ನವದೆಹಲಿ(ನ.25): ಭಾರತ ಸರ್ಕಾರ ಮಂಗಳವಾರದಂದು ರಾಷ್ಟ್ರೀಯ ಭದ್ರತೆ ವಿಚಾರವಾಗಿ 43 ಆಪ್‌ಗಳ ಮೇಲೆ ನಿರ್ಬಂಧ ಹೇರಿದೆ. ಬ್ಯಾನ್‌ ಮಾಡಲಾದ ಈ ಆಪ್‌ಗಳಲ್ಲಿ ಹೆಚ್ಚಿನವು ಚೀನಾದ್ದಾಗಿವೆ. ಆದರೀಗ ಭಾರತ ಸರ್ಕಾರದ ಈ ಹೆಜ್ಜೆಯಿಂದ ಚೀನಾ ತತ್ತರಿಸಿದೆ. 

ಬುಧವಾರದಂದು ಭಾರತದ ಈ ನಡೆ ಬಗ್ಗೆ ಟ್ವೀಟ್ ಮಾಡಿರುವ ಚೀನಾ ತಾನು ಭಾರತ ಸರ್ಕಾರ ವಿಧಿಸಿರುವ ಈ ನಿಷೇಧವನ್ನು ಸಂಪೂರ್ಣವಾಗಿ ವಿರೀಧಿಸುತ್ತೇನೆ ಎಂದಿದೆ. ಅಲ್ಲದೇ ಭಾರತ ತನ್ನ ಆಪ್‌ಗಳನ್ನು ಬ್ಯಾನ್ ಮಾಡಲು ಪದೇ ಪದೇ ರಾಷ್ಟ್ರೀಯ ಭದ್ರತೆಯ ನೆಪ ನೀಡುತ್ತಿದೆ ಎಂದಿದೆ. 

ಭಾರತದಲ್ಲಿ ಆಲಿಬಾಬ, ಮ್ಯಾಂಗೋ ಟಿವಿ ಸೇರಿದಂತೆ 43 ಮೊಬೈಲ್ ಆ್ಯಪ್ ಬ್ಯಾನ್!

ದೇಶದ ಸಾರ್ವಭೌಮತೆ, ಏಕತೆ ಹಾಗೂ ಭದ್ರತೆಗೆ ಅಪಾಯ ತರುತ್ತಿವೆ ಎಂಬ ಕಾರಣ ನೀಡಿ ಈ 43 ಆ್ಯಪ್‌ಗಳನ್ನು ನಿಷೇಧಿಸಿದ್ದಾಗಿ ಸರ್ಕಾರ ಹೇಳಿಕೊಂಡಿದೆ. ನಿಷೇಧಕ್ಕೆ ಒಳಗಾದ ಆ್ಯಪ್‌ಗಳಲ್ಲಿ ಇ ಕಾಮರ್ಸ್‌ ದೈತ್ಯ ಅಲಿಬಾಬಾದ ವರ್ಕ್ಬೆಂಚ್‌, ಅಲಿ ಎಕ್ಸ್‌ಪ್ರೆಸ್‌, ಅಲಿಪೇ ಕ್ಯಾಷಿಯರ್‌, ಕ್ಯಾಮ್‌ಕಾರ್ಡ್‌, ವಿ-ಡೇಟ್‌ ಸೇರಿದಂತೆ ಕೆಲವು ಜನಪ್ರಿಯ ಆ್ಯಪ್‌ಗಳೂ ಸೇರಿವೆ. ಅಲ್ಲದೆ ಕೆಲ ಡೇಟಿಂಗ್‌ ಆ್ಯಪ್‌ಗಳು ಕೂಡಾ ಸೇರಿವೆ.

ಚೀನಾ ವಕ್ತಾರ ಜಿ ರೋಂಗ್ ಈ ಆರೋಪ ಮಾಡುತ್ತಾ 'ಭಾರತ ಪದೇ ಪದೇ ರಾಷ್ಟ್ರೀಯ ಭದ್ರತೆ ನೆಪವನ್ನಿಟ್ಟುಕೊಂಡು ಚೀನಾ ಒಡೆತನದ ಆಪ್‌ಗಳನ್ನು ಬ್ಯಾನ್ ಮಾಡುತ್ತಿದೆ. ಚೀನಾ ಇದನ್ನು ವಿರೋಧಿಸುತ್ತದೆ. ಭಾರತ ಎಲ್ಲಾ ಕಂಪನಿಗಳ ಪರ ನಿಷ್ಪಕ್ಷಪಾತ ಹಾಗೂ ಬೇಧ ಭಾವವಿಲ್ಲದೇ ಉದ್ಯಮ ನಡೆಸಲು ಅವಕಾಶ ನೀಡುತ್ತದೆ ಎಂಬ ಭರವಸೆ ನಮ್ಮದು. ಅಲ್ಲದೇ ಬೇಧ ಭಾವವಿಲ್ಲದೇ ಈ ಕ್ರಮಗಳಲ್ಲಿ ಸುಧಾರಣೆ ತರುತ್ತದೆ ಎಂಬ ವಿಶ್ವಾಸವಿದೆ' ಎಂದಿದ್ದಾರೆ.

ಮೂರನೇ ಬಾರಿ ಆಪ್ ಬ್ಯಾನ್: 

ಭಾರತ ಸರ್ಕಾರ ಚೀನಾ ಆ್ಯಪ್‌ಗಳ ಮೇಲೆ ನಿಷೇಧ ಹೇರುತ್ತಿರುವ ಮೂರನೇ ಪ್ರಕರಣ ಇದಾಗಿದೆ. ಈ ಹಿಂದೆ ಜೂನ್‌ 29 ಹಾಗೂ ಸೆ.2ರಂದು ಕ್ರಮವಾಗಿ ಸರ್ಕಾರ 59 ಹಾಗೂ 118 ಚೀನಾ ಸಂಬಂಧೀ ಆ್ಯಪ್‌ಗಳನ್ನು ಸರ್ಕಾರ ನಿಷೇಧಿಸಿತ್ತು. ಈಗ 43 ಆ್ಯಪ್‌ ನಿಷೇಧದೊಂದಿಗೆ ಈವರೆಗೆ ನಿಷೇಧಿತ ಚೀನಾ ಆ್ಯಪ್‌ಗಳ ಸಂಖ್ಯೆ 220ಕ್ಕೆ ಏರಿದಂತಾಗಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಮಾಹಿತಿ ತಂತ್ರಜ್ಞಾನ ಸಚಿವಾಲಯ, ‘43 ಮೊಬೈಲ್‌ ಆ್ಯಪ್‌ಗಳನ್ನು ಮಾಹಿತಿ ತಂತ್ರಜ್ಞಾನ ಕಯ್ದೆ 69ಎ ಅಡಿ ನಿರ್ಬಂಧಿಸಲಾಗಿದೆ. ಈ ಆ್ಯಪ್‌ಗಳು ದೇಶದ ಸಾರ್ವಭೌಮತೆ, ಭದ್ರತೆ, ಏಕತೆಗೆ ಧಕ್ಕೆ ತರುತ್ತಿವೆ ಎಂಬ ಮಾಹಿತಿ ಲಭಿಸಿತ್ತು’ ಎಂದು ಹೇಳಿದೆ.