ನವದೆಹಲಿ(ಜೂ.15): ಜಮ್ಮು-ಕಾಶ್ಮೀರದ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಯೋಧರ ಮಧ್ಯೆ ಕಲಹಗಳು ಹಾಗೂ ನೆರೆಯ ಚೀನಾ ಭಾರತದ ಭೂ ಪ್ರದೇಶಗಳಿಗೆ ಲಗ್ಗೆ ಇಟ್ಟಿದೆಯೇ ಎಂಬ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂಬ ಪ್ರತಿಪಕ್ಷಗಳ ಆಗ್ರಹದ ಬೆನ್ನಲ್ಲೇ, ರಾಷ್ಟ್ರೀಯ ಆತ್ಮಗೌರವದ ವಿಚಾರದಲ್ಲಿ ರಾಜೀ ಪ್ರಶ್ನೆಯೇ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಗುಡುಗಿದ್ದಾರೆ.

ಇಂಡೋ-ಚೀನಾ ಗಡಿ ಬಿಕ್ಕಟ್ಟು; ಪರಿಸ್ಥಿತಿ ತಿಳಿಗೊಳಿಸಲು ಅಖಾಡಕ್ಕಿಳಿದ ಲೆ.ಜ.ಹರೀಂದರ್ ಸಿಂಗ್!

ಅಲ್ಲದೆ, ಶತ್ರು ರಾಷ್ಟ್ರಗಳ ಅಟ್ಟಹಾಸಗಳನ್ನು ಬಗ್ಗು ಬಡಿಯುವ ಸಾಮರ್ಥ್ಯಕ್ಕೆ ಅಗತ್ಯವಿರುವಷ್ಟು ಭದ್ರತಾ ಪಡೆ ಹೊಂದಿರುವ ಭಾರತವು ಯಾವುದೇ ಕಾರಣಕ್ಕೂ ದುರ್ಬಲ ರಾಷ್ಟ್ರವಲ್ಲ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಮೂಲಕ ಚೀನಾ ಭಾರತದ ಗಡಿ ಪ್ರವೇಶಿಸಿದೆ ಎಂಬ ಪ್ರತಿಪಕ್ಷಗಳ ಆರೋಪ ಮತ್ತು ಭಾರತದ ಮೇಲೆ ತನ್ನ ಪ್ರತಾಪ ತೋರಿಸಲು ಯತ್ನಿಸುತ್ತಿರುವ ಚೀನಾ, ಪಾಕಿಸ್ತಾನ ಮತ್ತು ಹೊಸದಾಗಿ ನೇಪಾಳಕ್ಕೂ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ಭಾನುವಾರ ವಿಡಿಯೋ ಸಂವಾದದ ಮೂಲಕ ಜಮ್ಮು-ಕಾಶ್ಮೀರವನ್ನುದ್ದೇಶಿಸಿ ಮಾತನಾಡಿದ ರಾಜನಾಥ್‌, ಗಡಿಯಲ್ಲಿ ನಡೆಯುತ್ತಿರುವ ಯಾವುದೇ ಬೆಳವಣಿಗೆಗಳನ್ನು ಸಂಸತ್ತು ಅಥವಾ ಯಾರಿಂದಲೂ ಮುಚ್ಚಿಡುವುದಿಲ್ಲ. ಸಮಯ ಬಂದಾಗ ಅವುಗಳ ಎಲ್ಲ ಮಾಹಿತಿಗಳನ್ನು ಸಂಸತ್ತಿನ ಮುಂದಿಡುವುದಾಗಿ ಪ್ರತಿಪಕ್ಷಗಳಿಗೆ ಭರವಸೆ ನೀಡಿದ್ದಾರೆ.

ಮತ್ತೆ ಚೀನಾ ಗಡಿ ಕಿರಿಕ್, ಲಡಾಖ್‌ನಲ್ಲಿ 12 ಯುದ್ಧ ವಿಮಾನಗಳ ಹಾರಾಟ!

ಅಲ್ಲದೆ, ಎಂಥ ಸಂದರ್ಭವೇ ಬಂದರೂ ದೇಶದ ಆತ್ಮಗೌರವ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಭಾರತ ಈಗ ದುರ್ಬಲ ರಾಷ್ಟ್ರವಾಗಿ ಉಳಿದಿಲ್ಲ. ಶತ್ರು ರಾಷ್ಟ್ರಗಳನ್ನು ಬಗ್ಗು ಬಡಿಯುವ ಸಾಮರ್ಥ್ಯ ಭಾರತದ ಸೈನ್ಯಕ್ಕೂ ಇದೆ. ಆದರೆ, ಇದನ್ನುಯಾರನ್ನೋ ಬೆದರಿಸಲು ಬಳಸಲ್ಲ. ಬದಲಾಗಿ ದೇಶದ ಭದ್ರತೆಗಾಗಿ ಸದುಪಯೋಗಪಡಿಸಿಕೊಳ್ಳುತ್ತೇವೆ. ಗಡಿಯಲ್ಲಿ ಉದ್ಭವಾಗಿರುವ ಬಿಕ್ಕಟ್ಟನ್ನು ಪರಸ್ಪರ ರಾಜತಾಂತ್ರಿಕ ಹಾಗೂ ಸೇನಾ ಅಧಿಕಾರಿಗಳ ಹಂತದ ಮಾತುಕತೆ ಮೂಲಕ ಪರಿಹಾರಿಸಿಕೊಳ್ಳಲು ಚೀನಾ ಒಪ್ಪಿಕೊಂಡಿದೆ. ಇದಕ್ಕೆ ನಾವು ಬದ್ಧರಾಗಿದ್ದೇವೆ ಎಎಂದಿದ್ದಾರೆ.