Asianet Suvarna News Asianet Suvarna News

Omicron In India: ರೂಪಾಂತರಿ ಸ್ಫೋಟ ಒಂದೇ ದಿನ  122 ಕೇಸ್‌..ಫೆಬ್ರವರಿಗೆ ಘೋರ!

* ಒಮಿಕ್ರೋನ್‌ ಸ್ಫೋಟ: ದೇಶದಲ್ಲಿ  ಒಂದೇ ದಿನ ಅತಿ ಹೆಚ್ಚು 122 ಕೇಸ್‌!

* ದೇಶದ ಒಟ್ಟು ಒಮಿಕ್ರೋನ್‌ ಸೋಂಕಿತರ ಸಂಖ್ಯೆ 358ಕ್ಕೇರಿಕೆ

* ಮಹಾರಾಷ್ಟ್ರದಲ್ಲಿ ಅಧಿಕ 88 ಜನರಿಗೆ ಒಮಿಕ್ರೋನ್‌
* ಒಮಿಕ್ರೋನ್‌ನಿಂದ ದೇಶದಲ್ಲಿ 3ನೇ ಅಲೆ; ಫೆಬ್ರವರಿಗೆ ತಾರಕಕ್ಕೆ

India records 122 Omicron cases in 24 hours tally of new COVID-19 variant rises to 358 mah
Author
Bengaluru, First Published Dec 25, 2021, 3:46 AM IST

ನವದೆಹಲಿ(ಡಿ. 25)  ಅತಿ ಅಪಾಯಕಾರಿ ಎಂದು ಬಣ್ಣಿಸಲಾಗಿರುವ ಒಮಿಕ್ರೋನ್‌ (Omicron)  ಕೋವಿಡ್‌ (Coronavirus) ರೂಪಾಂತರಿ ತಳಿ ಭಾರತದಲ್ಲಿ (India)ಸ್ಫೋಟಗೊಳ್ಳುತ್ತಿದ್ದು, ಶುಕ್ರವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ಬರೋಬ್ಬರಿ 122 ಒಮಿಕ್ರೋನ್‌ ಪ್ರಕರಣಗಳು ಪತ್ತೆಯಾಗಿವೆ. ಇದು ಈವರೆಗೆ ಒಂದು ದಿನದಲ್ಲಿ ಪತ್ತೆಯಾದ ಗರಿಷ್ಠ ಸಂಖ್ಯೆ.

ಇದರೊಂದಿಗೆ ದೇಶದಲ್ಲಿ ಒಮಿಕ್ರೋನ್‌ ಸೋಂಕಿತರ ಸಂಖ್ಯೆ 358ಕ್ಕೆ ಏರಿಕೆಯಾಗಿದೆ. ಈವರೆಗೆ ಮಹಾರಾಷ್ಟ್ರದಲ್ಲಿ 88, ದೆಹಲಿಯಲ್ಲಿ 67, ತೆಲಂಗಾಣದಲ್ಲಿ 38, ತಮಿಳುನಾಡಿನಲ್ಲಿ 34 ಮತ್ತು ಗುಜರಾತಲ್ಲಿ 30 ಕೇಸ್‌ ದೃಢಪಟ್ಟಿವೆ. ಹೀಗಾಗಿ ಅಮೆರಿಕ, ಬ್ರಿಟನ್‌ನಂತೆ ಭಾರತದಲ್ಲೂ ಒಮಿಕ್ರೋನ್‌ ಇನ್ನೊಂದು ಅಲೆ ಸೃಷ್ಟಿಸುವ ಭೀತಿ ಪ್ರಾರಂಭವಾಗಿದೆ.

6650 ಹೊಸ ಕೇಸು:  ಈ ನಡುವೆ ಒಮಿಕ್ರೋನ್‌ ಪ್ರಕರಣ ಹೆಚ್ಚಳ ಕಂಡರೂ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ, ಒಮಿಕ್ರೋನ್‌ ಕೇಸು ಸೇರಿ 6,650 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ 374 ಮಂದಿ (ಕೇರಳದ ಹಳೆಯ ಸಾವುಗಳ ಲೆಕ್ಕವೂ ಸೇರಿ) ಸೋಂಕಿಗೆ ಬಲಿಯಾಗಿದ್ದಾರೆ. ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 77,516ಕ್ಕೆ ತಗ್ಗಿದೆ. ಇದು 2020ರ ಮಾಚ್‌ರ್‍ ನಂತರದ ಅತಿ ಕನಿಷ್ಠ ಸಂಖ್ಯೆಯಾಗಿದೆ.

