ಭಾರತಕ್ಕೆ ಶಸ್ತ್ರಸಜ್ಜಿತ ಡ್ರೋನ್‌ ಬಲ| ಇದೇ ಮೊದಲ ಬಾರಿ ಭಾರತಕ್ಕೆ ಸಶಸ್ತ್ರ ಡ್ರೋನ್‌| ಅಮೆರಿಕದಿಂದ 30 ಡ್ರೋನ್‌ ಖರೀದಿಗೆ ಸಿದ್ಧತೆ| ಮುಂದಿನ ತಿಂಗಳು ಅನುಮೋದನೆ ಸಾಧ್ಯತೆ| ಚೀನಾ ಯುದ್ಧನೌಕೆಗಳ ಮೇಲೆ ಡ್ರೋನ್‌ ಕಣ್ಣು|ಪಾಕ್‌ ಗಡಿಯಲ್ಲಿ ಗುರಿ ಇಡಲೂ ಇದರಿಂದ ಸಾಧ್ಯ

ನವದೆಹಲಿ(ಮಾ.11): ನೆರೆಯ ಪಾಕಿಸ್ತಾನ ಹಾಗೂ ಚೀನಾದಿಂದ ಹೊಸ ಸವಾಲುಗಳು ಎದುರಾಗುತ್ತಿರುವ ನಡುವೆಯೇ ಅಮೆರಿಕದಿಂದ 30 ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಖರೀದಿಸಲು ಭಾರತ ಸರ್ಕಾರ ಮುಂದಾಗಿದೆ. ಭೂಮಿ ಹಾಗೂ ಸಮುದ್ರದ ಮೇಲೆ ಕಾರಾರ‍ಯಚರಣೆ ನಡೆಸುವ ಸಾಮರ್ಥ್ಯ ಹೊಂದಿರುವ ಈ ಡ್ರೋನ್‌ಗಳು ಸೇನಾಪಡೆಗಳ ಸಾಮರ್ಥ್ಯವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುವ ವಿಶ್ವಾಸವನನು ಸೇನೆ ಹೊಂದಿದೆ.

ಈ ಖರೀದಿಗೆ ಭಾರತ ಸರ್ಕಾರ ಮುಂದಿನ ತಿಂಗಳು ಅನುಮೋದನೆ ನೀಡುವ ನಿರೀಕ್ಷೆಯಿದೆ. 300 ಕೋಟಿ ಡಾಲರ್‌ ವೆಚ್ಚದಲ್ಲಿ ಸ್ಯಾನ್‌ ಡಿಯಾಯೋ ಮೂಲದ ಜನರಲ್‌ ಅಟೋಮಿಕ್ಸ್‌ ಕಂಪನಿ ಸಿದ್ಧಪಡಿಸಿರುವ ಎಂಕ್ಯು-9ಬಿ ಪ್ರಿಡೇಟರ್‌ ಡ್ರೋನ್‌ಗಳನ್ನು ಭಾರತ ಖರೀದಿಸಲಿದೆ ಎಂದು ಮೂಲಗಳು ಹೇಳಿವೆ. ಆದರೆ ಈ ಬಗ್ಗೆ ಅಮೆರಿಕ ಸರ್ಕಾರ, ಭಾರತ ಸರ್ಕಾರ ಹಾಗೂ ಜನರಲ್‌ ಅಟೋಮಿಕ್ಸ್‌ ಕಂಪನಿ- ಯಾವುದೇ ಅಧಿಕೃತ ಹೇಳಿಕೆ ನೀಡಲು ನಿರಾಕರಿಸಿವೆ.

ಡ್ರೋನ್‌ಗಳನ್ನು ಈವರೆಗೆ ಕೇವಲ ಸರ್ವೇಕ್ಷಣೆಗೆ ಬಳಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಭಾರತ ಖರೀದಿಸುತ್ತಿದ್ದು, ಭಾರತದ ರಕ್ಷಣಾ ಬಲ ಮತ್ತಷ್ಟುಹೆಚ್ಚಲಿದೆ ಎಂದು ವಿಶ್ಲೇಷಿಸಲಾಗಿದೆ.

ವಿಶೇಷತೆ ಏನು?:

ಎಂಕ್ಯು-9ಬಿ ಡ್ರೋನ್‌ಗಳು 48 ತಾಸು ಹಾರಾಟ ನಡೆಸಬಬಲ್ಲವು. 1700 ಕೇಜಿ ಪೇ ಲೋಡ್‌ ಹೊತ್ತೊಯ್ಯಬಲ್ಲವು. ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಸಂಚರಿಸುವ ಚೀನಾ ಯುದ್ಧ ಹಡಗುಗಳ ಮೇಲೆ ಈ ಡ್ರೋನ್‌ಗಳು ಹದ್ದಿನ ಕಣ್ಣು ಇಡಲು ಸಾಧ್ಯವಾಗಲಿದೆ. ಇದೇ ವೇಳೆ, ಭಾರತ-ಪಾಕಿಸ್ತಾನ ಗಡಿಯಲ್ಲಿ ಸೇನೆಗೆ ನಿಖರ ಗುರಿ ಇಡಲು ನರವಾಗಲಿದೆ.