಸೋಂಕು

ನವದೆಹಲಿ(ಮಾ.13): ದೇಶದಲ್ಲಿ ಹೊಸ ಕೊರೋನಾ ಪ್ರಕರಣಗಳ ಏರಿಕೆ ಗತಿ ಮುಂದುವರೆದಿದ್ದು, ಶುಕ್ರವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ 23,285 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಕಳೆದ 78 ದಿನಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ. ದೇಶದಲ್ಲಿ ಪತ್ತೆಯಾದ ಹೊಸ ಕೇಸಿನಲ್ಲಿ ಶೇ.85ರಷ್ಟುಪಾಲು ಮಹಾರಾಷ್ಟ್ರ, ಕೇರಳ, ಪಂಜಾಬ್‌, ಕರ್ನಾಟಕ, ಗುಜರಾತ್‌ ಮತ್ತು ತಮಿಳುನಾಡು ರಾಜ್ಯಗಳದ್ದಾಗಿದೆ. ಈ ಪೈಕಿ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ಪಾಲೇ ಶೇ.71.69ರಷ್ಟಿದೆ.

ಇದೇ ವೇಳೆ ಗುರುವಾರ ಪತ್ತೆಯಾದ ಹೊಸ ಕೇಸುಗಳು ಸೇರಿದರೆ ಕಳೆದ 6 ದಿನದಲ್ಲಿ ದೇಶದಲ್ಲಿ 1.16 ಲಕ್ಷ ಪ್ರಕರಣಗಳು ದಾಖಲಾದಂತಾಗಿದೆ. ಜೊತೆಗೆ ಒಟ್ಟು ಸೋಂಕಿತರ ಸಂಖ್ಯೆ 1.13 ಕೋಟಿಗೆ ತಲುಪಿದೆ. ಮತ್ತೊಂದೆಡೆ ಸಕ್ರಿಯ ಸೋಂಕಿತರ ಪ್ರಮಾಣ 1.97 ಲಕ್ಷಕ್ಕೆ ಹೆಚ್ಚಳವಾಗಿದೆ. ಜೊತೆಗೆ ಚೇತರಿಕೆ ಪ್ರಮಾಣ ಶೇ.96.86ಕ್ಕೆ ಇಳಿಕೆಯಾಗಿದೆ.

ಇದೇ ವೇಳೆ ಗುರುವಾರ 117 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 1,58,306ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿ ಮತ್ತಷ್ಟು ನಿರ್ಬಂಧ

ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತಷ್ಟುನಿರ್ಬಂಧ ಜಾರಿಗೊಳಿಸಿದೆ. ಪುಣೆ, ಪರಭಣಿ, ಅಕೋಲಾದಲ್ಲಿ ಶುಕ್ರವಾರ ರಾತ್ರಿಯಿಂದಲೇ ರಾತ್ರಿ ಕಫä್ರ್ಯ ಹೇರಲಾಗಿದ್ದು, ಮಾ.31ರವರೆಗೆ ಜಾರಿಯಲ್ಲಿರಲಿದೆ. ಜಲಗಾಂವ್‌ನಲ್ಲಿ ಜನತಾ ಕಫä್ರ್ಯ ಆರಂಭವಾಗಿದ್ದು, ಮಾ.14ರವರೆಗೆ ಇರಲಿದೆ. ವಿವರ 9

ಮುಂಬೈನ 90% ಕೇಸ್‌ ಫ್ಲ್ಯಾಟ್‌ಗಳಲ್ಲಿ ಪತ್ತೆ!

ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಕಳೆದ ಎರಡು ತಿಂಗಳಿನಿಂದ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ವಿಶೇಷ ಎಂದರೆ, ಶೇ.90ರಷ್ಟುಪ್ರಕರಣಗಳು ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳಿಂದ ವರದಿಯಾಗುತ್ತಿವೆ. ಶೇ.10ರಷ್ಟುಪ್ರಕರಣ ಮಾತ್ರ ಕೊಳೆಗೇರಿ ಹಾಗೂ ವಠಾರದಲ್ಲಿ ಪತ್ತೆಯಾಗಿವೆ ಎಂದು ಮುಂಬೈ ಮಹಾನಗರ ಪಾಲಿಕೆ ಮಾಹಿತಿ ನೀಡಿದೆ. ವಿವರ 9

ಚುನಾವಣೆ, ಸಭೆಗಳಿಂದ ‘ಮಹಾ’ ಸೋಂಕು ಏರಿಕೆ

ಮಹಾರಾಷ್ಟ್ರದಲ್ಲಿ ಏಕಾಏಕಿ ಆತಂಕಕಾರಿ ಪ್ರಮಾಣದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವುದಕ್ಕೆ ಜನವರಿಯಲ್ಲಿ ಪ್ರಕಟವಾದ ಗ್ರಾಮ ಪಂಚಾಯತ್‌ ಚುನಾವಣೆಯ ಫಲಿತಾಂಶ, ರಾಜ್ಯದ ಹಲವೆಡೆ ನಡೆದ ರಾಜಕೀಯ ಸಭೆ ಮತ್ತು ಜನರ ನಿರ್ಲಕ್ಷ್ಯ ಪ್ರಮುಖ ಕಾರಣ ಎಂದು ತಜ್ಞರು ದೂರಿದ್ದಾರೆ. ಫಲಿತಾಂಶ ಪ್ರಕಟವಾದಾಗ ಹೆಚ್ಚಿನ ಜನರು ಒಂದೆ ಸೇರಿದ್ದರು. ಮಾಸ್ಕ್‌ ಧರಿಸಿರಲಿಲ್ಲ ಎಂದು ಹೇಳಿದ್ದಾರೆ. ವಿವರ 9