ಅಮೆರಿಕ ಜತೆ ನಡೆಯುತ್ತಿರುವ ವ್ಯಾಪಾರ ಒಪ್ಪಂದ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ. ಟ್ರಂಪ್‌ ಮುಂದೆ ಪ್ರಧಾನಿ ಮೋದಿ ತಮ್ಮ ತಲೆ ತಗ್ಗಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ನವದೆಹಲಿ: ಅಮೆರಿಕ ಜತೆ ನಡೆಯುತ್ತಿರುವ ವ್ಯಾಪಾರ ಒಪ್ಪಂದ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ. ಟ್ರಂಪ್‌ ಮುಂದೆ ಪ್ರಧಾನಿ ಮೋದಿ ತಮ್ಮ ತಲೆ ತಗ್ಗಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಬೇರೆಯವರು ನೀಡಿದ ಡೆಡ್‌ಲೈನ್‌ಗಳ ಅಡಿ ನಾವು ಯಾವುದೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಭಾರತದ ಹಿತಾಸಕ್ತಿ ರಕ್ಷಣೆಯಾದರೆ ಮಾತ್ರ ಭಾರತವು ಅಮೆರಿಕ ಜತೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದೆ ಎಂದು ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಹೇಳಿಕೊಂಡಿದ್ದರು.

ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಶನಿವಾರ ಪ್ರತಿಕ್ರಿಯಿ ನೀಡಿರುವ ರಾಹುಲ್‌ ಗಾಂಧಿ, ಟ್ರೇಡ್‌ಡೀಲ್‌ ವಿಚಾರದಲ್ಲಿ ಗೋಯಲ್‌ ಅವರು ಏನೇ ಹೇಳಿದರೂ ಅಂತಿಮವಾಗಿ ಟ್ರಂಪ್‌ ವಿಧಿಸಿರುವ ಗಡುವಿಗೆ ಮೋದಿ ಅವರು ತಲೆಬಾಗುವುದು ನಿಶ್ಚಿತ ಎಂದಿದ್ದಾರೆ. ಟ್ರಂಪ್‌ ಅವರು ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದಕ್ಕೆ ಜು.9ರ ಡೆಡ್‌ಲೈನ್‌ ನಿಗದಿಪಡಿಸಿದ್ದಾರೆ.

ಟ್ರೇಡ್‌ ಡೀಲ್ ವಿಚಾರದಲ್ಲಿ ರಾಷ್ಟ್ರೀಯ ಹಿತಾಸಕ್ತಿಯೇ ಪರಮೋಚ್ಚ. ಎರಡೂ ದೇಶಗಳಿಗೆ ಲಾಭವಾದಾಗ ಮಾತ್ರ ಮುಕ್ತ ವ್ಯಾಪಾರ ಒಪ್ಪಂದಗಳಿಂದ ಅನುಕೂಲ ಆಗಲಿದೆ ಎಂದು ಅವರು ಗೋಯಲ್‌ ಹೇಳಿಕೊಂಡಿದ್ದಾರೆ.

ಶೀಘ್ರವೇ ಭಾರತದೊಂದಿಗೆ ಅತಿದೊಡ್ಡ ವ್ಯಾಪಾರ ಒಪ್ಪಂದ

ವಾಷಿಂಗ್ಟನ್‌: ಪ್ರತಿ ತೆರಿಗೆ ಮೂಲಕ ವಿಶ್ವದ ಬಹುತೇಕ ದೇಶಗಳನ್ನು ಬೆದರಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ನಾವು ಶೀಘ್ರವೇ ಭಾರತದೊಂದಿಗೆ ಅತಿದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ಘೋಷಿಸಿದ್ದಾರೆ. ಈ ಮೂಲಕ ಉಭಯ ದೇಶಗಳು ಶೀಘ್ರವೇ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಸುಳಿವು ನೀಡಿದ್ದಾರೆ.

ಶ್ವೇತಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್‌, ‘ನಾವು ಈಗಾಗಲೇ ಹಲವು ಅದ್ಭುತ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಶೀಘ್ರವೇ ಇನ್ನೊಂದು ಒಪ್ಪಂದ ಆಗಲಿಕ್ಕಿದೆ, ಬಹುಷ ಅದು ಭಾರತದ ಜೊತೆಗೆ ಆಗಿರಲಿದೆ. ನಾವು ಭಾರತದೊಂದಿಗೆ ಅತಿದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಭಾರತವನ್ನು ನಾವು ಇನ್ನಷ್ಟು ಮುಕ್ತಗೊಳಿಸಲಿದ್ದೇವೆ’ ಎಂದು ಹೇಳಿದ್ದಾರೆ.

ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದ ಕುರಿತು ಮುಂದಿನ ಹಂತದ ಮಾತುಕತೆಗಾಗಿ ವಾಣಿಜ್ಯ ಸಚಿವಾಲಯ ವಿಶೇಷ ಕಾರ್ಯದರ್ಶಿ ರಾಜೇಶ್‌ ಅಗರ್‌ವಾಲ್‌ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಗುರುವಾರ ಅಮೆರಿಕಕ್ಕೆ ಬಂದಿಳಿದಿದೆ. ಅದರ ಬೆನ್ನಲ್ಲೇ ಟ್ರಂಪ್‌ ಈ ಮಹತ್ವದ ಹೇಳಿಕೆ ನೀಡಿದ್ದಾರೆ. ಭಾರತ ಮತ್ತು ಅಮೆರಿಕ ಜು.9ರೊಳಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆ.

 ಕೆಲ ತಿಂಗಳ ಹಿಂದೆ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳ ಮೇಲೆ ಟ್ರಂಪ್‌ ಭಾರೀ ಪ್ರಮಾಣದ ಪ್ರತಿ ತೆರಿಗೆ ಹೇರಿದ್ದರು. ಆದರೆ ಬಳಿಕ ವ್ಯಾಪಾರ ಒಪ್ಪಂದ ಕುದುರಿಸುವ ನಿಟ್ಟಿನಲ್ಲಿ ಈ ಪ್ರತಿತೆರಿಗೆಗೆ ಏ.2ರಂದು ತಡೆ ನೀಡಲಾಗಿತ್ತು. ಬಳಿಕ ಎರಡೂ ದೇಶಗಳು ಮಾತಕತೆ ತ್ವರಿತಗೊಳಿಸುವ ಮೂಲಕ ಒಪ್ಪಂದಕ್ಕೆ ಸಹಿ ಹಾಕುವತ್ತ ಹೆಜ್ಜೆ ಹಾಕಿದ್ದವು.

ಸದ್ಯ ಕೃಷಿ ಮತ್ತು ಡೈರಿ ಉತ್ಪನ್ನ ವಿಷಯಗಳು ಎರಡೂ ದೇಶಗಳ ನಡುವಿನ ಒಪ್ಪಂದಕ್ಕೆ ದೊಡ್ಡ ಅಡ್ಡಿಯಾಗಿ ಹೊರಹೊಮ್ಮಿದೆ. ವ್ಯಾಪಾರ ಒಪ್ಪಂದವು, ಪರಸ್ಪರ ದೇಶಗಳ ನಡುವೆ ಮಾಡಿಕೊಳ್ಳುವ ವ್ಯಾಪಾರ ಸಂಬಂಧಿ ಒಪ್ಪಂದ. ಅಂದರೆ ಯಾವ ಉತ್ಪನ್ನಗಳಿಗೆ ಯಾವ ದೇಶ ಎಷ್ಟು ತೆರಿಗೆ ಹಾಕಬಹುದು ಎಂಬುದು ಇದರ ಮೂಲ ಅಂಶ.