* ಒಮಿಕ್ರೋನ್‌ ಹೆಚ್ಚಳ ಬೆನ್ನಲ್ಲೇ ನಿರುದ್ಯೋಗ ಪ್ರಮಾಣ ಏರಿಕೆ* ನಿರುದ್ಯೋಗ ದರ ಶೇ.7.9ಕ್ಕೇರಿಕೆ: 4 ತಿಂಗಳ ಗರಿಷ್ಠ

ನವದೆಹಲಿ(ಜ.04): ಒಮಿಕ್ರೋನ್‌ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿದ್ದಂತೆ, ದೇಶದಲ್ಲಿ ನಿರುದ್ಯೋಗ ದರ ನಾಲ್ಕು ತಿಂಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ. ಭಾರತೀಯ ಆರ್ಥಿಕತೆ ಮೇಲಿನ ನಿಗಾ ಕೇಂದ್ರ(ಸಿಎಂಐಇ)ದ ಅಧ್ಯಯನದ ಪ್ರಕಾರ, ನವೆಂಬರ್‌ನಲ್ಲಿ ಶೇ.7ರಷ್ಟಿದ್ದ ನಿರುದ್ಯೋಗ ದರ, ಡಿಸೆಂಬರ್‌ನಲ್ಲಿ ಶೇ.7.9ಕ್ಕೆ ತಲುಪಿದೆ. ಆಗಸ್ಟ್‌ನಲ್ಲಿ ಇದು ಶೇ.8.3ರಷ್ಟುಇತ್ತು. ಅದಾದ ಬಳಿಕ ನಿರುದ್ಯೋಗ ದರ ಏರಿಕೆ ಕಂಡಿದೆ ಎಂದು ತಿಳಿಸಿದೆ.

ಒಮಿಕ್ರೋನ್‌ ಸೋಂಕು ಹೆಚ್ಚಳ ಹಾಗೂ ಹಲವು ರಾಜ್ಯಗಳಲ್ಲಿ ನಿರ್ಬಂಧಗಳನ್ನು ಹೇರುತ್ತಿರುವ ಪರಿಣಾಮವಾಗಿ ಆರ್ಥಿಕ ಚಟುವಟಿಕೆ ಹಾಗೂ ಗ್ರಾಹಕರ ಸಂವೇದನೆಗೆ ಹೊಡೆತ ಬಿದ್ದಿದೆ ಎಂದು ಹೇಳಿದೆ.

ಈ ಪೈಕಿ ನಗರಪ್ರದೇಶಗಳಲ್ಲಿ ನವೆಂಬರ್‌ನಲ್ಲಿ ಶೇ.8.2ರಷ್ಟಿದ್ದ ನಿರುದ್ಯೋಗ ದರ, ಡಿಸೆಂಬರ್‌ನಲ್ಲಿ ಶೇ.9.3ಕ್ಕೆ ತಲುಪಿದೆ. ಗ್ರಾಮೀಣ ಭಾಗದಲ್ಲಿ ಇದೇ ಅವಧಿಯಲ್ಲಿ ಶೇ.6.4ರಿಂದ ಶೇ.7.3ಕ್ಕೆ ಮುಟ್ಟಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.

ಕೇಂದ್ರ ಸರ್ಕಾರ ಪ್ರತಿ ತಿಂಗಳೂ ನಿರುದ್ಯೋಗ ಕುರಿತ ಅಂಕಿ-ಅಂಶಗಳನ್ನು ಬಿಡುಗಡೆ ಮಾಡುವುದಿಲ್ಲ. ಹೀಗಾಗಿ ಮುಂಬೈ ಮೂಲದ ಸಿಎಂಐಇ ಸಂಸ್ಥೆಯ ಮಾಹಿತಿಯನ್ನು ಆರ್ಥಿಕ ತಜ್ಞರು ಹಾಗೂ ನೀತಿ ನಿರೂಪಕರು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಾರೆ.

ಈ ಹಿಂದಿನ ತ್ರೈಮಾಸಿಕ ಅವಧಿಗಳಲ್ಲಿ ಆಗಿದ್ದ ಆರ್ಥಿಕ ಪುನಶ್ಚೇತನವನ್ನು ಒಮಿಕ್ರೋನ್‌ ಸೋಂಕು ಹಾಳುಗಡೆವಬಹುದು ಎಂದು ಹಲವು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.