ನವದೆಹಲಿ(ಮಾ.10): ಕಳೆದ ವರ್ಷ ಇದೇ ಸಂದರ್ಭದಲ್ಲಿ ಸ್ಫೋಟಗೊಂಡ ಕೊರೋನಾ ವೈರಸ್‌ ಸಾಂಕ್ರಾಮಿಕವು ಭಾರತದ ಕೋವಿಡ್‌-19 ನಿರ್ವಹಣೆಯ ಸಾಮರ್ಥ್ಯವನ್ನು ತೀವ್ರ ಪರೀಕ್ಷೆಗೊಳಪಡಿಸಿತು. ಭಾರತದಂತಹ ಜನದಟ್ಟಣೆಯ ದೇಶದಲ್ಲಿ ಸಾಂಕ್ರಾಮಿಕದಿಂದಾಗುವ ಸಾವುಗಳ ಬಗ್ಗೆ ತಜ್ಞರು ಭಯಭೀತರಾಗಿದ್ದರು. ಆದರೆ, ಭಾರತ ಆತ್ಮವಿಶ್ವಾಸದ, ವಿವೇಚನೆಯ ಮತ್ತು ಸೂಕ್ತ ತೀರ್ಮಾನದ ಕ್ರಮಗಳನ್ನು ತೆಗೆದುಕೊಂಡಿತು. ಸಾಂಕ್ರಾಮಿಕದ ಅಪಾಯವನ್ನು ಎದುರಿಸಲು ಉತ್ತಮ ಸಂಘಟಿತ ಕಾರ್ಯತಂತ್ರವನ್ನು ರೂಪಿಸಿತು.

ವೈರಾಣು ಹರಡುವುದನ್ನು ತಡೆಗಟ್ಟುವ ಒಂದು ಸಕಾಲಿಕ ಕ್ರಮದಲ್ಲಿ, 2020ರ ಮಾಚ್‌ರ್‍ 11ರಂದು ವಿಶ್ವ ಆರೋಗ್ಯ ಸಂಸ್ಥೆಯು ಕೊರೋನಾ ವೈರಾಣುವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ಎರಡು ವಾರಗಳ ನಂತರ ಭಾರತ ಸರ್ಕಾರವು ರಾಷ್ಟ್ರವ್ಯಾಪಿ ಲಾಕ್‌ಡೌನ್‌ ವಿಧಿಸಲು ನಿರ್ಧರಿಸಿತು.

ಈ ಸಕಾಲಿಕ ಕ್ರಮವು ದೇಶಾದ್ಯಂತ ಸಾವಿರಾರು ಜೀವಗಳನ್ನು ಉಳಿಸಲು ವೈರಾಣು ಪ್ರಸರಣದ ಸರಪಳಿಯನ್ನು ತುಂಡರಿಸಲು ಸಹಾಯ ಮಾಡಿತು. ಎಲ್ಲಾ ರಾಜ್ಯಗಳ ನಮ್ಮ ಮುಂಚೂಣಿ ಕೋವಿಡ್‌ ಯೋಧರು, ಅಪಾಯಕಾರಿ ಕೊರೋನಾ ವೈರಸ್‌ ಸವಾಲನ್ನು ಎದುರಿಸಲು ದೃಢ ನಿಶ್ಚಯದಿಂದ ಶ್ರಮಿಸಿದರು ಮತ್ತು ಭಯ ಹುಟ್ಟಿಸಿದ್ದವರ ಭವಿಷ್ಯವಾಣಿಯನ್ನು ತಪ್ಪೆಂದು ಸಾಬೀತುಪಡಿಸಿದರು. ಮಾರಣಾಂತಿಕ ವೈರಾಣು ವಿರುದ್ಧದ ಸಮರದಲ್ಲಿ, ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಮತ್ತು ನೈರ್ಮಲ್ಯ ಕಾರ್ಮಿಕರು ಸೇರಿದಂತೆ ನಮ್ಮ ವೈದ್ಯಕೀಯ ಸಮುದಾಯ, ನಮ್ಮ ಕೆಚ್ಚೆದೆಯ ಪೊಲೀಸ್‌ ಸಿಬ್ಬಂದಿ, ಹಳ್ಳಿಗಳಲ್ಲಿನ ಆಶಾ ಕಾರ್ಯಕರ್ತರು, ನಮ್ಮ ವಿಜ್ಞಾನಿಗಳು, ಅನುಶೋಧಕರು, ಉದ್ಯಮಿಗಳು, ಸಂಶೋಧಕರು ಮತ್ತು ಲಸಿಕೆ ತಯಾರಕರು ದಣಿವರಿಯದೆ ಕೆಲಸ ಮಾಡಿದರು. ಅಮೂಲ್ಯವಾದ ಜೀವಗಳನ್ನು ಉಳಿಸಲು ಹಗಲಿರುಳು ಶ್ರಮಿಸಿದರು. ಕೊರೋನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ನಮ್ಮ ಎಲ್ಲ ಮುಂಚೂಣಿ ಯೋಧರನ್ನು ಅವರ ಅವಿಶ್ರಾಂತ ಪ್ರಯತ್ನಗಳಿಗಾಗಿ ನಾನು ವಂದಿಸುತ್ತೇನೆ. ಈ ಮಾರಕ ವೈರಾಣು ವಿರುದ್ಧ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ನಮ್ಮ ವಿಜ್ಞಾನಿಗಳು ಮತ್ತು ಲಸಿಕೆ ತಯಾರಕರಿಗೆ ಮೆಚ್ಚುಗೆ ಮತ್ತು ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಒಗ್ಗಟ್ಟಿನ ಹೋರಾಟದಿಂದ ಜಯ

