ಒಂದೇ ದಿನ 9195 ಕೇಸು: 20 ದಿನದ ಗರಿಷ್ಠ ಒಂದೇ ದಿನದಲ್ಲಿ ಸೋಂಕಿನ ಪ್ರಮಾಣ ಶೇ.44 ಏರಿಕೆ 302 ಸಾವು, ಸಕ್ರಿಯ ಕೇಸು 77 ಸಾವಿರಕ್ಕೆ ಹೆಚ್ಚಳ 128 ಒಮಿಕ್ರೋನ್‌ ಕೇಸು ದಾಖಲು, 781ಕ್ಕೇರಿಕೆ

ನವದೆಹಲಿ(ಡಿ.30): ದೇಶದಲ್ಲಿ ಕೋವಿಡ್‌ 3ನೇ ಅಲೆ ಏಳುವ ಮುನ್ಸೂಚನೆ ಎಂಬಂತೆ ದೈನಂದಿನ ಕೋವಿಡ್‌ ಪ್ರಕರಣಗಳು ದಿಢೀರನೇ ಏರಿಕೆ ಕಂಡಿವೆ. ಬುಧವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ 9,195 ಪ್ರಕರಣಗಳು ದಾಖಲಾಗಿದ್ದು, ಇದು 20 ದಿನಗಳ ಗರಿಷ್ಠವಾಗಿದೆ. ಡಿ.9ರಂದು 9416 ಪ್ರಕರಣ ದಾಖಲಾಗಿದ್ದವು. ಆ ಬಳಿಕ ಸೋಂಕು 9 ಸಾವಿರ ದಾಟದೇ ಅದಕ್ಕಿಂತ ಕಡಿಮೆ ಅಂಕಿಯಲ್ಲಿ ಹೊಯ್ದಾಡುತ್ತಿತ್ತು. ಈಗ ಮತ್ತೆ 9 ಸಾವಿರದ ಗಡಿ ದಾಟಿರುವುದು ಆತಂಕದ ವಿಚಾರ.

ಅಲ್ಲದೆ ಮಂಗಳವಾರದ ಪ್ರಕರಣಗಳಿಗೆ (6358 ಕೇಸು) ಹೋಲಿಸಿದರೆ ಬುಧವಾರ ಪ್ರಕರಣ ಸಂಖ್ಯೆ ಶೇ.44ರಷ್ಟುಹೆಚ್ಚಾದಂತಾಗಿದೆ. ಇದೇ ಅವಧಿಯಲ್ಲಿ 302 ಸೋಂಕಿತರು ಸಾವಿಗೀಡಾಗಿದ್ದಾರೆ.

ಕರ್ನಾಟಕದಲ್ಲಿ ಸದ್ದಿಲ್ಲದೇ ಮತ್ತೆ ಹಳ್ಳಿ-ಹಳ್ಳಿಗೂ ಹಬ್ಬತ್ತಿದೆ ಕೊರೋನಾ..?

ಕಳೆದ 24 ತಾಸುಗಳಲ್ಲಿ 1,546 ಸಕ್ರಿಯ ಪ್ರಕರಣಗಳು ಹೆಚ್ಚಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ 77,002ಕ್ಕೆ ಏರಿಕೆಯಾಗಿದೆ. ತನ್ಮೂಲಕ ಒಟ್ಟು ಪ್ರಕರಣಗಳು 3.48 ಕೋಟಿಗೆ, ಒಟ್ಟು ಸಾವು 4.8 ಲಕ್ಷಕ್ಕೆ ಏರಿಕೆಯಾಗಿದೆ.