ಸಂಕ್ರಾಂತಿಯೊಳಗೆ ದೊಡ್ಡ ಅವಘಡ ಸಂಭವಿಸಲಿದೆ, ಸ್ಫೋಟಕ ಭವಿಷ್ಯ ನುಡಿದ ಕೋಡಿ ಶ್ರೀ

ಈವರೆಗೆ ದೇಶದ 3.58 ಕೋಟಿ ಜನರಿಗೆ ಸೋಂಕು ತಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 4,79,133ಕ್ಕೆ ತಲುಪಿದೆ. ಒಟ್ಟು ಸೋಂಕಿತರ ಪೈಕಿ 3.42 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಚೇತರಿಕೆ ಪ್ರಮಾಣ ಶೇ.98.40ರಷ್ಟಿದೆ. ದೈನಂದಿನ ಸೋಂಕಿನ ಪ್ರಮಾಣ ಶೇ.0.57ರಷ್ಟಿದೆ. ಈ ನಡುವೆ ಈವರೆಗೆ 140.31 ಕೋಟಿ ಡೋಸ್‌ ಲಸಿಕೆ ವಿತರಣೆ ಮಾಡಲಾಗಿದೆ.

ಒಮಿಕ್ರೋನ್‌ನಿಂದ ದೇಶದಲ್ಲಿ 3ನೇ ಅಲೆ; ಫೆಬ್ರವರಿಗೆ ತಾರಕಕ್ಕೆ!   ಕೊರೋನಾ ವೈರಸ್‌ನ ಹೊಸ ರೂಪಾಂತರಿ ಒಮಿಕ್ರೋನ್‌ನಿಂದ ಭಾರತದಲ್ಲಿ ಕೋವಿಡ್‌ 3ನೇ ಅಲೆ ಕಾಣಿಸಿಕೊಳ್ಳಲಿದೆ ಹಾಗೂ ಇದು ಫೆ.3ರ ವೇಳೆಗೆ ತನ್ನ ಪರಾಕಾಷ್ಠೆಯನ್ನು ತಲುಪಲಿದೆ ಎಂದು ಕಾನ್ಪುರ ಐಐಟಿ ಸಂಶೋಧಕರು ತಿಳಿಸಿದ್ದಾರೆ. ದೇಶದಲ್ಲಿ ನಿಧಾನವಾಗಿ ಒಮಿಕ್ರೋನ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಾಗಲೇ, ಈ ಅಧ್ಯಯನ ವರದಿ ತೀವ್ರ ಆತಂಕವನ್ನು ಸೃಷ್ಟಿಸಿದೆ.

ವಿಶ್ವಾದ್ಯಂತ ಕಂಡುಬಂದಿರುವ ಟ್ರೆಂಡ್‌ಗಳನ್ನು ಗಮನಿಸಿ ಈ ಮುನ್ಸೂಚನೆಯನ್ನು ನೀಡಲಾಗಿದೆ. ಈ ವರದಿಯ ಪ್ರಕಾರ, ಕೊರೋನಾ ಮೂರನೇ ಅಲೆ ದೇಶದಲ್ಲಿ ಡಿಸೆಂಬರ್‌ ಮಧ್ಯಭಾಗದಿಂದ ಆರಂಭವಾಗಿ ಫೆ.3ರ ವೇಳೆಗೆ ತುತ್ತತುದಿ ತಲುಪಲಿದೆ ಎಂದು ಹೇಳಿದೆ.

ದೇಶದಲ್ಲಿ ಕೋವಿಡ್‌ ಮೊದಲ ಹಾಗೂ ಎರಡನೇ ಅಲೆ ವೇಳೆಯ ದತ್ತಾಂಶ ಮತ್ತು ವಿಶ್ವದ ವಿವಿಧ ಭಾಗಗಳಲ್ಲಿ ಒಮಿಕ್ರೋನ್‌ ಪ್ರಕರಣ ಹೆಚ್ಚಾಗುತ್ತಿರುವುದರ ಮಾಹಿತಿಯನ್ನು ಬಳಸಿ ದೇಶದಲ್ಲಿ ಮೂರನೇ ಅಲೆ ಯಾವಾಗ ಕಾಣಿಸಿಕೊಳ್ಳಲಿದೆ ಎಂಬ ವಿಶ್ಲೇಷಣೆಯನ್ನು ಮಂಡಿಸಿದೆ.

