ನವದೆಹಲಿ(ಆ.24): ಭಾರತ ಹಾಗೂ ಚೀನಾ ಗಡಿ ಸಮಸ್ಯೆಗೆ ಇತಿಶ್ರೀ ಹಾಡಲು ಭಾರತ ಮುಂದಾಗಿದೆ.  ಹಲವು ಸುತ್ತಿನ ಮಾತುಕತೆ, ಉನ್ನತ ಮಟ್ಟದ ಮಾತುಕತೆ, ಭಾರತದ ಎಚ್ಚರಿಕೆ ಸೇರಿದಂತೆ ಹಲವು ಪ್ರಯೋಗಗಳನ್ನು ಮಾಡಿದ ಭಾರತಕ್ಕೆ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಇದೀಗ ಭಾರತೀಯ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ. 

 14 ಸಾವಿರ ಅಡಿ ಎತ್ತರದ ಲಡಾಖ್ ಗಡಿಯಲ್ಲಿ ಮೊಳಗಿದ ಜೈ ಹಿಂದ್ ಘೋಷಣೆ!

ಕಮಾಂಡರ್ ಮಟ್ಟದಿಂದ ಹಿಡಿದು ಉನ್ನತ ಮಟ್ಟದವರಿಗಿನ ಮಾತುಕತೆ ಫಲಪ್ರದವಾಗದಿದ್ದರೆ, ಭಾರತ ಸೇನೆ ಬಳಸಿ ಚೀನಾ ಜೊತೆಗಿನ ಗಡಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಮುಕ್ತವಾಗಿದೆ ಎಂದು ಬಿಪಿನ್ ರಾವತ್ ಹೇಳಿದ್ದಾರೆ. ರಾವತ್ ನೀಡಿರುವ ಈ ಹೇಳಿಕೆ ಸಂಚಲನ ಮೂಡಿಸಿದೆ. ಕಾರಣ ರಾವತ್ ಸೂಚಿಸಿದಂತೆ ಎಲ್ಲಾ ಸುತ್ತಿನ ಮಾತುಕತೆಗಳು ಮುಗಿದೆ. ಗುರುವಾರ(ಆ.20) ಭಾರತ ಹಾಗೂ ಚೀನಾ ಲಡಾಖ್ ಗಡಿ ಸಮಸ್ಯೆ ಕುರಿತು ಮಾತುಕತೆ ನಡೆಸಿದೆ. ಹೀಗಾಗಿ ಇದೀಗ ಭಾರತದ ಮುಂದಿರುವ ಆಯ್ಕೆ ಸೇನೆ ಬಳಸಿ ಚೀನಾ ಗಡಿ ಸಮಸ್ಯೆಗೆ ಪರಿಹಾರ ಹುಡುಕುವುದು.

ಭಾರತದ ನೆತ್ತಿಯ ಮೇಲೆ ಯುದ್ಧದ ಕಾರ್ಮೋಡ?: ಕಮಾಂಡರ್‌ಗಳಿಗೆ ಸೂಚನೆ!.

ರಾವತ್ ನೀಡಿದ ಹೇಳಿಕೆಗೆ ಚೀನಾ ಮಾತ್ರವಲ್ಲ, ಪಾಕಿಸ್ತಾನ, ನೇಪಾಳ ಸೇರಿದಂತೆ ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ದೇಶಗಳಿಗೆ ನಡುಕ ಶುರುವಾಗಿದೆ. ಶಾಂತಿ ಮಂತ್ರ ಪಠಿಸುವ ಭಾರತ ಏಕಾಏಕಿ ದಾಳಿಗೆ ಸಜ್ಜಾಗಲ್ಲ ಅನ್ನೋದು ಶತ್ರು ರಾಷ್ಟ್ರಗಳ ನಂಬಿಕೆಯಾಗಿದೆ. ಆದರೆ ರಾವತ್ ಹೇಳಿಕೆ ಆಕ್ರಮಣಕಾರಿಯಾಗಿ ಕೂಡಿದ್ದು, ಸೂಕ್ಷ್ಮತೆ  ಅರ್ಥಮಾಡಿಕೊಂಡರೆ ಗಂಭೀರತೆ ಸುಳಿವು ನೀಡಲಿದೆ. 

