ನವದೆಹಲಿ(ಮಾ.15): ದೇಶದ ಹಲವು ರಾಜ್ಯಗಳಲ್ಲಿ ಹೊಸ ಕೊರೋನಾ ಸೋಂಕಿನ ಪ್ರಕರಣಗಳ ಏರಿಕೆಯ ಗತಿ ಮುಂದುವರೆದಿದ್ದು, ಭಾನುವಾರ ಬೆಳಗ್ಗೆ 8ಕ್ಕೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 25320 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದು ಕಳೆದ 84 ದಿನಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ.

ಹೊಸ ಕೋವಿಡ್‌ ಪ್ರಕರಣಗಳ ಪೈಕಿ ಶೇ.87.73ರಷ್ಟುಪಾಲು ಮಹಾರಾಷ್ಟ್ರ, ಕೇರಳ, ಪಂಜಾಬ್‌, ಕರ್ನಾಟಕ, ಗುಜರಾತ್‌, ತಮಿಳುನಾಡು ಮತ್ತು ಮಧ್ಯಪ್ರದೇಶ ರಾಜ್ಯಗಳದ್ದಾಗಿದೆ. ಈ ಹಿಂದಿನ ಗರಿಷ್ಠ ಡಿ.20ರಂದು 26624 ಪ್ರಕರಣಗಳು ದಾಖಲಾಗಿತ್ತು. ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ 161 ಜನರು ಸಾವನ್ನಪ್ಪಿದ್ದು, ಇದು ಕೂಡ 44 ದಿನಗಳ ಗರಿಷ್ಠ ಪ್ರಮಾಣವಾಗಿದೆ.

ದೇಶದಲ್ಲಿ ಎರಡನೇ ಅಲೆ ಕಾಣಿಸಿಕೊಳ್ಳದಂತೆ ಸಾಕಷ್ಟುಕ್ರಮಗಳನ್ನು ಕೈಗೊಂಡ ಹೊರತಾಗಿಯೂ, ದಿನೇ ದಿನೇ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಕೇಂದ್ರ ಸರ್ಕಾರವನ್ನು ಆತಂಕಕ್ಕೀಡು ಮಾಡಿದೆ. ಹೊಸ ಸೋಂಕಿನ ಪ್ರಕರಣಗಳ ಏರಿಕೆ ಬೆನ್ನಲ್ಲೇ ಸಕ್ರಿಯ ಪ್ರಕರಣಗಳ ಪ್ರಮಾಣವು 2.10 ಲಕ್ಷಕ್ಕೆ ತಲುಪಿದೆ. ಇದು ಒಟ್ಟು ಪ್ರಕರಣಗಳ ಶೇ.1.85ರಷ್ಟಾಗಿದೆ. ಪರಿಣಾಮ ಚೇತರಿಕೆ ಪ್ರಮಾಣ ಶೇ.96,75ಕ್ಕೆ ಕುಸಿದಿದ್ದರೆ, ಸಾವಿನ ಪ್ರಮಾಣ ಶೇ.1.40ಕ್ಕೆ ಏರಿದೆ.