ನವದೆಹಲಿ(ಜೂ.07): ವಿಶ್ವಸಂಸ್ಥೆ ನಿಗದಿಪಡಿಸಿರುವ ಸುಸ್ಥಿರ ಅಭಿವೃದ್ಧಿಗೆ ಗುರಿಗೆ ಸಂಬಂಧಿಸಿದ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಕಳೆದ ವರ್ಷಕ್ಕಿಂತ ಭಾರತ 2 ಸ್ಥಾನ ಕುಸಿತ ಕಂಡು, 117ಕ್ಕೆ ಜಾರಿದೆ. ವಿಶೇಷ ಎಂದರೆ ಭೂತಾನ್‌, ನೇಪಾಳ, ಶ್ರೀಲಂಕಾ ಹಾಗೂ ಬಾಂಗ್ಲಾದೇಶಕ್ಕಿಂತ ಭಾರತ ಕೆಳಗಿದೆ.

2030ರೊಳಗೆ ವಿಶ್ವದ ಜನತೆಯ ಈಗಿನ ಮತ್ತು ಭವಿಷ್ಯದ ಶಾಂತಿ ಹಾಗೂ ಸಂಪತ್ತಿಗಾಗಿ ವಿಶ್ವಸಂಸ್ಥೆ 2015ರಲ್ಲಿ ತನ್ನ 193 ಸದಸ್ಯ ರಾಷ್ಟ್ರಗಳ ಜತೆಗೆ ಅಜೆಂಡಾ ಹಂಚಿಕೊಂಡಿದೆ. ಇದನ್ನು 2030ರೊಳಗೆ ತಲುಪಬೇಕು ಎಂಬ ಗುರಿ ಹಾಕಿದೆ. ಆದರೆ ಹಸಿವು, ಆಹಾರ ಭದ್ರತೆ, ಲಿಂಗ ಸಮಾನತೆ, ಮೂಲಸೌಕರ್ಯ, ಕೈಗಾರಿಕೀಕರಣ, ನಾವೀನ್ಯತೆಯ ಸವಾಲುಗಳಿಂದ ಭಾರತ 2 ಸ್ಥಾನ ಕುಸಿದಿದೆ ಎಂದು ವರದಿ ತಿಳಿಸಿದೆ.

ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ ಜಾರ್ಖಂಡ್‌ ಹಾಗೂ ಬಿಹಾರ ತೀರಾ ಹಿಂದುಳಿದಿವೆ. ಐದು ಸುಸ್ಥಿರ ಗುರಿಗಳಲ್ಲಿ ಜಾರ್ಖಂಡ್‌ ಹಾಗೂ 7ರಲ್ಲಿ ಬಿಹಾರ ಹಿಂದೆ ಬಿದ್ದಿದೆ. ಆದರೆ ಕೇರಳ, ಹಿಮಾಚಲಪ್ರದೇಶ ಹಾಗೂ ಚಂಡೀಗಢ 2030ರೊಳಗೆ ಗುರಿ ತಲುಪುವ ಹಾದಿಯಲ್ಲಿವೆ ಎಂದು ವರದಿ ವಿವರಿಸಿದೆ.