ಜಾಗತೀಕರಣದ ಈ ಸನ್ನಿವೇಶದಲ್ಲಿ ವೈರಾಣುಗಳು ಕೆಲವೇ ಗಂಟೆಗಳಲ್ಲಿ ದೇಶಗಳಾದ್ಯಂತ ಸಂಚರಿಸುತ್ತವೆ, ಎಲ್ಲೆಡೆ ರಾಷ್ಟ್ರಗಳ ಸನ್ನದ್ಧತೆಯನ್ನು ಪರೀಕ್ಷಿಸುತ್ತವೆ. ಈ ಸಾಂಕ್ರಾಮಿಕ ರೋಗವು ಖಂಡಗಳಾದ್ಯಂತ ಜನರ ಸಾವು ನೋವಿಗೆ ಕಾರಣವಾಯಿತು. ವಿಶ್ವದ ಶಕ್ತಿಶಾಲಿ ರಾಷ್ಟ್ರಗಳು ಮಂಡಿಯೂರುವಂತೆ ಮಾಡಿತು. ಜಾಗತಿಕವಾಗಿ ಲಕ್ಷಾಂತರ ಜನರಲ್ಲಿ ಸೋಂಕು ಉಂಟುಮಾಡಿದ ಮತ್ತು ಸಾವಿರಾರು ಜನರ ಸಾವಿಗೆ ಕಾರಣವಾದ ಕೊರೋನಾ ವೈರಸ್‌, ಕಳೆದ ವರ್ಷದ ಇದೇ ಸಮಯದಲ್ಲಿ ಭಾರತವನ್ನು ತೀವ್ರವಾಗಿ ಬಾಧಿಸಿತು.

ಕೊರೋನಾ ವೈರಸ್‌ ಬೆದರಿಕೆಯನ್ನು ಎದುರಿಸಲು ಭಾರತವನ್ನು ಒಂದು ತಂಡವಾಗಿಸುವ ರಾಷ್ಟ್ರದ ಸಂಕಲ್ಪವು ರಕ್ಷಣೆಯನ್ನು ಹೆಚ್ಚಿಸಿತು. ಈ ಉತ್ಸಾಹದಲ್ಲಿಯೇ ಎಲ್ಲಾ ರಾಜ್ಯಗಳು ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ಸೇರಿಕೊಂಡವು, ಈ ಜಾಗತಿಕ ಆರೋಗ್ಯ ಬಿಕ್ಕಟ್ಟಿನಲ್ಲಿ ಜನರಿಗೆ ಸೇವೆ ಸಲ್ಲಿಸಲು ರಾಜಕೀಯ ಪಕ್ಷಗಳ ನಾಯಕರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟರು.

