ನವದೆಹಲಿ(ಫೆ.05): ಉಪಗ್ರಹಕ್ಕೆ ಪರ್ಯಾಯವಾಗಿ ಸರ್ವೇಕ್ಷಣೆಗೆ ಬಳಸಬಹುದಾದ ಅತ್ಯಾಧುನಿಕ ಡ್ರೋನ್‌ ಬೆಂಗಳೂರಿನಲ್ಲಿ ಅಭಿವೃದ್ಧಿಯಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿ. (ಎಚ್‌ಎಎಲ್‌) ಮತ್ತು ಬೆಂಗಳೂರು ಮೂಲದ ನ್ಯೂಸ್ಪೇಸ್‌ ಎಂಬ ಸ್ಟಾರ್ಟಪ್‌ ಸಂಸ್ಥೆ ಜಂಟಿಯಾಗಿ ‘ಇನ್‌ಫಿನಿಟಿ’ ಹೆಸರಿನ ಈ ಡ್ರೋನ್‌ ಅಭಿವೃದ್ಧಿ ಪಡಿಸುತ್ತಿದ್ದು, ಮೂರರಿಂದ ಐದು ವರ್ಷದಲ್ಲಿ ಭಾರತೀಯ ಸೇನಾಪಡೆಯ ಬಳಕೆಗೆ ಸಿಗುವ ಸಾಧ್ಯತೆಯಿದೆ.

ಈ ಡ್ರೋನ್‌ನ ವಿಶೇಷತೆಯೆಂದರೆ ಇದು ಸಾಮಾನ್ಯ ಡ್ರೋನ್‌ಗಳಿಗಿಂತ ಬಹಳ ಹೆಚ್ಚು ಎತ್ತರದಲ್ಲಿ, ಅಂದರೆ 65,000 ಅಡಿಗಿಂತ ಮೇಲೆ ಸತತ 90 ದಿನಗಳ ಕಾಲ ಹಾರಾಡಬಲ್ಲದು. ಅಲ್ಲಿಂದಲೇ ನೆಲದ ಮೇಲಿನ ದೃಶ್ಯಗಳನ್ನು ಚಿತ್ರೀಕರಿಸಬಲ್ಲದು ಮತ್ತು ಸೇನಾಪಡೆಗಳು ವಾಯು ದಾಳಿಗೆಂದು ಬಳಸುವ ಡ್ರೋನ್‌ಗಳ ಸಂಪರ್ಕ ಜಾಲವನ್ನು ಈ ಡ್ರೋನ್‌ ‘ಮಾಸ್ಟರ್‌ ಡ್ರೋನ್‌’ ರೀತಿಯಲ್ಲಿ ಮೇಲ್ವಿಚಾರಣೆ ನಡೆಸಬಲ್ಲದು. ಎಲ್ಲಕ್ಕಿಂತ ಮುಖ್ಯವಾಗಿ, ವಾಯುದಾಳಿಯ ದೃಶ್ಯಗಳನ್ನು ಇದು ಲೈವ್‌ ಆಗಿ ಸೇನಾಪಡೆಯ ಕೇಂದ್ರಕ್ಕೆ ರವಾನಿಸಬಲ್ಲದು.

2019ರಲ್ಲಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಉಗ್ರರ ಕ್ಯಾಂಪ್‌ಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದಾಗ ಆ ದಾಳಿ ನಿಜವಾಗಿಯೂ ನಡೆದಿದೆಯೇ ಎಂದು ಕೆಲವರು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಲು ಸರಿಯಾದ ಸಾಕ್ಷ್ಯಗಳಿರಲಿಲ್ಲ. ಈಗ ಅಭಿವೃದ್ಧಿಯಾಗುತ್ತಿರುವ ಡ್ರೋನ್‌ ಅಂತಹ ದಾಳಿಯನ್ನು ಲೈವ್‌ ಆಗಿ ಪ್ರಸಾರ ಮಾಡುವ ಸಾಮರ್ಥ್ಯ ಹೊಂದಿದೆ. ಮಾನವರಹಿತ ವಾಯುದಾಳಿ ವ್ಯವಸ್ಥೆಯಲ್ಲಿ ಈ ಡ್ರೋನ್‌ ಕ್ರಾಂತಿಕಾರಿ ಆವಿಷ್ಕಾರವಾಗಲಿದೆ ಎಂದು ಹೇಳಲಾಗಿದೆ.

