ಹೈದರಾಬಾದ್‌[ಜ.24]: ಕೆಲ ರಾಜಕೀಯ ಪಕ್ಷಗಳ ಆಕ್ಷೇಪ ಹಾಗೂ ತಂತ್ರಜ್ಞರ ಕಳವಳಗಳ ನಡುವೆಯೇ, ಬೋಗಸ್‌ ಮತದಾರರ ಪತ್ತೆಗೆ ತೆಲಂಗಾಣ ರಾಜ್ಯ ಚುನಾವಣಾ ಆಯೋಗ ಫೇಸ್‌ ರೆಕಗ್ನಿಷನ್‌ (ಮುಖಚಹರೆ ಮೂಲಕ ಗುರುತು ಪತ್ತೆ) ವಿಧಾನದಡಿ ನಕಲಿ ಮತದಾರರನ್ನು ಕಂಡುಹಿಡಿಯುವ ಪ್ರಯೋಗವನ್ನು ನಡೆಸಿದೆ.

ತೆಲಂಗಾಣದ 120 ನಗರಸಭೆ ಹಾಗೂ 10 ನಗರಪಾಲಿಕೆಗಳಿಗೆ ಬುಧವಾರ ಚುನಾವಣೆ ನಡೆದಿದ್ದು, ಈ ಪೈಕಿ ಮೆಡಛಲ- ಮಲ್ಕಾಜ್‌ಗಿರಿ ಜಿಲ್ಲೆಯ ಕೋಂಪಲ್ಲಿ ನಗರಸಭೆಯ 10 ವಾರ್ಡುಗಳಲ್ಲಿ ಫೇಸ್‌ ರೆಕಗ್ನಿಷನ್‌ ಮೂಲಕ ಮತದಾರರನ್ನು ಗುರುತಿಸುವ ಪ್ರಯೋಗ ನಡೆಸಲಾಯಿತು.

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಫೇಸ್‌ ರೆಕಗ್ನಿಶನ್‌ ತಂತ್ರಜ್ಞಾನ!

ಬಹುತೇಕ ಮತದಾರರಿಗೆ ಹೊಸ ವ್ಯವಸ್ಥೆಯ ಬಗ್ಗೆ ಮಾಹಿತಿಯೇ ಇರಲಿಲ್ಲ. ತಮ್ಮ ಮುಖದ ಫೋಟೋ ಸೆರೆ ಹಿಡಿದು, ತನ್ಮೂಲಕ ತಾವು ನೈಜ ಮತದಾರ ಹೌದೋ ಅಲ್ಲವೋ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂಬುದು ಮತದಾರರಿಗೆ ಗೊತ್ತಾಗಲಿಲ್ಲ. ಈ ಕುರಿತು ಮತಗಟ್ಟೆಗಳಲ್ಲೂ ಜಾಗೃತಿ ಮೂಡಿಸುವ ಕೆಲಸವೂ ನಡೆಯಲಿಲ್ಲ.

ಮತದಾರರು ಮತಗಟ್ಟೆಪ್ರವೇಶಿಸುತ್ತಿದ್ದಂತೆ ಸಹಾಯಕ ಚುನಾವಣಾಧಿಕಾರಿಯೊಬ್ಬರು ಮೊಬೈಲ್‌ ಫೋನ್‌ ಹಿಡಿದು ನಿಂತಿದ್ದರು. ಮತದಾರರ ಗುರುತಿನ ದಾಖಲೆ ಪರಿಶೀಲಿಸಿದ ಬಳಿಕ ಅವರ ಫೋಟೋ ಸೆರೆ ಹಿಡಿದರು. ಕೂಡಲೇ ಆ ಫೋಟೋ ತೆಲಂಗಾಣ ರಾಜ್ಯ ತಂತ್ರಜ್ಞಾನ ಸೇವೆ ಸಂಸ್ಥೆಯಲ್ಲಿರುವ ದಾಖಲೆಗಳ ಜತೆ ತುಲನೆಯಾಯಿತು. ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಮೂಲಕ ಮತದಾರರ ಸಾಚಾತನ ಪರಿಶೀಲಿಸಿ, ಕೂಡಲೇ ಮೊಬೈಲ್‌ಗೆ ಸ್ವಯಂಚಾಲಿತ ಸಂದೇಶ ರವಾನೆಯಾಯಿತು.

ಫೇಸ್‌ ರೆಕಗ್ನಿಷನ್‌ ಬಳಸಿ ನಕಲಿ ಮತದಾರರ ಪತ್ತೆ!

ಫೇಸ್‌ ರೆಕಗ್ನಿಷನ್‌ ವ್ಯವಸ್ಥೆ ಕೆಲವು ಮತದಾರರ ಗುರುತನ್ನು ಹಿಡಿಯುವಲ್ಲೇ ವಿಫಲವಾಯಿತು. ಆದಾಗ್ಯೂ ದಾಖಲೆಗಳನ್ನು ಹೊಂದಿದ್ದ ಹಿನ್ನೆಲೆಯಲ್ಲಿ ಆ ಮತದಾರರಿಗೆ ಹಕ್ಕು ಚಲಾವಣೆ ಅವಕಾಶ ಕಲ್ಪಿಸಲಾಯಿತು.

ಮತದಾರರ ಅರಿವಿಗೆ ಬಾರದಂತೆಯೇ ಅವರ ಫೋಟೋ ಸೆರೆಹಿಡಿಯುವುದು ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ಎಂಐಎಂ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದರೆ, ಈ ರೀತಿ ಸೆರೆ ಹಿಡಿದ ಫೋಟೋಗಳು ದುರ್ಬಳಕೆಯಾಗಬಹುದು ಎಂದು ಸೈಬರ್‌ ತಜ್ಞರು ಕಳವಳ ತೋಡಿಕೊಂಡರು.