ಸ್ಯಾನಿಟೈಜರ್‌, ಮುಖಗವಸು, ಪಿಪಿಇ ಕಿಟ್‌ ಮತ್ತು ಶಸ್ತ್ರಚಿಕಿತ್ಸಾ ಕೈಗವಸುಗಳಿಂದ, ವೆಂಟಿಲೇಟರ್‌ಗಳು ಮತ್ತು ಲಸಿಕೆಗಳವರೆಗೆ ಜೀವ ಉಳಿಸುವ ವಸ್ತುಗಳನ್ನು ಪೂರೈಸಲು ತಯಾರಕರು ಅಪಾರ ವೇಗದಲ್ಲಿ ಕೆಲಸ ಮಾಡಿದರು. ಈ ಅಭೂತಪೂರ್ವ ರಾಷ್ಟ್ರೀಯ ಪ್ರಯತ್ನವು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಒಗ್ಗಟ್ಟಿನ, ಸ್ವಾವಲಂಬಿ ಪ್ರಯತ್ನದ ಅದ್ಭುತ ಉದಾಹರಣೆಯಾದ ಆತ್ಮನಿರ್ಭರ ಭಾರತ ದೃಷ್ಟಿಕೋನಕ್ಕೆ ಅನುಗುಣವಾಗಿತ್ತು.

ಮಾಧ್ಯಮಗಳಿಗೊಂದು ಸಲಾಂ

ಕೊರೋನಾ ವೈರಸ್‌ ಮತ್ತು ಸಂಬಂಧಿತ ವಿಷಯಗಳ ಬಗ್ಗೆ ನಮ್ಮೆಲ್ಲರಿಗೂ ಶಿಕ್ಷಣ, ಮಾಹಿತಿ ಮತ್ತು ತಿಳುವಳಿಕೆ ನೀಡುವಲ್ಲಿ ಮಾಧ್ಯಮವು ಪ್ರಮುಖ ಪಾತ್ರವನ್ನು ವಹಿಸಿತು. ಸಾಂಕ್ರಾಮಿಕವು ಉತ್ತುಂಗದಲ್ಲಿದ್ದಾಗ, ಮಾಧ್ಯಮದವರು ಅಪಾಯಗಳನ್ನು ಲೆಕ್ಕಿಸದೆ ಧೈರ್ಯದಿಂದ ಮುಂಚೂಣಿಯಲ್ಲಿ ನಿಂತರು. ಕೋವಿಡ್‌-19 ಬಿಕ್ಕಟ್ಟಿಗೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ದೇಶಕ್ಕೆ ಮಾಹಿತಿ ಒದಗಿಸಲು ದಿನದ 24 ಗಂಟೆಯೂ ಕೆಲಸ ಮಾಡಿದರು.