ಸದ್ಯ ಎಚ್‌ಎಎಲ್‌ ಆಂತರಿಕವಾಗಿ ಈ ಡ್ರೋನ್‌ನ ಸಂಶೋಧನೆಗೆ ಹಣಕಾಸಿನ ನೆರವು ನೀಡುತ್ತಿದೆ. ನ್ಯೂಸ್ಪೇಸ್‌ ಸಂಸ್ಥೆ ಸಂಶೋಧನೆ ನಡೆಸುತ್ತಿದೆ.

‘ಇನ್‌ಫಿನಿಟಿ’ ಡ್ರೋನ್‌ನಲ್ಲಿ ಏನಿದೆ?

ಇನ್‌ಫ್ರಾರೆಡ್‌ ತಂತ್ರಜ್ಞಾನದ ಮೂಲಕ ಕೆಲಸ ಮಾಡುವ ಬೇರೆ ಬೇರೆ ರೀತಿಯ ಅತ್ಯಾಧುನಿಕ ಸಿಂಥೆಟಿಕ್‌ ಅಪರ್ಚರ್‌ ರಾಡಾರ್‌ಗಳು ‘ಇನ್‌ಫಿನಿಟಿ’ ಡ್ರೋನ್‌ನಲ್ಲಿವೆ. ಇವು ಶತ್ರುವಿನ ನೆಲದಲ್ಲಿ ಎಷ್ಟೇ ದುರ್ಗಮ ಪ್ರದೇಶದಲ್ಲಿರುವ ತಾಣದ ಮೇಲೆ ಕೂಡ ಕರಾರುವಾಕ್ಕಾಗಿ ದಾಳಿ ನಡೆಸಲು ತನ್ನ ಡ್ರೋನ್‌ ಜಾಲಕ್ಕೆ ನಿರ್ದೇಶನ ನೀಡಬಲ್ಲವು. ಸದ್ಯ ಸೇನಾಪಡೆಯಲ್ಲಿ ಬಳಕೆಯಲ್ಲಿರುವ ಲಾಯಲ್‌ ವಿಂಗ್‌ಮನ್‌, ಅಲ್ಫಾ-ಎಸ್‌ ಸ್ವಾಮ್‌ರ್‍ ಅಥವಾ ಹಂಟರ್‌ ಕ್ರೂಸ್‌ ಮಿಸೈಲ್‌ನಂತಹ ಶಸ್ತ್ರಾಸ್ತ್ರಗಳ ಜಾಲದ ಮೇಲುಸ್ತುವಾರಿಯನ್ನು ಈ ಡ್ರೋನ್‌ ನೋಡಿಕೊಳ್ಳಬಲ್ಲದು.

ಏನು ಅನುಕೂಲ?

ಭಾರತೀಯ ಸೇನಾಪಡೆಯ ಡ್ರೋನ್‌ಗಳು ಅಥವಾ ಇನ್ನಿತರ ವಾಯುದಾಳಿ ವ್ಯವಸ್ಥೆಗಳು ಶತ್ರುವಿನ ಪ್ರದೇಶದಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸುವುದನ್ನು ಈ ‘ಇನ್‌ಫಿನಿಟಿ’ ಡ್ರೋನ್‌ ಚಿತ್ರೀಕರಿಸಿ ಲೈವ್‌ ಆಗಿ ಪ್ರಸಾರ ಮಾಡುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ನೈಸರ್ಗಿಕ ವಿಪತ್ತು ಸಂಭವಿಸಿದಾಗ ಕಾರ್ಯಾಚರಣೆ ನಡೆಸಲು ಅಥವಾ ಸಮುದ್ರ ಹಾಗೂ ಜಲಸಾರಿಗೆಯ ಮೇಲೆ ಕಣ್ಣಿಡಲು ಕೂಡ ಇದನ್ನು ಬಳಸಬಹುದಾಗಿದೆ. ಸಾಮಾನ್ಯವಾಗಿ ಸರ್ವೇಕ್ಷಣ ಉಪಗ್ರಹಗಳನ್ನು ಉಡಾವಣೆ ಮಾಡಿ ಅದರಿಂದ ಪಡೆದುಕೊಳ್ಳಬೇಕಾದ ಸೇವೆಯನ್ನು ಇದೊಂದು ಸರಳ ಡ್ರೋನ್‌ ನೀಡುತ್ತದೆ.