Asianet Suvarna News Asianet Suvarna News

10 ವರ್ಷದಲ್ಲಿ ದೇಶದಲ್ಲಿ 1 ಸಾವಿರಕ್ಕೂ ಹೆಚ್ಚು ಹುಲಿಗಳ ಸಾವು..!

ದೇಶದಲ್ಲಿ 2012 ರಿಂದ 1,059 ಹುಲಿಗಳು ಮೃತಪಟ್ಟಿವೆ. ಈ ಪೈಕಿ, ಮಧ್ಯ ಪ್ರದೇಶದಲ್ಲೇ ನಮ್ಮ ರಾಷ್ಟ್ರೀಯ ಪ್ರಾಣಿ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದೆ ಎಂದೂ ಕೇಂದ್ರ ಸರ್ಕಾರ ತಿಳಿಸಿದೆ. ಅಲ್ಲದೆ, ಈ ಅವಧಿಯಲ್ಲಿ ಕರ್ನಾಟಕದಲ್ಲೂ 150 ಹುಲಿಗಳು ಬಲಿಯಾಗಿದೆ.

India lost over 1000 tigers since 2012 150 in karnataka ash
Author
Bangalore, First Published Jul 27, 2022, 3:15 PM IST

ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ. ದೇಶದಲ್ಲಿ ಹುಲಿಗಳ ಜನಸಂಖ್ಯೆಯೂ ಹೆಚ್ಚಿದೆ. ಆದರೂ, ಆಗಾಗ್ಗೆ ಹುಲಿಗಳು ನಾನಾ ಕಾರಣಗಳಿಗಾಗಿ ಬಲಿಯಾಗುತ್ತಿವೆ. ಸದ್ಯ, ಹುಲಿಗಳ ಸಾವಿನ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಎನ್‌ಟಿಸಿಎ ಮಾಹಿತಿ ನೀಡಿದ್ದು, ಕೆಲ ಶಾಕಿಂಗ್ ವರದಿಗಳು ಈ ವೇಳೆ ಹೊರಬಂದಿವೆ.

ದೇಶದಲ್ಲಿ 2012 ರಿಂದ 1,059 ಹುಲಿಗಳು ಮೃತಪಟ್ಟಿವೆ. ಈ ಪೈಕಿ, ದೇಶದ ಹುಲಿಗಳ ರಾಜ್ಯ ಎಂದೂ ಹೇಳಲಾದ ಮಧ್ಯ ಪ್ರದೇಶದಲ್ಲೇ ನಮ್ಮ ರಾಷ್ಟ್ರೀಯ ಪ್ರಾಣಿ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದೆ ಎಂದೂ ಕೇಂದ್ರ ಸರ್ಕಾರ ತಿಳಿಸಿದೆ. ಅಲ್ಲದೆ, ಈ ಅವಧಿಯಲ್ಲಿ ಕರ್ನಾಟಕದಲ್ಲೂ 150 ಹುಲಿಗಳು ಬಲಿಯಾಗಿದೆ ಎಂದೂ ಕೇಂದ್ರ ಸರ್ಕಾರದ ವರದಿ ಹೇಳುತ್ತದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ನೀಡಿದ ಮಾಹಿತಿಯ ಪ್ರಕಾರ ಈ ವರ್ಷದಲ್ಲಿ ಈವರೆಗೆ 75 ಹುಲಿಗಳು ಮೃತಪಟ್ಟಿದ್ದರೆ, ಕಳೆದ ವರ್ಷ ಅಂದರೆ 2021ರಲ್ಲಿ 127 ಹುಲಿಗಳು ಬಲಿಯಾಗಿದ್ದವು. 2012 - 2022 ರ ಅವಧಿಯಲ್ಲಿ ಕಳೆದ ವರ್ಷವೇ ಹೆಚ್ಚು ಹುಲಿಗಳು ಮೃತಪಟ್ಟಿವೆ ಎನ್ನುವ ಆಘಾತಕಾರಿ ಮಾಹಿತಿ ಹೊರಬಂದಿದೆ. 

ಇದನ್ನು ಓದಿ: ಅತಿ ಹೆಚ್ಚು ಹುಲಿಗಳ ಸಾವು: ಕರ್ನಾಟಕ ದೇಶಕ್ಕೇ ನಂ.2

ಇನ್ನು, 2020ರಲ್ಲಿ 106 ಹುಲಿಗಳು ಬಲಿಯಾಗಿದ್ದರೆ, 2019ರಲ್ಲಿ 96, 2018 ರಲ್ಲಿ 101, 2017ರಲ್ಲಿ 117, 2016ರಲ್ಲಿ 121, 2015 ರಲ್ಲಿ 82, 2014 ರಲ್ಲಿ 78, 2013ರಲ್ಲಿ 68 ಹಾಗೂ 2012ರಲ್ಲಿ 88 ಹುಲಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ. ಈ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ 270 ಹುಲಿಗಳು ಮೃತಪಟ್ಟಿದ್ದರೆ, ಮಹಾರಾಷ್ಟ್ರದಲ್ಲಿ 183, ಕರ್ನಾಟಕದಲ್ಲಿ 150, ಉತ್ತರಾಖಂಡದಲ್ಲಿ 96, ಅಸ್ಸಾಂನಲ್ಲಿ 72 , ತಮಿಳುನಾಡಿನಲ್ಲಿ 66, ಉತ್ತರ ಪ್ರದೇಶದಲ್ಲಿ 56 ಹಾಗೂ ಕೇರಳದಲ್ಲಿ 55 ಹುಲಿಗಳು ಬಲಿಯಾಗಿವೆ ಎಂದೂ ತಿಳಿದುಬಂದಿದೆ. 
        
