ನವದೆಹಲಿ(ಫೆ.23): ದೇಶಾದ್ಯಂತ ದಿಢೀರನೆ ಹೊಸ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾದ ಬೆನ್ನಲ್ಲೇ, ಸಕ್ರಿಯ ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಏರಿಕೆ ದಾಖಲಾಗಿದೆ. ಅದರಲ್ಲೂ ಸೋಮವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಹೊಸ ಸಕ್ರಿಯ ಸೋಂಕಿತರ ಸಂಖ್ಯೆ 4421ರಷ್ಟುಹೆಚ್ಚಾಗಿದೆ. ಶೇ.3ರಷ್ಟಿರುವ ಈ ಏರಿಕೆ ಪ್ರಮಾಣವು ನವೆಂಬರ್‌ ಅಂತ್ಯದ ನಂತರದ ಕಂಡುಬಂದ ಅತಿದೊಡ್ಡ ಏರಿಕೆಯಾಗಿದೆ.

ಇದೆ ವೇಳೆ 4421 ಹೊಸ ಸಕ್ರಿಯ ಕೇಸಿನೊಂದಿಗೆ ದೇಶದಲ್ಲಿನ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 17 ದಿನಗಳ ಬಳಿಕ 1.5 ಲಕ್ಷ ದಾಟಿದಂತಾಗಿದೆ. ದೇಶದಲ್ಲಿ ಕಳೆದ 5 ದಿನಗಳಿಂದ ಸತತವಾಗಿ ಸಕ್ರಿಯ ಕೇಸುಗಳ ಪ್ರಮಾಣ ಏರುಗತಿಯಲ್ಲಿದೆ. ಈ ಅವಧಿಯಲ್ಲಿ ಒಟ್ಟು 13,506 ಕೇಸು ಹೆಚ್ಚಳವಾಗಿದೆ. ಇದು ಸಹಜವಾಗಿಯೇ ಕೇಂದ್ರ ಸರ್ಕಾರವನ್ನು ಚಿಂತೆಗೀಡು ಮಾಡಿದೆ.

ಭರ್ಜರಿ ಏರಿಕೆ:

ಕಳೆದ 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೇಸಲ್ಲಿ ಕಂಡುಬಂದ ಶೇ.3ರಷ್ಟುಏರಿಕೆಯು, ಕಳೆದ ವಾರ ಇದೇ ಅವಧಿಯಲ್ಲಿ ದಾಖಲಾದ ಶೇ.1.5ರಷ್ಟುಏರಿಕೆ ಪ್ರಮಾಣದ ದ್ವಿಗುಣವಾಗಿದೆ. ಜೊತೆಗೆ ಅದಕ್ಕೂ ಹಿಂದಿನ ವಾರ ಕಂಡುಬಂದ ಏರಿಕೆಗಿಂತ ಶೇ.2.9ರಷ್ಟುಹೆಚ್ಚಿದೆ. ಆಗ ಸಕ್ರಿಯ ಕೇಸುಗಳ ಸಂಖ್ಯೆಯಲ್ಲಿ 157ರಷ್ಟುಇಳಿಕೆ ಕಂಡುಬಂದಿತ್ತು.

ಕೇಸಲ್ಲೂ ಹೆಚ್ಚಳ:

ಫೆ.16ರಂದು ದೇಶದಲ್ಲಿ 9121 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದರೆ, ಕಳೆದ 24 ಗಂಟೆಗಳ ಅವಧಿಯಲ್ಲಿ 14,199 ಹೊಸ ಕೇಸು ದಾಖಲಾಗಿದೆ. ಅಂದರೆ ವಾರದಲ್ಲಿ ಸರಾಸರಿ ಶೇ.13.8ರಷ್ಟುಹೆಚ್ಚಳ ಕಂಡುಬಂದಿದೆ. ಈ ಪೈಕಿ ಅತಿ ಹೆಚ್ಚಿನ ಪ್ರಕರಣಗಳು ಮಹಾರಾಷ್ಟ್ರ, ಕೇರಳ, ಪಂಜಾಬ್‌, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ದಾಖಲಾಗಿದೆ.

ದೇಶದಲ್ಲಿ ಇದುವರೆಗೆ 1.10 ಕೋಟಿ ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಈ ಪೈಕಿ ಸಕ್ರಿಯ ಕೇಸುಗಳ ಸಂಖ್ಯೆ 1.50 ಲಕ್ಷ ಇದೆ. ಅಂದರೆ ಸೋಂಕಿನಿಂದ ಚೇತರಿಕೆ ಪ್ರಮಾಣ ಶೇ.97.22ರಷ್ಟಿದೆ. ಇನ್ನು ಸೋಂಕಿಗೆ ಈವರೆಗೆ 1.56 ಲಕ್ಷ ಜನರು ಬಲಿಯಾಗಿದ್ದಾರೆ. ಈ ಮೂಲಕ ಸೋಂಕಿತರ ಸಾವಿನ ಪ್ರಮಾಣ ಶೇ.1.42ರಷ್ಟುದಾಖಲಾಗಿದೆ.