ಡೆಲ್ಲಿಮಂಜು

ನವದೆಹಲಿ(ಅ. 19)  ಸಂತೆಯಲ್ಲೊಂದು ಮೋಟರ್ ಅಡ್ಡಾದ ರಸ್ತೆ ಮಾಡಿ..! ಬಹುಶಃ ಇಂಥದೊಂದು ಯೋಜನೆ ಮಾಡುವುದು ಇರಲಿ, ಯೋಚನೆ ಮಾಡೋದು ಕೂಡ ಪ್ರಸ್ತುತ ದಿನಮಾನಗಳಲ್ಲಿ ಕಷ್ಟ. ಆದರೆ ಇಂತಹ ಯೋಜನೆಗಳಿಗೆ ನಮ್ಮ ಆಲೋಚನೆಗಳನ್ನು ಸಾಣೆ ಹಿಡಿದು, ಸೇತುವೆಯಾಗಿಸಿಕೊಂಡರೇ ಗುರಿ ತಲುಪುವುದು ಬಲು ಸುಲಭ. ಆ ಮೊಘಲರ ಬೀದಿಯಲ್ಲಿ ಶುರುವಾಗಿರುವ ಹೊಸದೊಂದು ಪ್ರಯತ್ನ ಇದೀಗ ದಡ ಮುಟ್ಟುತ್ತಿದೆ. 

ಬಾಲ್ಯದ ಎಲ್ಲರ ಗೆಳೆಯ, ಅಮ್ಮನ ಕೈತುತ್ತು ಸಲೀಸಾಗಿ ಹೊಟ್ಟೆ ಸೇರಲು ಆಸ್ಪದ ಮಾಡಿಕೊಡುತ್ತಿದ್ದ ಆಕಾಶದ ಸುರಸುಂದರಾಗ ಆ ಚಂದಮಾಮ, ತನ್ನ ಬೆಳದಿಂಗಳನ್ನು ಹಾಲಿನ ರೂಪದಲ್ಲಿ ಚೆಲ್ಲಿ ಇಡೀ ಆ ಬೀದಿಯನ್ನು ಕಳೆಕಟ್ಟುವಂತೆ ಮಾಡುತ್ತಿದ್ದ `ಮೂನ್ ಲೈಟ್ ಸ್ಕ್ವೇರ್' ನಲ್ಲಿ ಆ ಮೋಟರ್ ಅಡ್ಡಾದ ರಸ್ತೆಯೊಂದು ಸೃಷ್ಟಿಯಾಗುತ್ತಿದೆ. ಚಾಂದಿನ ಚೌಕ್‍ನ ಏರಿಯಾದಲ್ಲಿ ನಮಗೂ, ನಿಮಗೂ ಕಾಣಸಿಗೋ ಇತಿಹಾಸ ಪ್ರಸಿದ್ದ ಕೆಂಪುಕೋಟೆಯ ಪ್ರವೇಶ ದ್ವಾರದಲ್ಲಿ ನಿಂತು ನೋಡಿದ್ರೆ ಅಂದಾಜು 1.3 ಕಿಲೋಮೀಟರ್ ಉದ್ದದ ಈ ರಸ್ತೆ ಕಾಣುತ್ತೆ. 

ಚಾಂದಿನಿ ಚೌಕ್ ಅರ್ಥಾತ್ ಮೂನ್ ಲೈಟ್ ಸ್ಕ್ವೇರ್ ಅಂದ ಕೂಡಲೇ ಮೊಘಲರ ಕಾಲ, ಇತಿಹಾಸದ ನೆನಪು ಹಾದುಹೋಗುತ್ತದೆ. ಮೊಘಲ್ ದೊರೆ ಶಹಾಜಾನ್ ಪುತ್ರಿ ಜಹ್ನರ್ ಬೇಗಂ 17ನೇ ಶತಮಾನದಲ್ಲಿ ಈ ಸ್ಕ್ವೇರ್ ನಿರ್ಮಾಣ ಮಾಡಿದ್ರು. ಇಲ್ಲಿನ ನೀರಿನ ಕೊಳದಲ್ಲಿ ಚಂದ್ರನ ಬೆಳಕಿನ ಪ್ರತಿಬಿಂಬ ಪ್ರತಿಫಲಿಸುವ ಮೂಲಕ ಬೆಳಕು ಚೆಲ್ಲುತ್ತಿದ್ದ ಕಾರಣಕ್ಕೆ ಮೂನ್‍ಲೈಟ್ ಸ್ಕ್ವೇರ್ ಅಥವಾ ಚಾಂದಿನಿ ಚೌಕ್ ಅನ್ನೋ ಹೆಸರು ಬಂತು ಎನ್ನುತ್ತಿವೆ ಇತಿಹಾಸದ ಪುಟಗಳು.