ಕಳೆದ ಒಂದೂವರೆ ವರ್ಷದಲ್ಲಿ ಮಧ್ಯಪ್ರದೇಶದಲ್ಲಿ 68 ಹುಲಿಗಳು ಮೃತಪಟ್ಟಿದ್ದರೆ, ಮಹಾರಾಷ್ಟ್ರದಲ್ಲಿ 42 ಹುಲಿಗಳು ಬಲಿಯಾಗಿದೆ. 2018ರ ಹುಲಿ ಗಣತಿಯಡಿ ಮಧ್ಯಪ್ರದೇಶದಲ್ಲಿ  ಹುಲಿಗಳ ಜನಸಂಖ್ಯೆ 526 ಇದ್ದರೆ, ಕರ್ನಾಟಕದಲ್ಲಿ 524 ಹುಲಿಗಳಿವೆ. 2012 ರಿಂದ 2020 ರ ಅವಧಿಯಲ್ಲಿ 193 ಹುಲಿಗಳನ್ನು ಬೇಟೆಯಾಡಿ ಕೊಂದಿದ್ದಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ. 

ಇನ್ನು, 2021ರ ಜನವರಿಯಿಂದ ಹುಲಿ ಬೇಟೆಯ ವರದಿ ಇನ್ನೂ ಲಭ್ಯವಿಲ್ಲ. ಅಲ್ಲದೆ,ಕಳೆದ 10 ವರ್ಷಗಳಿಂದ ಹುಲಿಗಳ ಸಾವಿಗೆ ಪ್ರಮುಖ ಕಾರಣ ಬೇಟೆ ಎಂದೂ ಎನ್‌ಟಿಸಿಎ ವರದಿ ಹೇಳುತ್ತದೆ. ಹುಲಿಯ ಸಾವು ಸಹಜವೋ ಅಥವಾ ಬೇಟೆಯಿಂದ ಬಲಿಯಾಗಿರುವುದೋ ಎಂಬ ಬಗ್ಗೆ ಸರ್ಕಾರ ನಿರ್ಧಾರತೆಗೆದುಕೊಳ್ಳುತ್ತದೆ. ಒಂದು ವೇಳೆ ಹುಲಿಗಳ ಸಾವಿನ ಬಗ್ಗೆ ಅನುಮಾನಗಳಿದ್ದರೆ, ರಾಷ್ಟ್ರಪ್ರಾಣಿಯ ಸಾವಿಗೆ ಬೇಟೆಯನ್ನೇ ಕಾರಣವೆಂದು ತೀರ್ಮಾನಿಸಲಾಗುತ್ತದೆ ಎಂದೂ ಹೇಳಲಾಗಿದೆ. 

25ನೇ ವರ್ಷದಲ್ಲಿ ಅಸುನೀಗಿದ ವಿಶ್ವದ ಅತ್ಯಂತ ಹಿರಿಯ ಹುಲಿ!

ಕಳೆದ 3 ವರ್ಷಗಳಲ್ಲಿ 329 ಹುಲಿಗಳು ಬಲಿ
ಭಾರತದಲ್ಲಿ ಕಳೆದ 3 ವರ್ಷಗಳಲ್ಲಿ 329 ಹುಲಿಗಳು ಬಲಿಯಾಗಿದ್ದು, ಇದಕ್ಕೆ ಬೇಟೆ, ಸಹಜ ಹಾಗೂ ಅಸಹಜ ಸಾವುಗಳು ಕಾರಣ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇನ್ನೊಂದೆಡೆ, ಈ ಅವಧಿಯಲ್ಲಿ 307 ಆನೆಗಳು ಬೇಟೆ, ವಿದ್ಯುತ್‌ ಅವಘಡಕ್ಕೆ ಬಲಿ, ವಿಷಪೂರಿತ ಆಹಾರ ಸೇವನೆ ಹಾಗೂ ರೈಲು ಅಪಘಾತದಂತಹ ಕಾರಣಗಳಿಗೆ ಮೃತಪಟ್ಟಿದೆ ಎಂದೂ ಮಾಹಿತಿ ನೀಡಿದೆ. 

2019ರಲ್ಲಿ 96 ಹುಲಿಗಳು ಮೃತಪಟ್ಟಿದ್ದರೆ, 2020ರಲ್ಲಿ 106 ಹಾಗೂ 2021ರಲ್ಲಿ 127 ಹುಲಿಗಳು ಬಲಿಯಾಗಿದೆ ಎಂದು ಕೇಂದ್ರ ಪರಿಸರ ಸಚಿವ ಅಶ್ವಿನಿ ಕುಮಾರ್‌ ಚೌಬೇ ಅವರು ಲೋಕಸಭೆಯಲ್ಲಿ ಸೋಮವಾರ ವರದಿ ನೀಡಿದರು. ಇನ್ನು, ಈ ಪೈಕಿ 68 ಹುಲಿಗಳು ಸಹಜ ಸಾವಿಗೆ ಮೃತಪಟ್ಟಿದ್ದರೆ, 5 ಹುಲಿಗಳು ಅಸಹಜವಾಗಿ ಮೃತಪಟ್ಟಿವೆ. ಇನ್ನು, 30 ಹುಲಿಗಳು ಬೇಟೆಗೆ ಬಲಿಯಾಗಿದ್ದರೆ, 197 ಹುಲಿಗಳ ಸಾವಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ. 

Follow Us:
Download App:
  • android
  • ios