128 ಹೊಸ ಒಮಿಕ್ರೋನ್‌ ಕೇಸು:

ಜೊತೆಗೆ ದೇಶದಲ್ಲಿ ಹೊಸದಾಗಿ 128 ಒಮಿಕ್ರೋನ್‌ ಪ್ರಕರಣಗಳು ದೃಢಪಟ್ಟಿವೆ. ಹಾಗಾಗಿ ಒಟ್ಟು ಒಮಿಕ್ರೋನ್‌ ಸೋಂಕು 781ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಅತಿ ಹೆಚ್ಚು 238 ಪ್ರಕರಣಗಳು ದಾಖಲಾಗಿದೆ. ಉಳಿದಂತೆ ಮಹಾರಾಷ್ಟ್ರದಲ್ಲಿ 167, ಗುಜರಾತ್‌ನಲ್ಲಿ 73, ಕೇರಳದಲ್ಲಿ 65 ಮತ್ತು ತೆಲಂಗಾಣದಲ್ಲಿ 62 ಪ್ರಕರಣಗಳು ದಾಖಲಾಗಿದೆ.

ಸಕ್ರಿಯ ಕೇಸ್‌: ಬೆಂಗ್ಳೂರು ದೇಶಕ್ಕೇ ನಂ.1..!

ದೇಶದ(India) ನಗರ ಮತ್ತು ಮಹಾನಗರಗಳ ಪೈಕಿ ಸದ್ಯ ಅತಿ ಹೆಚ್ಚು ಕೊರೋನಾ ಸಕ್ರಿಯ ಸೋಂಕಿತರಿರುವ ನಗರ ನಮ್ಮ ಸಿಲಿಕಾನ್‌ ಸಿಟಿ ಬೆಂಗಳೂರು! ಹೌದು. ದೆಹಲಿ, ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್‌ಗೆ ಹೋಲಿಸಿದರೆ ಅತಿ ಹೆಚ್ಚು 5,866 ಕೊರೋನಾ ಸಕ್ರಿಯ ಸೋಂಕಿತರು ಬೆಂಗಳೂರಿನಲ್ಲಿದ್ದು(Bengaluru), ಆಸ್ಪತ್ರೆ ಮತ್ತು ಮನೆಗಳಲ್ಲಿ ಚಿಕಿತ್ಸೆ/ ಆರೈಕೆಯಲ್ಲಿದ್ದಾರೆ. ಅಲ್ಲದೆ, ಕಳೆದ ಒಂದು ವಾರದಿಂದ ಹೊಸ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಈ ಅವಧಿಯಲ್ಲಿ ದೆಹಲಿ, ಹೈದರಾಬಾದ್‌, ಚೆನ್ನೈಗಿಂತಲೂ ಹೆಚ್ಚು ಜನರಿಗೆ ಬೆಂಗಳೂರಿನಲ್ಲಿ ಸೋಂಕು ತಗುಲಿದೆ.

ಕರ್ನಾಟಕದಲ್ಲಿ ಕೊರೋನಾ ಮಾಹಿತಿ:

ಇಂದು (ಡಿಸೆಂಬರ್ 29) ಹೊಸದಾಗಿ 566 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 6 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 30,05,798 ಕ್ಕೆ ಏರಿಕೆಯಾಗಿದ್ರೆ, ರಾಜ್ಯದಲ್ಲಿ ಈವರೆಗೆ ಕೊರೋನಾದಿಂದ 38,324 ಜನ ಸಾವನ್ನಪ್ಪಿದ್ದಾರೆ. ಸೋಂಕಿತರ ಪೈಕಿ 29,59,674 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸದ್ಯ 7,771 ಕೊರೋನಾ ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 0.52 ರಷ್ಟು ಇದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಬುಧವಾರ ಒಂದೇ ದಿನ 400 ಜನರಿಗೆ ಕೊವಿಡ್-19 ಕೇಸ್ ಪತ್ತೆಯಾಗಿವೆ. ಈ ಮೂಲಕ, ಬೆಂಗಳೂರಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 12,62,397 ಕ್ಕೆ ಏರಿಕೆಯಾಗಿದೆ. 12,62,397 ಸೋಂಕಿತರ ಪೈಕಿ 12,39,616 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಈವರೆಗೆ 16,392 ಜನರು ಮೃತಪಟ್ಟಿದ್ದು, 6,388 ಕೊರೋನಾ ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ 4 ಮಂದಿ ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ಕೊವಿಡ್​ನಿಂದ ಒಬ್ಬರು ಮೃತಪಟ್ಟಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಸಾವು ಸಂಭವಿಸಿಲ್ಲ