ಬಿಹಾರ ಚುನಾವಣೆ; ನಾವು ಕಾಣದ ಹತ್ತು ಮುಖಗಳು

ಮೊಘಲರ ಕಾಲದ ವಾಸ್ತುಶಿಲ್ಪ:  ರೆಡ್‍ಫೋರ್ಟ್‍ನಿಂದ ಫತೇಪುರ್ ಮಸೀದ್ ತನಕ ಮೋಟರ್ ಓಡಾಡದ ರಸ್ತೆ ಚಾಚಿಕೊಂಡಿದೆ. ಮೊಘಲರ ವಾಸ್ತುಶಿಲ್ಪದ ಶೈಲಿಯಲ್ಲಿ ಕಾಮಗಾರಿಗಳಿಗೆ ಎರಕ ಹೊಯ್ಯುವ ಕೆಲಸ ನಡೆಯುತ್ತಿದೆ. ಕೆಂಪು ಕಲ್ಲಿನಲ್ಲಿ ಕೆತ್ತಿರುವ ಕಲ್ಲಿನ ಬೆಂಚ್‍ ಹಾಕಲಾಗಿದೆ. ಅದೇ ರೀತಿ ರಸ್ತೆಯ ಎರಡು ಬದಿ ದಾರಿಹೋಕರು ದಣಿವಾರಿಸಿಕೊಳ್ಳುವ ಸಲುವಾಗಿ ಕೂರುವ ಸಣ್ಣ ಸಣ್ಣ ಕೆಂಪು ಕಲ್ಲಿನ ಕಂಬಗಳು (ಬಾಲರ್ಡ), 250 ಮೌಲ್ಸಾರಿ ಸಸಿಗಳನ್ನು ನೆಡುವುದಕ್ಕೆ ಕುಂಡುಗಳಿಗೂ ಸಹ ಮೊಘಲರ ಕಾಲದ ಟಚ್ ನೀಡುವ ಮೂಲಕ ಇತಿಹಾಸ ನೆನಪಿಸುವ ಕೆಲಸ ಮಾಡಲಾಗುತ್ತಿದೆ.

ಮುತ್ತಜ್ಜನ ಶಾಪ್‍ಗಳು.. ಮರಿಮೊಮ್ಮಕ್ಕಳ ಪಾರುಪತ್ಯ : ಏಷ್ಯಾ ಖಂಡಕ್ಕೆ, ಇಂಡಿಯಾಕ್ಕೆ ಪುರಾತನ ಮಾರುಕಟ್ಟೆ ಎಂಬ ಪ್ರಶ್ನೆಗೆ ಉತ್ತರವಾಗಿ ನಿಲ್ಲುವ ರಸ್ತೆ ಕೂಡ ಇದೇ. ಚಾಂದಿನಿ ಚೌಕ್‍ನ ಈ ಮಾರುಕಟ್ಟೆಯ ರಸ್ತೆಯಲ್ಲಿ ಸೂಜಿಯಿಂದ ಹಿಡಿದು ಕಂಪ್ಯೂಟರ್ ತನಕ ಜಿಲೇಬಿಯಿಂದ ಹಿಡಿದು ಪಾವ್ ಬಜ್ಜಿಯ ತನಕ, ಸೈಕಲ್‍ನಿಂದ ಹಿಡಿದು ಬಿಎಂಡಬ್ಲ್ಯೂ ಕಾರು ತನಕ ಸಿಗುತ್ತವೆ ಎಂಬ ಮಾತಿದೆ.  ಗಲ್ಲಿಗೊಂದು `ಪುರಾನಾ ಶಾಪ್ ಸಿಗುತ್ತೆ, ನಯಾ ಮಾಲೀಕ್ ಕೂರ್ತಿತ್ತಾನೆ.' ಮುತ್ತಜ್ಜರು ಕಟ್ಟಿದ ಶಾಪ್‍ನಲ್ಲಿ ಮೂರು ತಲೆಮಾರುಗಳು ದಾಟಿ ಇದೀಗ ಮೊಮ್ಮಕ್ಕಳು ಪಾರುಪತ್ಯ ಮೆರೆಯುತ್ತಿರೋ ಚಿತ್ರಣಗಳು ಕಂಡುಬರುತ್ತವೆ.