ಕೆಟ್ಟಕಾಲ ಮುಗಿದಿದೆ

ಕೊರೋನಾ ವೈರಸ್‌ ಸಾಂಕ್ರಾಮಿಕವು ಯಾರನ್ನೂ ಬಿಡದೆ ಜಾಗತಿಕವಾಗಿ ಅಪಾರ ಹಾನಿ ಉಂಟುಮಾಡಿತು ಮತ್ತು ವಿಶ್ವದ ಶ್ರೀಮಂತ ರಾಷ್ಟ್ರಗಳ ಆರ್ಥಿಕತೆಯನ್ನು ಕುಂಠಿತಗೊಳಿಸಿತು. ಇದು ಭಾರತದ ಆರ್ಥಿಕತೆಯ ಮೇಲೂ ತನ್ನ ಕರಿನೆರಳು ಚಾಚಿತು. ಕೋವಿಡ್‌-19 ಪ್ರೇರಿತ ಲಾಕ್‌ಡೌನ್‌ಪರಿಣಾಮವಾಗಿ ಪ್ರತಿಯೊಂದು ವಲಯವೂ ತೀವ್ರವಾಗಿ ಜರ್ಜರಿತವಾಗಿದ್ದರೂ, ಭಾರತದ ರೈತ ಮಾತ್ರ ಜಗ್ಗಲಿಲ್ಲ. ದೇಶದ ಕೃಷಿ ಕ್ಷೇತ್ರವು ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ತನ್ನ ಸ್ಥಿತಿಸ್ಥಾಪಕತ್ವವನ್ನು ಸಾಬೀತುಪಡಿಸಿತು. ಭಾರತದ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು 2020-21ರ ಅವಧಿಯಲ್ಲಿ ಶೇ.3.4ರಷ್ಟುಬೆಳವಣಿಗೆಯನ್ನು ದಾಖಲಿಸಿವೆ. 2019-20ರಲ್ಲಿ 296.65 ದಶಲಕ್ಷ ಟನ್‌ ಆಹಾರ ಧಾನ್ಯಗಳ ಉತ್ಪಾದನೆಯಾಗಿದೆ. ಇದು ಹಿಂದಿನ ವರ್ಷದ 285.21 ದಶಲಕ್ಷ ಟನ್‌ ಆಹಾರ ಧಾನ್ಯಗಳ ಉತ್ಪಾದನೆಗಿಂತ 11.44 ದಶಲಕ್ಷ ಟನ್‌ ಹೆಚ್ಚಾಗಿದೆ. ಪ್ರಸ್ತುತ, ತಜ್ಞರು ಮತ್ತು ವಿಶ್ಲೇಷಕರು ಹೇಳುವಂತೆ, ಕೆಟ್ಟಕಾಲ ಮುಗಿದಿದೆ ಎಂದು ತೋರುತ್ತಿದೆ ಮತ್ತು ಆರ್ಥಿಕತೆಯು ಮತ್ತೆ ಏರುಗತಿಗೆ ಮರಳಿದೆ.

ಜಾಗತಿಕ ಮಟ್ಟದಲ್ಲಿ ಸಹಭಾಗಿತ್ವ

ಇತರ ದೇಶಗಳೊಂದಿಗಿನ ಸಹಯೋಗದ ಮನೋಭಾವ ಈ ಸಾಂಕ್ರಾಮಿಕ ರೋಗದ ಅಮೂಲ್ಯವಾದ ಫಲಿತಾಂಶ ಎಂದು ಸಾಬೀತಾಗಿದೆ. ನಮ್ಮ ಹಂಚಿಕೆಯ, ಸಹಯೋಗದ ಪ್ರಯತ್ನವು ಜಗತ್ತಿನ ಎಲ್ಲರೂ ಒಂದೇ ಕುಟುಂಬ ಮತ್ತು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂಬ ಪ್ರಾಚೀನ ಭಾರತದ ಪ್ರಾಪಂಚಿಕ ದೃಷ್ಟಿಕೋನದ ನೈಜ ಪ್ರತಿಬಿಂಬವಾಗಿತ್ತು. ಸ್ಥಿತಿಸ್ಥಾಪಕತ್ವ ಮತ್ತು ಪಾರದರ್ಶಕತೆಯೊಂದಿಗೆ ಈ ಸಾಮೂಹಿಕ ದೃಷ್ಟಿಕೋನ ಮತ್ತು ಪ್ರಯತ್ನವು ವಿಶ್ವದ ಅತ್ಯಂತ ಕಡಿಮೆ ಮರಣ ದರಗಳಲ್ಲಿ ಒಂದಾಗಲು ನಮಗೆ ಸಹಾಯ ಮಾಡಿತು.

ಜಾಗತಿಕ ಮಟ್ಟದಲ್ಲಿ ಸಂಪನ್ಮೂಲಗಳ ಹಂಚಿಕೆಯ ಮೂಲಕ ಸಾಂಕ್ರಾಮಿಕ ರೋಗಕ್ಕೆ ಬಹುಮುಖಿ, ದೀರ್ಘಕಾಲೀನ ಕಾರ್ಯತಂತ್ರದ ಪ್ರತಿಕ್ರಿಯೆಯನ್ನು ಮುಂದಿನ ದಾರಿ ಒಳಗೊಂಡಿದೆ.

