* 55.47 ಕೋಟಿಗೆ ಏರಿದ ಒಟ್ಟು ಲಸಿಕೆ ಪಡೆದವರ ಪ್ರಮಾಣ* ಒಂದೇ ದಿನ ವಿಶ್ವದಾಖಲೆಯ 88.13 ಲಕ್ಷ ಜನರಿಗೆ ಕೋವಿಡ್‌ ಲಸಿಕೆ

ನವದೆಹಲಿ(ಆ.18): ಕೋವಿಡ್‌ ಲಸಿಕೆ ವಿತರಣೆಯಲ್ಲಿ ಭಾರತ ಮತ್ತೊಂದು ವಿಶ್ವ ದಾಖಲೆ ಸ್ಥಾಪಿಸಿದೆ. ಆ.16ರಂದು ಒಂದೇ ದಿನ 88.13 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಎಲ್ಲಾ ವಯೋಮಾನದವರಿಗೂ ಲಸಿಕೆ ನೀಡಲು ಆರಂಭಿಸಿದ ಜೂ.21ರಂದು 85 ಲಕ್ಷ ಜನರಿಗೆ ಲಸಿಕೆ ನೀಡಿದ್ದೇ ಇದುವರೆಗಿನ ಗರಿಷ್ಠ ದಾಖಲೆಯಾಗಿತ್ತು. ಆ ದಾಖಲೆಯನ್ನು ಇದೀಗ ಮುರಿಯಲಾಗಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ, ‘ಭಾರತ ಒಂದೇ ದಿನದಲ್ಲಿ ಅತಿ ಹೆಚ್ಚು ಕೋವಿಡ್‌ ಲಸಿಕೆ ನೀಡಿದ ಸಾಧನೆ ಮಾಡಿದೆ. ವಿಶ್ವದಲ್ಲೇ ಅತಿ ಹೆಚ್ಚು ಲಸಿಕೆ ನೀಡಿರುವುದರಲ್ಲಿ ಇದು ಇತಿಹಾಸ ನಿರ್ಮಿಸಲಿದೆ. ಅಭಿನಂದನೆಗಳು ಎಂದಿದ್ದಾರೆ.

ಜೊತೆಗೆ ಇದುವರೆಗೆ ಒಟ್ಟಾರೆ 55.47 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. ಅಂದರೆ ಲಸಿಕೆ ಪಡೆಯಲು ಅರ್ಹರಾದವರ ಪೈಕಿ ಶೇ.45ಕ್ಕಿಂತ ಹೆಚ್ಚಿನ ಯುವಜನರು ಮೊದಲ ಡೋಸ್‌ ಮತ್ತು ಶೇ.13ರಷ್ಟು ಎರಡೂ ಲಸಿಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.