ಯುದ್ಧ ಸನ್ನದ್ಧ ಸ್ಥಿತಿಯಲ್ಲಿರಿ: ಕಮಾಂಡರ್‌ಗಳಿಗೆ ಸೇನಾ ಮುಖ್ಯಸ್ಥ ನರವಣೆ ಸೂಚನೆ!

ಸರ್ಕಾರ ಶಾಂತಿಯುತವಾಗಿ ಗಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಸ್ಟೇಟಸ್ ಕೋ ಕಾಯ್ದುಕೊಳ್ಳಲು ಶಾಂತಿಯುತ ಮಾರ್ಗ ಭಾರತದ ಮೊದಲ ಆಯ್ಕೆಯಾಗಿದೆ. ಈ ಕುರಿತು ಸೇನೆ ಹಾಗೂ ಸರ್ಕಾರ ಪ್ರಯತ್ನ ಮಾಡುತ್ತಿದೆ. ಆದರೆ ಈ ಆಯ್ಕೆಗಳು ವಿಫಲವಾದರೆ, ಭಾರತ ಮತ್ತೊಂದು ಆಯ್ಕೆ ಬಳಸಿಕೊಳ್ಳಲು ಮುಕ್ತವಾಗಿದೆ ಎಂದು ಬಿಪಿನ್ ರಾವತ್ ಹೇಳಿದ್ದಾರೆ.

ಕಳೆದ ಎರಡೂವರೆ ತಿಂಗಳಿನಿಂದ ಭಾರತ ಹಾಗೂ ಚೀನಾ ಗಡಿ ಸಮಸ್ಯೆ ಬಗೆಹರಿಸಲು ಮಾತುಕತೆ ನಡೆಸುತ್ತಿದೆ. ಆರಂಭದಲ್ಲಿ ಮಾತುಕತೆಯಲ್ಲಿ ಮೊಂಡುತನ ತೋರಿ ತನ್ನದೇ ವಾದ ಮುಂದಿಟ್ಟಿದ್ದ ಚೀನಾ, ಇತ್ತೀಚಿನ ಮಾತುಕತೆಗಳಲ್ಲಿ ಗಡಿಯಿಂದ ಹಿಂದಕ್ಕೆ ಸರಿಯುವ ಮಾತನಾಡುತ್ತಿದೆ. ಆದರೆ ಮಾತುಕತೆ ಬಳಿಕ ಮತ್ತೆ ಗಡಿ ಖ್ಯಾತೆ ತೆಗೆಯುತ್ತಿದೆ.  ಯೋಧರ ಸಂಘರ್ಷದ ಬಳಿಕ ಜುಲೈ 6 ರಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ದೂರವಾಣಿ ಮೂಲಕ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜೊತೆ ಮಾತುಕತೆ ನಡೆಸಿದ್ದರು. ಪರಿಸ್ಥಿತಿಯನ್ನು ತಿಳಿಗೊಳಿಸುವ ಎಲ್ಲಾ ಪ್ರಯತ್ನ ಮಾಡಿದ್ದರು.

ಗಲ್ವಾನ್ ಕಣಿವೆ ಸೇರಿದಂತೆ ಇನ್ನೆರಡು ವಲಯದಿಂದ ಚೀನಾ ಸೇನೆ ಹಿಂದೆ ಸರಿದಿದೆ. ಆದರೆ ಪ್ಯಾಂಗಾಂಗ್ ಲೇಕ್ ಬಳಿಯಿಂದ ಚೀನಾ ಸೇನೆ ಹಿಂದೆ ಸರಿದಿಲ್ಲ. ಈ ಕುರಿತು ಕಮಾಂಡರ್ ಮಟ್ಟದ ಮಾತುಕತೆ ಜೊತೆಗೆ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿದೆ. ಇದೀಗ ಭಾರತ ಆಕ್ರಮಣಕಾರಿ ದಾಳಿ ಕುರಿತು ಚಿಂತನೆ ನಡೆಸುತ್ತಿದೆ.