ಸಂಶೋಧನೆ ಹೇಗೆ? 
2020ರ ಜ.30ರಂದು ದೇಶದಲ್ಲಿ ಮೊದಲ ಕೋವಿಡ್‌ ಪ್ರಕರಣ ಪತ್ತೆಯಾಗಿತ್ತು. ಆ ಲೆಕ್ಕ ಹಿಡಿದರೆ 2021ರ ಡಿ.15ರಿಂದ ಕೋವಿಡ್‌ 3ನೇ ಅಲೆ ಪ್ರಾರಂಭವಾಗಿ 2022ರ ಫೆ.3ರ ಹೊತ್ತಿಗೆ ಪರಾಕಾಷ್ಠೆ ಮುಟ್ಟಲಿದೆ ಎಂದು ಸಂಶೋಧಕರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ಕಾನ್ಪುರ ಐಐಟಿಯ ಗಣಿತ ಹಾಗೂ ಸಾಂಖ್ಯಿಕ ಶಾಸ್ತ್ರ ತಜ್ಞರನ್ನು ಬಳಸಿಕೊಂಡು ಈ ಅಧ್ಯಯನ ವರದಿಯನ್ನು ಸಿದ್ಧಪಡಿಸಲಾಗಿದೆ. ‘ಕೋವಿಡ್‌ ಮೊದಲ ಹಾಗೂ ಎರಡನೇ ಅಲೆ ಬಂದಿದೆ. ಮೂರನೇ ಅಲೆ ಬರುತ್ತಾ? ಹೌದು ಎಂದಾದರೆ ಯಾವಾಗ?’ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಉದ್ದೇಶದಿಂದ ಈ ಅಧ್ಯಯನ ಮಾಡಿದ್ದಾಗಿ ತಜ್ಞರು ತಿಳಿಸಿದ್ದಾರೆ.

ಈಗ ಮಹಾರಾಷ್ಟ್ರ, ಉತ್ತರಪ್ರದೇಶದಲ್ಲೂ ನೈಟ್ ಕರ್ಫ್ಯೂ:   ಕೊರೋನಾ ಪ್ರಕರಣಗಳು ದೇಶದಲ್ಲಿ ಮತ್ತೆ ಉಲ್ಬಣವಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಇದೀಗ ಮಹಾರಾಷ್ಟ್ರ, ಉತ್ತರ ಪ್ರದೇಶ ಸರ್ಕಾರಗಳು ನೈಟ್ ಕರ್ಫ್ಯೂ ಜಾರಿಗೊಳಿಸಿವೆ. ಉತ್ತರಪ್ರದೇಶದಲ್ಲಿ ಶನಿವಾರದಿಂದ ನಿತ್ಯ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಮತ್ತು ಮಹಾರಾಷ್ಟ್ರದಲ್ಲಿ ಶುಕ್ರವಾರ ರಾತ್ರಿಯಿಂದಲೇ ರಾತ್ರಿ 9ರಂದ ಬೆಳಗ್ಗೆ 6ರವರೆಗೆ  ಕರ್ಫ್ಯೂ ಜಾರಿಯಾಗಿದೆ. ಗುರುವಾರವಷ್ಟೇ ಮಧ್ಯಪ್ರದೇಶದಲ್ಲೂ ನೈಟ್ ಕರ್ಫ್ಯೂ ಜಾರಿಯಾಗಿತ್ತು.

ಜಗತ್ತು 4ನೇ ಅಲೆಗೆ ಸಾಕ್ಷಿಯಾಗುತ್ತಿದೆ, ಮೈಮರೆಯದಿರಿಕೆ: ಕೇಂದ್ರ ಎಚ್ಚರಿಕೆ
ನವದೆಹಲಿ: ಕೋವಿಡ್‌ ಸೋಂಕಿನ 4ನೇ ಅಲೆಗೆ ಇಡೀ ಜಗತ್ತು ಸಾಕ್ಷಿಯಾಗುತ್ತಿದೆ. ಹೊಸವರ್ಷ, ಕ್ರಿಸ್‌ಮಸ್‌ ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನರು ತೀವ್ರ ನಿಗಾ ವಹಿಸಬೇಕು ಎಂದು ಕೇಂದ್ರ ಸರ್ಕಾರ ಪುನಃ ಶುಕ್ರವಾರ ಎಚ್ಚರಿಸಿದೆ. ಅನಗತ್ಯ ಪ್ರವಾಸ ಮಾಡದಂತೆ, ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳದಂತೆ ಹಾಗೂ ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಮನವಿ ಕೇಂದ್ರದ ಅಧಿಕಾರಿಗಳು ಮನವಿ ಮಾಡಿದ್ದಾರೆ.  

Follow Us:
Download App:
  • android
  • ios