ನವದೆಹಲಿ (ನ.29): ಪೂರ್ವ ಲಡಾಖ್‌ನಲ್ಲಿ ಭಾರತ ಹಾಗೂ ಚೀನಾ ನಡುವೆ ಉದ್ಭವಿಸಿರುವ ಗಡಿ ಬಿಕ್ಕಟ್ಟು ಸದ್ಯಕ್ಕೆ ನಿವಾರಣೆಯಾಗುವ ಸಾಧ್ಯತೆ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೀಗ ಪ್ಯಾಂಗಾಂಗ್‌ ಸರೋವರ ಪ್ರದೇಶಕ್ಕೆ ನೌಕಾಪಡೆಯ ಮರೈನ್‌ ಕಮಾಂಡೋ (ಮಾರ್ಕೋಸ್‌)ಗಳನ್ನು ನಿಯೋಜನೆ ಮಾಡಿದೆ. ಇದರೊಂದಿಗೆ ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆ ಸೇರಿದಂತೆ ಮೂರೂ ಪಡೆಗಳ ಕಮಾಂಡೋಗಳು ಗಡಿಯಲ್ಲಿ ನಿಯೋಜನೆಗೊಂಡಂತಾಗಿದೆ.

ಮಾರ್ಕೋಸ್‌ಗಳ ನಿಯೋಜನೆಯಿಂದ ಅತ್ಯಂತ  ಚಳಿಯ ವಾತಾವರಣದಲ್ಲಿ ಕಾರ್ಯನಿರ್ವಹಿಸುವ ಅನುಭವ ಆ ಕಮಾಂಡೋಗಳಿಗೆ ದೊರೆಯುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ಟೀವಿ ವಾಹಿನಿಯೊಂದು ವರದಿ ಮಾಡಿದೆ.

ಚೀನಾ ಸದ್ದಡಗಿಸಲು ಭಾರತದ ಸುರಂಗ ತಂತ್ರ!

ಕಳೆದ 6 ತಿಂಗಳಿನಿಂದ ಲಡಾಖ್‌ನಲ್ಲಿ ವಾಯುಪಡೆಯ ಗರುಡ ಹಾಗೂ ಅರೆಸೇನೆಯ ವಿಶೇಷ ಪಡೆಗಳು ನಿಯೋಜನೆಗೊಂಡಿವೆ. ಪ್ಯಾಂಗಾಂಗ್‌ ಸರೋವರದಲ್ಲಿ ಗಸ್ತು ತಿರುಗಲು ಮಾರ್ಕೋಸ್‌ಗಳಿಗೆ ಈಗ ಇರುವ ಮೂಲಸೌಕರ್ಯದ ಜತೆ ಹೊಸ ಬೋಟುಗಳು ಶೀಘ್ರದಲ್ಲೇ ದೊರೆಯಲಿವೆ.

ವಾಯುಪಡೆಯ ಗರುಡ ಕಮಾಂಡೋಗಳನ್ನು ಪರ್ವತ ಪ್ರದೇಶಗಳಲ್ಲಿ ನಿಯೋಜನೆಗೊಳಿಸಲಾಗಿದೆ. ಅವರಿಗೆ ಹೆಗಲ ಮೇಲೆ ಇಟ್ಟು ಉಡಾಯಿಸುವ ಶಸ್ತ್ರಾಸ್ತ್ರ ನೀಡಲಾಗಿದೆ. ವಾಯುಸೀಮೆಯನ್ನು ಉಲ್ಲಂಘಿಸಿ ಒಳಬರುವ ಎದುರಾಳಿ ದೇಶದ ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಅರೆಸೇನಾ ಪಡೆ ಹಾಗೂ ಸಂಪುಟ ಕಾರ್ಯದರ್ಶಿಗಳ ವಿಶೇಷ ಗಡಿ ಪಡೆಯನ್ನು ವಿಶೇಷ ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.