ಡೆಲ್ಲಿ ಮಂಜು

ನವದೆಹಲಿ (ಅ. 20) ಕೊರೋನಾ ಸಂಕಟದಿಂದ ಹೊರಬರುತ್ತಿರುವ ದೆಹಲಿಯಲ್ಲಿ ಈಗ ವಿಷದ ಗಾಳಿಯ ಆರ್ಭಟ. ವಾಯುಮಾಲಿನ್ಯ ಮಿತಿ ಮೀರುತ್ತಿದ್ದು ರಾಷ್ಟ್ರರಾಜಧಾನಿ ಈಗ ಹೊಗೆಗೂಡು ಆಗುತ್ತಿದೆ. ನಾಳಿನ ಬುಧವಾರವೂ ಸೇರಿದಂತೆ ಮುಂದಿನ ದಿನಗಳು ಕಷ್ಟದ ದಿನಗಳು ಎನ್ನಲಾಗುತ್ತಿದೆ.

ಗಾಳಿಯ ಗುಣಮಟ್ಟ ದಿನೇ ದಿನೇ ಕುಸಿಯುತ್ತಿದ್ದು ಏರ್ ಕ್ವಾಲಿಟಿ ಇಂಡೆಕ್ಸ್ ರೇಟ್ ಮೂರು ಹಂತಗಳು ದಾಟಿ `ವೆರಿಪೂರ್' ಗೆ ಬಂದು ನಿಂತಿದೆ. ಏರ್ ಕ್ವಾಲಿಟಿ ರೇಟ್ 300ರ ಹಾಸುಪಾಸಿನಲ್ಲಿರೋದು ಕೂಡ ಅಪಾಯದ ಸಂಕೇತ. ಗಾಳಿಯ ವೇಗ ಕಡಿಮೆ ಇದ್ದು ಕಡಿಮೆ ಸಾಂದ್ರತೆಯ ಹವಾಮಾನ ಮಾಲಿನ್ಯ ಕ್ರೂಢೀಕರಣಕ್ಕೆ ಸಹಾಯವಾಗುತ್ತದೆ. ಗಾಳಿಯ ವೇಗ ಹೆಚ್ಚಾಗಿದ್ದರೇ ಮಾಲೀನ್ಯದ ಪ್ರಮಾಣ ಕಡಿಮೆ ಇರಲಿದೆ ಎನ್ನಲಾಗಿದೆ.  

ಥರ್ಮಲ್ ಘಟಕಗಳನ್ನು ಮುಚ್ಚಿ : ಇಷ್ಟರ ನಡುವೆ ಸುಪ್ರೀಂಕೋರ್ಟ್ ನಿಗಾದಲ್ಲಿರುವ ಪರಿಸರ ಮಾಲೀನ್ಯ ನಿಯಂತ್ರಣಾ ಪ್ರಾಧಿಕಾರ ಈಗಾಗಲೇ ಹರಿಯಾಣ ಮತ್ತು ಉತ್ತರ ಪ್ರದೇಶದ ಸರ್ಕಾರಗಳಿಗೆ ಸೂಚನೆ ನೀಡಿದ್ದು, 2015ರ ನಿಯಮಾವಳಿಗಳನ್ನು ಪಾಲನೆಯಾಗದಿದ್ದರೇ ಥರ್ಮಲ್ ಘಟಕ ಮುಚ್ಚುವಂತೆ ಸೂಚನೆಯಲ್ಲಿ ತಿಳಿಸಲಾಗಿದೆ. ಎರಡೂ ರಾಜ್ಯಗಳಿಗೆ ಪ್ರತ್ಯೇಕ ಪತ್ರ ಬರೆದಿರುವ ಪ್ರಾಧಿಕಾರದ ಮುಖ್ಯಸ್ಥರು, ಥರ್ಮಲ್ ಪ್ರಾಧಿಕಾರಗಳನ್ನು ಮುಚ್ಚುವ ಸಿದ್ಧತೆಗಳ ಬಗ್ಗೆ ಪ್ರಾಧಿಕಾರಕ್ಕೆ ತಿಳಿಸಿ ಎಂದಿದ್ದಾರೆ.

ಇನ್ನು ಬುಧವಾರ ಗಾಳಿಯ ವೇಗ ಕಡಿಮೆಯಾಗಲಿದ್ದು, ವಾಯು ಮಾಲಿನ್ಯದ ಪ್ರಮಾಣ ಹೆಚ್ಚು ಕಂಡು ಬರಲಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.