ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್.ಭಾರತದ ಮೊದಲ ಹೈಡ್ರೋಜನ್ ರೈಲು ಈ ತಿಂಗಳಲ್ಲೇ ಸಂಚಾರ ಆರಂಭಿಸುತ್ತಿದೆ. ಏನಿದರ ವಿಶೇಷತೆ? ಹೈಡ್ರೋಜನ್ ರೈಲಿನಲ್ಲಿ ಟಿಕೆಟ್ ಬೆಲೆ ಕಡಿಮೆ ಇರುತ್ತಾ? ಯಾವ ಮಾರ್ಗ ?
ನವದೆಹಲಿ(ಮಾ.5) ಡೀಸೆಲ್‌ನಿಂದ ಎಲೆಕ್ಟ್ರಿಕ್ ಆಯ್ತು, ಇದೀಗ ಹೈಡ್ರೋಜನ್. ಹೌದು, ಭಾರತೀಯ ರೈಲ್ವೇ ಮತ್ತೊಂದು ಮಹತ್ವದ ಮೈಲಿಗಲ್ಲು ನಿರ್ಮಿಸಲು ಸಜ್ಜಾಗಿದೆ. ಭಾರತದ ಮೊಟ್ಟ ಮೊದಲ ಹೈಡ್ರೋಜನ್ ರೈಲು ಸಂಚಾರ ಆರಂಭಿಸುತ್ತಿದೆ. ವಿಶೇಷ ಅಂದರೆ ಇದೇ ತಿಂಗಳ 25 ರಂದು ಭಾರತದ ಹೈಡ್ರೋಜನ್ ರೈಲು ಸಂಚಾರ ಆರಂಭಿಸಲಿದೆ ಎಂದು ವರದಿಯಾಗಿದೆ. ಇದು ನವೀಕರಿಸಬಹುದಾದ ಪರಿಸರ ಸ್ನೇಹಿ ಇಂಧನದ ಮೂಲಕ ರೈಲು ಸಂಚಾರ ನಡೆಸಲಿದೆ. ಈ ಮೂಲಕ ಭಾರತ ಗೋ ಗ್ರೀನ್ ಅಭಿಯಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಮೂಲಗಳ ಪ್ರಕಾರ ಹೈಡ್ರೋಜನ್ ರೈಲಿನ ಪ್ರಯಾಣ ವೆಚ್ಚ ಕಡಿಮೆಯಾಗಲಿದೆ. ಹೀಗಾಗಿ ಇದು ನೇರವಾಗಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಹೈಡ್ರೋಜನ್ ರೈಲಿನ ಪ್ರಯಾಣ ಟಿಕೆಟ್ ದರ ಇತರ ದರಕ್ಕಿಂತ ಕಡಿಮೆ ಇರಲಿದೆ ಎಂದು ವರದಿಗಳು ಹೇಳುತ್ತಿದೆ. ಪ್ರಾಯೋಗಿಕ ಹಂತದಲ್ಲಿ ಒಂದು ರೈಲು ಈ ತಿಂಗಳ ಅಂತ್ಯದಲ್ಲಿ ಅನಾವರಣಗೊಳ್ಳುತ್ತಿದೆ. ಆದರೆ ಒಟ್ಟು 35 ಹೈಡ್ರೋಜನ್ ರೈಲು ನಿರ್ಮಾಣಗೊಳ್ಳುತ್ತಿದೆ. ಇದರಿಂದ ದೇಶದ ಬಹುತೇಕ ಭಾಗದಲ್ಲಿ ಮುಂದಿನ 2 ವರ್ಷದಲ್ಲಿ ಹೈಡ್ರೋಜನ್ ರೈಲು ಸಂಚಾರ ಆರಂಭಗೊಳ್ಳಲಿದೆ. ಇದರಿಂದ ರೈಲು ಪ್ರಯಾಣ ಮತ್ತಷ್ಟು ಅಗ್ಗ ಹಾಗೂ ಅರಾಮದಾಯಕವಾಗಲಿದೆ. ಇಷ್ಟೇ ಅಲ್ಲ ಇದು ಅತ್ಯಂತು ಸುಸಜ್ಜಿತ ರೈಲಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಮಾಡರ್ನ್ ಕೋಚ್ ಇರಲಿದೆ. ಆಕರ್ಷಕ ವಿನ್ಯಾಸ, ಮೊಬೈಲ್ ಚಾರ್ಜಿಂಗ್, ಆರಾಮ ಪ್ರಯಾಣಕ್ಕೆ ಆಸನಗಳು ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಇದರಲ್ಲಿ ಇರಲಿದೆ.
ಭಾರತೀಯ ರೈಲ್ವೇಯ IRCTC ಹಾಗೂ IRFCಗೆ ನವರತ್ನ ಸ್ಥಾನಮಾನ, ಏನಿದು?
ಯಾವ ಮಾರ್ಗದಲ್ಲಿ ಸಂಚಾರ?
ಮೊದಲ ಹೈಡ್ರೋಜನ್ ರೈಲು ನಾರ್ಥರ್ನ್ ರೈಲ್ವೇಯ ದೆಹಲಿ ವಿಭಾಗಕ್ಕೆ ನೀಡಲಾಗಿದೆ. ಈ ರೈಲು ಹರ್ಯಾಣದ ಜಿಂದ್ ಹಾಗೂ ಸೋನಿಪತ್ ನಡುವೆ ಸಂಚಾರ ನಡೆಸಲಿದೆ. ಒಟ್ಟು 89 ಕಿಲೋಮೀಟರ್ ದೂರದ ಪ್ರಯಾಣ ಇದಾಗಿದೆ. ಸದ್ಯ ಈ ರೈಲು ಮಾರ್ಗ ಹೈಡ್ರೋಜನ್ ರೈಲು ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿರುವ ಕಾರಣ ಆಯ್ಕೆ ಮಾಡಿಕೊಳ್ಳಲಾಗಿದೆ .
