ನವದೆಹಲಿ(ಡಿ.13): ಕೊರೋನಾ ಲಸಿಕೆ ಬಂದಕೂಡಲೇ ಅದನ್ನು ವಿತರಿಸಲು ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಂಡಿರುವ ಕೇಂದ್ರ ಸರ್ಕಾರ ಇದೀಗ ಲಸಿಕೆ ನೀಡುವ ಕೇಂದ್ರಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಒಂದು ಕೇಂದ್ರದಲ್ಲಿ ಒಂದು ‘ಸೆಷನ್‌’ನಲ್ಲಿ 100 ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ. ಆದರೆ, ಸಾಕಷ್ಟುವ್ಯವಸ್ಥೆಯಿದ್ದರೆ ಒಂದು ‘ಸೆಷನ್‌’ನಲ್ಲಿ 200 ಜನರಿಗೂ ಲಸಿಕೆ ನೀಡಬಹುದು ಎಂದು ಹೇಳಲಾಗಿದೆ.

ಕೊರೋನಾ ಲಸಿಕೆ ವಿತರಣೆಗೆ ಸಂಬಂಧಿಸಿದ ಎಲ್ಲಾ ಜವಾಬ್ದಾರಿಗಳನ್ನು ನೋಡಿಕೊಳ್ಳಲು ರಾಷ್ಟ್ರೀಯ ತಜ್ಞರ ಸಮಿತಿಯೊಂದನ್ನು ಕೇಂದ್ರ ಸರ್ಕಾರ ಈಗಾಗಲೇ ನೇಮಿಸಿದೆ. ಆ ಸಮಿತಿಯು ಲಸಿಕೆ ವಿತರಣೆಗೆ 112 ಪುಟಗಳ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿದ್ದು, ಅದನ್ನು ಕೇಂದ್ರ ಗೃಹ ಇಲಾಖೆ ಶನಿವಾರ ಬಿಡುಗಡೆ ಮಾಡಿದೆ.

ಒಂದು ‘ಸೆಷನ್‌’ನಲ್ಲಿ 100 ಜನರಿಗೆ ಲಸಿಕೆ ನೀಡಬೇಕು ಎಂದು ಅದರಲ್ಲಿ ಹೇಳಲಾಗಿದೆಯಾದರೂ, ಒಂದು ಸೆಷನ್‌ ಅಂದರೆ ಒಂದು ದಿನವೇ ಅಥವಾ ನಿರ್ದಿಷ್ಟವಾಗಿ ಎಷ್ಟುಸಮಯ ಎಂಬುದು ಸ್ಪಷ್ಟವಾಗಿಲ್ಲ.

ಇನ್ನು, ಲಸಿಕೆ ನೀಡುವ ಎಲ್ಲಾ ಕೇಂದ್ರದಲ್ಲಿ ಕಡ್ಡಾಯವಾಗಿ 5 ಸಿಬ್ಬಂದಿಯಿರಬೇಕು. ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕೊರೋನಾ ಯೋಧರಿಗೆ ನಿರ್ದಿಷ್ಟಲಸಿಕಾ ಕೇಂದ್ರದಲ್ಲೇ ಲಸಿಕೆ ನೀಡಲಾಗುವುದು. ಆದರೆ ಹೈ-ರಿಸ್ಕ್‌ ವರ್ಗದ ಜನರಿಗೆ ಲಸಿಕೆ ನೀಡಲು ಬೇರೆ ಬೇರೆ ಕಡೆ ಕೇಂದ್ರಗಳನ್ನು ತೆರೆಯಬೇಕಾಗಿ ಬರಬಹುದು ಅಥವಾ ಮೊಬೈಲ್‌ ಕೇಂದ್ರಗಳನ್ನು ಸ್ಥಾಪಿಸಬೇಕಾಗಬಹುದು ಎಂದು ಮಾರ್ಗದರ್ಶಿ ಸೂತ್ರದಲ್ಲಿ ಹೇಳಲಾಗಿದೆ.

ಲಸಿಕೆ ಕೇಂದ್ರದಲ್ಲಿರಬೇಕಾದ 5 ಮಂದಿ ಯಾರು?

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಕೊರೋನಾ ಲಸಿಕೆ ನೀಡುವ ಕೇಂದ್ರದಲ್ಲಿ 5 ಸಿಬ್ಬಂದಿಯಿರಬೇಕು. ಮುಖ್ಯ ಅಧಿಕಾರಿಯು ಇಂಜೆಕ್ಷನ್‌ ನೀಡುವ ಕಾನೂನುಬದ್ಧ ಅಧಿಕಾರ ಹೊಂದಿರುವ ಡಾಕ್ಟರ್‌, ನರ್ಸ್‌ ಅಥವಾ ಫಾರ್ಮಸಿಸ್ಟ್‌ ಆಗಿರಬೇಕು. ಎರಡನೇ ಅಧಿಕಾರಿ ಭದ್ರತಾ ವ್ಯವಸ್ಥೆ ನೋಡಿಕೊಳ್ಳಬೇಕು. ಅಂದರೆ ಲಸಿಕೆಗೆ ನೋಂದಣಿಯಾದ ಹೆಸರುಗಳನ್ನು ಪರಿಶೀಲಿಸಬೇಕು ಹಾಗೂ ಕೇಂದ್ರದ ಪ್ರವೇಶದ್ವಾರದಲ್ಲಿ ಕಾರ್ಯನಿರ್ವಹಿಸಬೇಕು. ಮೂರನೇ ಅಧಿಕಾರಿ ಲಸಿಕೆ ಪಡೆಯಲು ಬರುವವರ ದಾಖಲೆ ಪರಿಶೀಲಿಸಬೇಕು. ನಾಲ್ಕು ಮತ್ತು ಐದನೇ ಅಧಿಕಾರಿ ಲಸಿಕಾ ಕೇಂದ್ರದಲ್ಲಿ ಜನದಟ್ಟಣೆ ನಿರ್ವಹಣೆ ಹಾಗೂ ಸಂವಹನ ನೋಡಿಕೊಳ್ಳಬೇಕು.