ಸೌಂದರ್ಯದ ಪ್ರತೀಕ; ಕೊಡಗಿನ ಜಲಪಾತಗಳ ನೋಡಿಕೊಂಡು ಬನ್ನಿ

ಹೆಚ್ಚುಕಮ್ಮಿ ಒಂದೂವರೆ ಕಿಲೋಮೀಟರ್ ಇರುವ ಈ ರಸ್ತೆಯಲ್ಲಿ ಅದೆಷ್ಟು ಗಲ್ಲಿಗಳು ಇವೆ ಅನ್ನೋದೆ ಸೋಜಗದ ಸಂಗತಿ. ಪ್ರತಿ ಗಲ್ಲಿ ಕೂಡ ಒಂದೊಂದಕ್ಕೆ ಫೇಮಸ್. ಕಿನಾರೆ ಬಜಾರ್ ಒಳಹೊಕ್ಕರೆ ವಧು-ವರರಿಗೆ ಬೇಕಾಗುವ ಎಲ್ಲಾ ವಸ್ತುಗಳು ಒಂದೇ ಕಡೆ ಸಿಗುತ್ತವೆ. ಅದೇ ರೀತಿ ಪಕ್ಕದ ನಯಾ ಸಡಕ್ ರಸ್ತೆಯಲ್ಲಿ ಸೀರೆಗಳ ಹೋಲ್ ಸೇಲ್ ಮಾರ್ಕೆಟ್, ಲಾಜಪತ್ ರಾಯ್ ಮಾರ್ಕೆಟ್‍ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು, ಮೀನಾ ಬಜಾರ್‍ನಲ್ಲಿ ಎಂಥಾ ಬಟ್ಟೆಗಳು ಬೇಕಾದ್ರು ಸಿಗ್ತವೆ. ಫೋಟೋ ಮಾರ್ಕೆಟ್, ಚಸ್ಮಾ ಸ್ಟ್ರೀಟ್, ಡಿಜಿಟಲ್ ಸ್ಪೆಷಲ್ ಮಾರ್ಕೆಟ್ ಹೀಗೆ ಪಟ್ಟಿಯ ಉದ್ದ ಬೆಳೆಯುತ್ತೆ. ಇಷ್ಟು ಮಾರ್ಕೆಟ್‍ಗಳು ಇದ್ದಾಗ ಚೋರ್ ಬಜಾರ್ ಇಲ್ಲದೆ ಇರೋಕೆ ಸಾಧ್ಯವಾ ? ಅದು ಕೂಡ ಇದೆ. ವಾರದಲ್ಲಿ ಒಂದೆರಡು ದಿನ ಬೆಳಂಬೆಳಗ್ಗೆಯಿಂದ ಮೂರ್ನಾಲ್ಕು ಗಂಟೆಗಳ ಕಾಲ ಇಲ್ಲಿ ಬಿಜಿನೆಸ್ ನಡೆಯುತ್ತೆ!

ಬಾಲಿವುಡ್ ಅಕ್ಷಯ್ ಕುಮಾರ್ ಇಲ್ಲಿದ್ರು : ಚಾಂದಿನಿ ಚೌಕ್‍ನ ಮತ್ತೊಂದು ಇಂಟ್ರಸ್ಟಿಂಗ್ ಗಲ್ಲಿ ಅಂದ್ರೆ ಅದು ಪರಾಠ ಗಲ್ಲಿ. ತಿಂಡಿಪೋತರ ಗಲ್ಲಿ ಅಂತಲೂ ಕರೆಯುತ್ತಾರೆ. ಇದೊಂದು ಪುರಾತನ ಗಲ್ಲಿ. ಪರಾಠಗಳು ಸಖತ್ ಫೇಮಸ್. ಇಲ್ಲಿಗೆ ಬಂದರೋ ಒಮ್ಮೆ ಪರಾಠ ರುಚಿ ನೋಡಿಕೊಂಡೇ ಹೆಜ್ಜೆಗಳು ಮುಂದೆ ಹಾಕ್ತಾರೆ. ಇನ್ನು ದಹಿವಾಡ ಶಾಪ್ ಕೂಡ ಇದೆ. ಸಿಹಿ ಇಷ್ಟಪಡೋರಿಗೆ ಜಿಲೇಬಿಯಷ್ಟೇ ಪುರಾತನ ಜಿಲೇಬಿ ಅಂಗಡಿ ಸಿಗುತ್ತೆ. ಈ ಅಂಗಡಿಗೆ ಅರವತ್ತು ಎಪ್ಪತ್ತು ವರ್ಷಗಳ ಹಿಸ್ಟ್ರಿ ಸಿಗುತ್ತೆ. 

