ನವದೆಹಲಿ (ನ.06): ಭಾರತ ಸರ್ಕಾರದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕೊರೋನಾ ಲಸಿಕೆ ‘ಕೋವ್ಯಾಕ್ಸಿನ್‌’ ನಿರೀಕ್ಷೆಗೂ ಮೊದಲೇ, ಅಂದರೆ ಫೆಬ್ರವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಸರ್ಕಾರದ ಹಿರಿಯ ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಈ ಮೊದಲು ಲಸಿಕೆ ಜೂನ್‌ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆ ಇತ್ತು.

ಭಾರತ್‌ ಬಯೋಟೆಕ್‌ ಎಂಬ ಖಾಸಗಿ ಔಷಧ ಕಂಪನಿಯು ಸರ್ಕಾರಿ ಸ್ವಾಮ್ಯದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮತ್ತು ಹೈದರಾಬಾದ್‌ ವೈರಾಣು ಸಂಸ್ಥೆಯ ಸಹಯೋಗದಲ್ಲಿ ಈ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಈಗಾಗಲೇ ಎರಡು ಹಂತದ ಪ್ರಯೋಗದಲ್ಲಿ ಲಸಿಕೆ ಯಶಸ್ವಿಯಾಗಿದ್ದು, ಮೂರನೇ ಹಂತದ ಕೊನೆಯ ಪ್ರಯೋಗ ಈ ತಿಂಗಳು ಆರಂಭವಾಗುತ್ತಿದೆ. ಇಲ್ಲಿಯವರೆಗಿನ ಎಲ್ಲಾ ಪರೀಕ್ಷೆಯಲ್ಲೂ ಲಸಿಕೆ ಧನಾತ್ಮಕ ಫಲಿತಾಂಶ ನೀಡಿದೆ. ಕೊರೋನಾ ಬಾರದಂತೆ ತಡೆಯಲು ಲಸಿಕೆ ಸಮರ್ಥವೂ ಸುರಕ್ಷಿತವೂ ಆಗಿದೆ ಎಂಬುದು ಕಂಡುಬಂದಿದೆ. ಹೀಗಾಗಿ ಫೆಬ್ರವರಿ ಅಥವಾ ಮಾಚ್‌ರ್‍ನಲ್ಲಿ ಇದು ಬಳಕೆಗೆ ಲಭ್ಯವಾಗಬಹುದು ಎಂದು ಐಸಿಎಂಆರ್‌ನ ಹಿರಿಯ ವಿಜ್ಞಾನಿ ರಜನಿಕಾಂತ್‌ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಒಂದಂಕಿಗೆ ಇಳಿದ ಸೋಂಕಿತರ ಸಾವಿನ ಸಂಖ್ಯೆ ..

ಫೆಬ್ರವರಿಯಲ್ಲಿ ಈ ಲಸಿಕೆ ಬಿಡುಗಡೆಯಾದರೆ ಭಾರತದಲ್ಲಿ ಬಿಡುಗಡೆಯಾಗುವ ಮೊದಲ ಕೊರೋನಾ ಲಸಿಕೆ ಎಂಬ ಹೆಗ್ಗಳಿಕೆ ಪಡೆಯುವ ಸಾಧ್ಯತೆಯಿದೆ. ‘ಕೋವ್ಯಾಕ್ಸಿನ್‌ ಲಸಿಕೆಯನ್ನು ಮೂರನೇ ಹಂತದ ಪ್ರಯೋಗಕ್ಕೂ ಮೊದಲೇ ಬೇಕಾದರೂ ಜನರಿಗೆ ನೀಡಬಹುದು. ಆದರೆ, ಆ ಬಗ್ಗೆ ಆರೋಗ್ಯ ಇಲಾಖೆ ನಿರ್ಧಾರ ಕೈಗೊಳ್ಳಬೇಕು. ಈಗಾಗಲೇ 1 ಮತ್ತು 2ನೇ ಹಂತದ ಪರೀಕ್ಷೆಯಲ್ಲಿ, ಅಂದರೆ ಸುರಕ್ಷತೆ ಮತ್ತು ದಕ್ಷತೆಯ ಪರೀಕ್ಷೆಯಲ್ಲಿ, ಇದು ಪಾಸಾಗಿದೆ. ಹೀಗಾಗಿ ಜನರಿಗೆ ಈಗಲೇ ಲಸಿಕೆ ನೀಡಬಹುದು. ಜನರು ರಿಸ್ಕ್‌ ತೆಗೆದುಕೊಳ್ಳಲು ಸಿದ್ಧರಿದ್ದರೆ ಲಸಿಕೆ ಪಡೆದುಕೊಳ್ಳಬಹುದು. ಆದರೆ, 3ನೇ ಹಂತದ ಪರೀಕ್ಷೆ ಮುಗಿಯುವವರೆಗೂ ಶೇ.100ರಷ್ಟುಗ್ಯಾರಂಟಿ ನೀಡಲು ಸಾಧ್ಯವಿಲ್ಲ’ ಎಂದೂ ಅವರು ಹೇಳಿದ್ದಾರೆ.

ಕೋವ್ಯಾಕ್ಸಿನ್‌ ಅಲ್ಲದೆ ಬ್ರಿಟನ್ನಿನ ಪ್ರಸಿದ್ಧ ಆಸ್ಟ್ರಾಜೆನೆಕಾ ಲಸಿಕೆ, ಮಾಡರ್ನಾ ಇಂಕ್‌ ಲಸಿಕೆ, ಫೈಸರ್‌ ಇಂಕ್‌ ಲಸಿಕೆ ಹಾಗೂ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಲಸಿಕೆ ಮುಂತಾದವೂ ಈಗಾಗಲೇ ಮೂರನೇ ಹಂತದ ಪ್ರಯೋಗದಲ್ಲಿವೆ.