ಈ ರೈಲು ಕೋಚ್‌ಗಳು ಚೆನ್ನೈ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಶೂನ್ಯ ಕಾರ್ಬನ್ ರೈಲು ಇದಾಗಿದೆ. ಹೀಗಾಗಿ ಭವಿಷ್ಯದಲ್ಲಿ ಭಾರತದಲ್ಲಿ ಕಾರ್ಬನ್ ಪ್ರಮಾಣ ಕಡಿಮೆ ಮಾಡಿ ಶುದ್ಧ ಗಾಳಿ ಸಿಗುವಂತೆ ಮಾಡುವ ಮಹತ್ವದ ಯೋಜನೆಯಲ್ಲಿ ಹೈಡ್ರೋಜನ್ ರೈಲು ಕೂಡ ಒಂದಾಗಿದೆ. ಸದ್ಯ ಎಲೆಕ್ಟ್ರಿಕ್ ಮೂಲಕ ಸಂಚಾರ ನಡೆಸುತ್ತಿರುವ ರೈಲು ಕೂಡ ಶೂನ್ಯ ಕಾರ್ಬನ್ ರೈಲಾಗಿದೆ. ಆದರೆ ಇದರ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದೆ. 2023-24ರ ಸಾಲಿನಲ್ಲಿ ಹೈಡ್ರೋಜನ್ ರೈಲಿಗಾಗಿ ಕೇಂದ್ರ ಸರ್ಕಾರ 2,800 ಕೋಟಿ ರೂಪಾಯಿ ಮೀಸಲಿಟ್ಟಿದೆ.ಜಿಂದ್ ಹಾಗೂ ಸೋನಿಪತ್ ಮಾರ್ಗದಲ್ಲಿ ಈಗಾಗಲೇ ಪ್ರಯೋಗಿಕ ಸಂಚಾರ ನಡೆಸಿದೆ.
ಭಾರತದ ಮೈಲಿಗಲ್ಲು
ಭಾರತದಲ್ಲಿ ಹೈಡ್ರೋಜನ್ ರೈಲು ಸಂಚಾರ ಆರಂಬಗೊಂಡರೆ ಐತಿಹಾಸಿಕ ಮೈಲಿಗಲ್ಲು ನಿರ್ಮಾಣವಾಗಲಿದೆ. ಕಾರಣ ಜರ್ಮನಿ, ಚೀನಾದಂತ ದೇಶಗಳಲ್ಲಿ ಈಗಾಗಲೇ ಹೈಡ್ರೋಜನ್ ರೈಲು ಸಂಚಾರ ನಡೆಸುತ್ತಿದೆ. ಈ ದಿಗ್ಗಜ ದೇಶಗಳ ಸಾಲಿಗೆ ಭಾರತ ಸೇರಿಕೊಳ್ಳಲಿದೆ. ಜರ್ಮನಿಯಲ್ಲಿ ಮೊದಲು ಹೈಡ್ರೋಜನ್ ರೈಲು ಸಂಚಾರ ಆರಂಭಗೊಂಡಿತ್ತು. ಹಲವು ವರ್ಷಗಳ ಸಂಶೋಧನೆ, ಅಭಿವೃದ್ಧಿ ಬಳಿಕ ಜರ್ಮನಿ ಹೈಡ್ರೋಜನ್ ರೈಲು ಸಂಚಾರ ಆರಂಭಿಸಿ ಯಶಸ್ವಿಯಾಗಿದೆ. ಇದೀಗ ಭಾರತ ಈ ನಿಟ್ಟಿನಲ್ಲಿ ಸಾಗುತ್ತಿದೆ. ಭಾರತದಲ್ಲಿ ಸಾರಿಗೆ ಸಂಪರ್ಕವನ್ನು ಸುಲಭಗೊಳಿಸಲಾಗುತ್ತಿದೆ. ರಸ್ತೆ ಮಾರ್ಗಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಹಳ್ಳಿ ಹಳ್ಳಿಗೂ ಉತ್ತಮ ರಸ್ತೆ ಸಂಪರ್ಕ, ರೈಲು ಸಂಪರ್ಕ ನೀಡಲಾಗುತ್ತಿದೆ. ಪ್ರತಿ ಜಿಲ್ಲೆಗೆ ಉಡಾನ್ ಅಡಿಯಲ್ಲಿ ವಿಮಾನ ನಿಲ್ದಾಗಳನ್ನು ನೀಡಲಾಗುತ್ತಿದೆ. ಈ ಮೂಲಕ ದೇಶದ ಎಲ್ಲಾ ಹಳ್ಳಿ ಹಾಗೂ ತಾಲೂಕಗಳ ನಿಕಟ ಸಂಪರ್ಕ ಸಾಧಿಸಲು ಈ ಕ್ರಮ ನೆರವಾಗಲಿದೆ.
ಪ್ರಯಾಣಿಕರಿಗೆ ಗುಡ್ ನ್ಯೂಸ್, ಮಂಗಳೂರು-ಗೋವಾ ಸ್ಪೆಷಲ್ ರೈಲು ಟಿಕೆಟ್ ದರ ಕೇವಲ 85 ರೂ
