ಬೆಂಗಳೂರಲ್ಲಿ ಒಂದಂಕಿಗೆ ಇಳಿದ ಸೋಂಕಿತರ ಸಾವಿನ ಸಂಖ್ಯೆ
ಒಂದು ತಿಂಗಳ ಬಳಿಕ ಮೊದಲ ಬಾರಿಗೆ 9 ಮಂದಿ ಸೋಂಕಿನಿಂದ ಸಾವು| ಕೊರೋನಾ ಸೋಂಕಿತರ ಆರೈಕೆಗಾಗಿ ನಿರ್ಮಿಸಿದ ಸರ್ಕಾರಿ ಆರೈಕೆ ಕೇಂದ್ರಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದೀಗ ಸಂಖ್ಯೆ ನಾಲ್ಕಕ್ಕೆ ಇಳಿಕೆ|ಗುರುವಾರ 1,627 ಕೇಸ್|
ಬೆಂಗಳೂರು(ನ.06): ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಒಂಬತ್ತು ಜನರು ಸೋಂಕಿನಿಂದ ಮೃತಪಡುವುದರೊಂದಿಗೆ ಒಂದು ತಿಂಗಳ ಬಳಿಕ ಸಾವಿನ ಸಂಖ್ಯೆ ಒಂದಂಕಿಗೆ ಇಳಿದಿದೆ.
ಕಳೆದ ಸೆ.28ರಂದು 9 ಮಂದಿ ಸೋಂಕಿನಿಂದ ಮೃತಪಟ್ಟಿದ್ದರು. ಸೆ.28ರ ಬಳಿಕ ಅಕ್ಟೋಬರ್ ತಿಂಗಳಲ್ಲಿ ಸರಾಸರಿ ದಿನಕ್ಕೆ 30 ಮಂದಿ ಮೃತರಾಗುತ್ತಿದ್ದರು. ಅಕ್ಟೋಬರ್ 17ರಂದು ಅತಿ ಕಡಿಮೆ 14 ಮಂದಿ, ಹಾಗೂ 9ರಂದು ಅತಿ ಹೆಚ್ಚು 57 ಮಂದಿ ಮೃತಪಟ್ಟಿದ್ದರು. ಈ ತಿಂಗಳಲ್ಲಿ ಒಟ್ಟು 928 ಮಂದಿ ಸಾವನ್ನಪ್ಪಿದ್ದರು. ಅದೇ ರೀತಿ ಸೆಪ್ಟಂಬರ್ 28ರಂದು ಅತಿ ಕಡಿಮೆ 9 ಮಂದಿ, ಸೆ.29ರಂದು ಅತಿ ಹೆಚ್ಚು 67 ಮಂದಿ ಮೃತಪಟ್ಟಿದ್ದರು. ಈ ವರೆಗೆ ಒಟ್ಟು 3,926 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಕೆಲವು ದಿನಗಳಿಂದ ನಗರದಲ್ಲಿನ ಸಾವಿನ ಸಂಖ್ಯೆ ಇಳಿಮುಖದತ್ತ ಸಾಗಿದ್ದು, ಕಳೆದ ಐದು ದಿನಗಳ ಅವಧಿಯಲ್ಲಿ ನಿತ್ಯ 10ರಿಂದ 15 ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಆದರೆ ಗುರುವಾರ ಈ ಸಂಖ್ಯೆ ಒಂದಂಕಿಗೆ ಇಳಿದಿದೆ.
ಗುರುವಾರ 1,627 ಕೇಸ್:
ಬೆಂಗಳೂರಿನಲ್ಲಿ ಗುರುವಾರ 1,627 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, 3,708 ಮಂದಿ ಗುಣಮುಖರಾಗಿದ್ದಾರೆ. ಒಂಬತ್ತು ಮಂದಿ ಮೃತರಾಗಿದ್ದಾರೆ. 464 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ ಪತ್ತೆಯಾದ ಹೊಸ ಸೋಂಕಿನ ಪ್ರಕರಣಗಳೊಂದಿಗೆ ಈವರೆಗಿನ ಸೋಂಕಿತರ ಸಂಖ್ಯೆ 3,45,134ಕ್ಕೆ ಏರಿಕೆಯಾಗಿದ್ದು, ಗುಣಮುಖರ ಸಂಖ್ಯೆ 3,24,491 ತಲುಪಿದೆ. ನಗರದಲ್ಲಿ ಪ್ರಸ್ತುತ 16,716 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 464 ಸೋಂಕಿತರ ಆರೋಗ್ಯ ಗಂಭೀರವಾಗಿದೆ.
ಸಕ್ರಿಯ ಪ್ರಕರಣಗಳ ಪೈಕಿ 3,221 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 247 ಸರ್ಕಾರಿ ಕೊರೋನಾ ಆರೈಕೆ ಕೇಂದ್ರದಲ್ಲಿ, 553 ಖಾಸಗಿ ಆರೈಕೆ ಕೇಂದ್ರದಲ್ಲಿ 2,364 ಮಂದಿ ಖಾಸಗಿ ಚಿಕಿತ್ಸೆ ಪಡೆಯುತ್ತಿದ್ದು, 10,053 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಸೊನ್ನೆಯತ್ತ ಸಾಗಿವೆ ಕೊರೋನಾ ಪಾಸಿಟಿವ್ ಪ್ರಕರಣಗಳು...!
ನಾಲ್ಕಕ್ಕಿಳಿದ ಆರೈಕೆ ಕೇಂದ್ರಗಳ ಸಂಖ್ಯೆ
ಕೊರೋನಾ ಸೋಂಕಿತರ ಆರೈಕೆಗಾಗಿ ನಿರ್ಮಿಸಿದ ಸರ್ಕಾರಿ ಆರೈಕೆ ಕೇಂದ್ರಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದೀಗ ಸಂಖ್ಯೆ ನಾಲ್ಕಕ್ಕೆ ಇಳಿಕೆಯಾಗಿದೆ. ಸೋಂಕಿತರು ಹೆಚ್ಚಾಗಿ ಹೋಂ ಐಸೋಲೇಷನ್‌ಗೆ ಆಸಕ್ತಿ ವಹಿಸುತ್ತಿರುವ ಹಿನ್ನೆಲೆಯಲ್ಲಿ ಆರೈಕೆ ಕೇಂದ್ರಗಳನ್ನು ಮುಚ್ಚಲಾಗುತ್ತಿದೆ ಎಂದು ಆರೈಕೆ ಕೇಂದ್ರದ ಉಸ್ತುವಾರಿ ಅಧಿಕಾರಿ ಸರ್ಫರಾಜ್ ಖಾನ್ ತಿಳಿಸಿದ್ದಾರೆ. ಸದ್ಯ ಹಜ್ ಭವನ, ಸರ್ಕಾರಿ ಹೋಮಿಯೋಪತಿ ಆಸ್ಪತ್ರೆ, ಸರ್ಕಾರಿ ಆಯುರ್ವೇಧ ಕಾಲೇಜು ಹಾಗೂ ಎಚ್‌ಎಎಲ್ ಆರೈಕೆ ಕೇಂದ್ರದಲ್ಲಿ ಈಗ 247 ರೋಗಿಗಳು ಆರೈಕೆ ಪಡೆಯುತ್ತಿದ್ದು, ಇನ್ನು 581 ಹಾಸಿಗೆ ಖಾಲಿ ಇವೆ.