ಪರಾಠ ಗಲ್ಲಿ ಸಮೀಪ ಚಾಂದಿನಿ ಚೌಕ್ ಟು ಚೀನಾ ಸಿನಿಮಾ ನಾಯಕ, ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಮನೆ ಇಲ್ಲೇ ಇದೆ. ಅವರ ಬಾಲ್ಯ ಕಳೆದಿದ್ದು ಕೂಡ ಇಲ್ಲೇ ಅನ್ನೋದು ಮಾಹಿತಿ. ಇದರ ಜೊತೆಗೆ  ಮಿರ್ಜಾಗಾಲಿಬರ ಮ್ಯೂಸಿಯಂ, ಗುರುದ್ವಾರ್, ಜಾಮಾ ಮಸೀದಿ, ಜೈನ್ ಟೆಂಪಲ್ ಜೊತೆಗೆ ಒಂದಷ್ಟು ದೇವಸ್ಥಾನಗಳು ಈ ಚಾಂದಿನಿ ಚೌಕ್‍ನ ಆಕರ್ಷಣೆಗಳು.

ಐಡಿಯಾಕ್ಕೆ 16 ವರ್ಷಗಳು :  2004ರಲ್ಲಿ ಹೊರಬಿದ್ದ ನವೀಕರಣದ ಈ ಐಡಿಯಾಕ್ಕೆ ಈಗ ಬರೋಬ್ಬರಿ 16 ವರ್ಷಗಳು ಸಂದಿದೆ. ಶೀಲಾದೀಕ್ಷಿತ್ ಅವರು ದೆಹಲಿಯ ಮುಖ್ಯಮಂತ್ರಿಯಾಗಿದ್ದಾಗ ಚಾಂದಿನಿ ಚೌಕ್ ಮಾರ್ಕೆಟ್ ನವೀಕರಣಗೊಳಿಸಬೇಕು ಅನ್ನೋ ಮಾತು ಶುರುವಾಯ್ತು. ಹತ್ತಾರು ತೊಂದರೆಗಳು ದಾಟಿ ಸಿಎಂ ಅರವಿಂದ್ ಕೇಜ್ರಿವಾಲ್ ರ ನೇತೃತ್ವದ ಸರ್ಕಾರ 2020ರ ಮಾರ್ಚಿಗೆ ಸಾರ್ವಜನಿಕರಿಗೆ ಮುಕ್ತವಾಗಿಸಬೇಕು ಅಂಥ ಪಣತೊಟ್ಟಿತ್ತು. ಅದ ಕೂಡ ಈಡೇರಲೇ ಇಲ್ಲ. ಬಳಿಕ ಇದೀಗ ಫೈನಲ್ ಡೆಡ್ ಲೈನ್ ಫಿಕ್ಸ್ ಮಾಡಿ 2020ರ ಅಂತ್ಯಕ್ಕೆ ಒಪನ್ ಮಾಡಬೇಕು ಅನ್ನೋದು ಕೇಜ್ರಿವಾಲ್ ಸಾಹೇಬರ ಗುರಿ. ಲಾಲ್ ಕಿಲಾಲ್ ಎದುರುಗಡೆ ಇರುವ ಈ ಮಾರ್ಕೆಟ್‍ನಲ್ಲಿ  ಬಿಜಿನೆಸ್ ದೃಷ್ಟಿಯಿಂದ ಬೆಳಗ್ಗೆ 9 ಗಂಟೆಯ ತನಕ ಕಾರು, ಮೋಟರ್ ಓಡಾಡಕ್ಕೆ ಅವಕಾಶ ಮಾಡಿಕೊಡಲಾಗಿದೆ. ಉಳಿದಂತೆ ಕಾರು, ಮೋಟರ್ ವಾಹನಗಳ ಓಡಾಡಕ್ಕೆ ಯಾವುದೇ ಅವಕಾಶ ಇಲ್ಲ. ಸಾಲದ್ದಕ್ಕೆ ಪಕ್ಕದ ಗಾಂಧಿ ಮೈದಾನದ ಬಳಿ 2,300 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲು ಕೂಡ ಅವಕಾಶ ಮಾಡಿಕೊಡಲಾಗಿದೆ.