ಮನುಷ್ಯ ಆಲಸಿಯಾಗಬಾರದು

ಕೊರೋನಾ ವೈರಸ್‌ ಸಾಂಕ್ರಾಮಿಕ ರೋಗದ ನಿರ್ವಹಣೆ ಕುರಿತು ನಮಗೆ ಅಮೂಲ್ಯವಾದ ಪಾಠಗಳನ್ನು ಕಲಿಸಿದೆ ಮತ್ತು ಕಲಿಸುತ್ತಿದೆ. ನಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ಕ್ರಿಯಾಶೀಲರಾಗಿರಬೇಕು ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ. ಆಲಸ್ಯ ಜೀವನಶೈಲಿಗೆ ಒಗ್ಗಿಕೊಂಡಿರುವವರು ನಿಯಮಿತ ದೈಹಿಕ ವ್ಯಾಯಾಮಕ್ಕೆ ಸಮಯವನ್ನು ಕೊಡಬೇಕು. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಯೋಗ ಮತ್ತು ಧ್ಯಾನ ಮಾಡಬೇಕು. ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೌಷ್ಟಿಕ, ಸಮತೋಲಿತ ಆಹಾರದತ್ತ ಗಮನ ಕೊಡಬೇಕು ಮತ್ತು ನಮ್ಮ ಮನೆಗಳಲ್ಲಿ ಸಹಜ ಗಾಳಿ, ಬೆಳಕು ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.

ಇನ್ನು ಮುಂದೆಯೂ ಎಚ್ಚರ ಅಗತ್ಯ

ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ಈಗ ನಡೆಯುತ್ತಿದೆ. ಆದರೂ, ಒಂದು ದೇಶವಾಗಿ ನಾವು ಇನ್ನೂ ಅಪಾಯದಿಂದ ಹೊರಬಂದಿಲ್ಲ ಎಂಬುದನ್ನು ಮರೆಯಬಾರದು ಮತ್ತು ಸಾಂಕ್ರಾಮಿಕ ರೋಗ ಇನ್ನೂ ಇದೆ, ನಾವು ಸೂಕ್ತ ಸಮಯದಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಅದು ಇನ್ನೂ ಹೆಚ್ಚು ಉಗ್ರ ರೂಪ ತಾಳಬಹುದು. ಒಂದು ಸಮಾಜವಾಗಿ, ನಮ್ಮ ರಕ್ಷಣಾ ಕವಚವನ್ನು ಕಡಿಮೆ ಮಾಡಿದರೆ ವೈರಾಣು ವಿರುದ್ಧದ ಹೋರಾಟದಲ್ಲಿ ನಾವು ಸವಾರಿ ಮಾಡಲು ಅಸಮರ್ಥರಾಗಬಹುದು. ನಾವು ಆಗಾಗ್ಗೆ ಕೈ ತೊಳೆಯುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಮುಖಗವಸುಗಳನ್ನು ಧರಿಸುವುದು ಮತ್ತು ಜನಸಂದಣಿ ಮತ್ತು ಸಭೆ ಸಮಾರಂಭಗಳನ್ನು ತಪ್ಪಿಸುವ ಅಗತ್ಯವಾದ ಅಭ್ಯಾಸಗಳನ್ನು ನಾವು ಮುಂದುವರಿಸಬೇಕಾಗಿದೆ. ಎಲ್ಲರೂ ವೈದ್ಯರ ಸಲಹೆಯನ್ನು ಪಾಲಿಸಬೇಕು ಮತ್ತು ಯಾವುದೇ ಹಿಂಜರಿಕೆಯಿಲ್ಲದೆ ಲಸಿಕೆ ಪಡೆಯಬೇಕು. ಕೋವಿಡ್‌ ನಂತರದ ಜಗತ್ತಿನಲ್ಲಿ ಸವಾಲುಗಳ ನಡುವೆ ನಾವು ಮುಂದುವರಿಯುತ್ತಿರುವಾಗ, ವೈರಸ್‌ನಿಂದ ಉಂಟಾಗುವ ಅಪಾಯವನ್ನು ಕಡಿಮೆ ಮಾಡಲು ಮತ್ತು ಜೀವಗಳನ್ನು ಉಳಿಸಲು ಜಾಗೃತಿ, ಜಾಗರೂಕತೆ ಮತ್ತು ತ್ವರಿತ ಕ್ರಮವು ನಮಗೆ ಸಹಾಯ ಮಾಡುತ್ತದೆ.