* ಹೊಸ ವಿಧಾನ ಬಳಸಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಎಣಿಕೆ* ಭಾರತದಲ್ಲಿ 5.2 ಲಕ್ಷ ಅಲ್ಲ 40 ಲಕ್ಷ ಸಾವು ಎಂದು ನಮೂದು* ಲೆಕ್ಕಾಚಾರದ ವಿಧಾನವೇ ಸರಿಯಿಲ್ಲ: ಭಾರತದಿಂದ ವಿರೋಧ* ಹೀಗಾಗಿ 4 ತಿಂಗಳಿಂದ ವರದಿ ಬಾಕಿ: ನ್ಯೂಯಾರ್ಕ್ ಟೈಮ್ಸ್
ನವದೆಹಲಿ(ಏ.18): ಜಗತ್ತಿನಲ್ಲಿ ಕೊರೋನಾ ಸೋಂಕಿನಿಂದ 2021ರ ಅಂತ್ಯದ ವೇಳೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆಯನ್ನು ಬಿಡುಗಡೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಂದಾಗಿದ್ದು, ಅದಕ್ಕೆ ಭಾರತ ವಿರೋಧ ವ್ಯಕ್ತಪಡಿಸಿದೆ ಎಂದು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ವಿವಿಧ ದೇಶಗಳು ನೀಡಿರುವ ಅಂಕಿಅಂಶಗಳ ಪ್ರಕಾರ ಜಗತ್ತಿನಲ್ಲಿ ಕೊರೋನಾದಿಂದ 2021ರ ಅಂತ್ಯಕ್ಕೆ 60 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಹಾಗೂ ಜಾಗತಿಕ ಮಟ್ಟದ ಕೆಲ ಗಣಿತಜ್ಞರು ಹೊಸ ವಿಧಾನದ ಮೂಲಕ ಜಗತ್ತಿನಲ್ಲಿ ಸಂಭವಿಸಿದ ಕೋವಿಡ್ ಸಾವಿನ ವರದಿ ಸಿದ್ಧಪಡಿಸಿದ್ದು, ಅದರಲ್ಲಿ 1.5 ಕೋಟಿ ಜನರು ಸಾವನ್ನಪ್ಪಿದ್ದಾರೆ ಎಂಬ ಫಲಿತಾಂಶ ಬಂದಿದೆ. ಈ ವರದಿಯಲ್ಲಿ ಭಾರತವೊಂದರಲ್ಲೇ 40 ಲಕ್ಷ ಜನರು ಕೊರೋನಾಕ್ಕೆ ಬಲಿಯಾಗಿದ್ದಾರೆ ಎಂದು ನಮೂದಿಸಲಾಗಿದೆ ಎಂದು ಭಾರತಕ್ಕೆ ತಿಳಿದುಬಂದಿದೆ. ಆದರೆ, ಭಾರತ ಸರ್ಕಾರದ ಅಂಕಿಅಂಶಗಳ ಪ್ರಕಾರ ಇಲ್ಲಿ 5.2 ಲಕ್ಷ ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಲೆಕ್ಕಾಚಾರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಬಳಸಿದ ವಿಧಾನವೇ ತಪ್ಪಾಗಿದೆ ಎಂದು ಭಾರತ ಸರ್ಕಾರ ಆಕ್ಷೇಪಿಸಿದೆ. ಆ ಕಾರಣದಿಂದ ನಾಲ್ಕು ತಿಂಗಳಿನಿಂದ ವರದಿ ಬಿಡುಗಡೆಯಾಗದೆ ಬಾಕಿಯುಳಿದಿದೆ ಎಂದು ಪತ್ರಿಕೆಯ ವರದಿ ತಿಳಿಸಿದೆ.
‘ಸಾವಿನ ಲೆಕ್ಕಾಚಾರಕ್ಕೆ ಡಬ್ಲ್ಯುಎಚ್‌ಒ ಅನುಸರಿಸಿದ ಪ್ರಕ್ರಿಯೆ ಹಾಗೂ ದೇಶಗಳ ಅಭಿಪ್ರಾಯಕ್ಕೆ ನೀಡಿದ ಮನ್ನಣೆ ಸೂಕ್ತವಾಗಿಲ್ಲ. ಲೆಕ್ಕಾಚಾರದ ವಿಧಾನಕ್ಕೆ ವೈಜ್ಞಾನಿಕ ಆಧಾರವಿಲ್ಲ. ಇದು ಡಬ್ಲ್ಯುಎಚ್‌ಒದಂತಹ ಘನತೆಯುಳ್ಳ ಸಂಸ್ಥೆಯಿಂದ ನಿರೀಕ್ಷಿಸುವ ಗುಣಮಟ್ಟವಲ್ಲ’ ಎಂದು ಭಾರತ ಆಕ್ಷೇಪಿಸಿದೆ ಎಂದು ವಿಶ್ವ ಸಂಸ್ಥೆಯ ಸಂಖ್ಯಾಶಾಸ್ತ್ರ ಆಯೋಗ ಹೇಳಿದೆ.
ಸರ್ಕಾರದ ನಿರ್ಲಕ್ಷ್ಯದಿಂದ 40 ಲಕ್ಷ ಜನ ಬಲಿ: ರಾಹುಲ್
ಕೊರೋನಾದಿಂದಾಗಿ 2021ರ ಅಂತ್ಯದ ವೇಳೆ ಭಾರತದಲ್ಲಿ 40 ಲಕ್ಷ ಜನ ಮೃತಪಟ್ಟಿದ್ದಾರೆ ಎಂಬ ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುನರುಚ್ಚರಿಸಿದ್ದು, ಇದಕ್ಕೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಕಿಡಿಕಾರಿದ್ದಾರೆ.
ರಾಹುಲ್ ಈ ಕುರಿತು ಟ್ವಿಟ್ ಮಾಡಿ, ನಾನು ಈ ಮೊದಲೆ ತಿಳಿಸಿರುವಂತೆ ಭಾರತದಲ್ಲಿ ಕೇವಲ 5.2 ಲಕ್ಷ ಜನ ಕೊರೋನಾದಿಂದ ಮೃತಪಟ್ಟಿಲ್ಲ. ಬದಲಿಗೆ 40 ಲಕ್ಷ ಭಾರತೀಯರು ಸಾವಿಗೀಡಾಗಿದ್ದಾರೆ. ಪ್ರಧಾನಿ ಮೋದಿ ತಾವು ಸತ್ಯ ಹೇಳುವುದಿಲ್ಲ, ಸತ್ಯ ಹೇಳಲು ಹೊರಟವರ ಬಾಯಿಯನ್ನು ಮುಚ್ಚಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಮೃತಪಟ್ಟವರ ಕುಟುಂಬಗಳಿಗೆ ತಲಾ 4 ಲಕ್ಷ ರು. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರವನ್ನು ವಾರ ಆಗ್ರಹಿಸಿದ್ದಾರೆ.
