3ನೇ ಅಲೆ ಹೊಡೆತ ತಪ್ಪಿಸಲು ಲಸಿಕೆ ಅಭಿಯಾನಕ್ಕೆ ಒತ್ತು, 58.25 ಕೋಟಿ ಮೈಲುಗಲ್ಲು ದಾಟಿತು ವ್ಯಾಕ್ಸಿನ್!
- ಅಕ್ಟೋಬರ್ ತಿಂಗಳಲ್ಲಿ ದೇಶದ ಕೆಲ ರಾಜ್ಯಗಳಲ್ಲಿ ಕೊರೋನಾ 3ನೇ ಅಲೆ
- ಮಹಾರಾಷ್ಟ್ರ, ಕೇರಳ, ಕರ್ನಾಟಕ ಸೇರಿದಂತೆ ಕೆಲ ರಾಜ್ಯಕ್ಕೆ ಎಚ್ಚರಿಕೆ
- 3ನೇ ಅಲೆ ಆತಂಕ ಕಾರಣ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲು ನಿರ್ಧಾರ
- 58.25 ಕೋಟಿ ಮೈಲುಗಲ್ಲು ದಾಟಿದ ಭಾರತದ ಕೋವಿಡ್-19 ಲಸಿಕೆ ಅಭಿಯಾನ
ನವದೆಹಲಿ(ಆ.23): ಕೊರೋನಾ ವೈರಸ್ ದೇಶದ ಲೆಕ್ಕಾಚಾರವನ್ನೇ ಬದಲಿಸಿದೆ. ಮೊದಲ ಹಾಗೂ 2ನೇ ಅಲೆ ನಿಯಂತ್ರಿಸಿದ ಭಾರತ ಇದೀಗ 3ನೇ ಅಲೆ ಭೀತಿಯಲ್ಲಿದೆ. ತಜ್ಞರ ಪ್ರಕಾರ ದೇಶದಲ್ಲಿ 3ನೇ ಅಲೆ ಆರಂಭಗೊಂಡಿದೆ. ಆಕ್ಟೋಬರ್ ತಿಂಗಳಲ್ಲಿ 3ನೇ ಅಲೆ ತೀವ್ರವಾಗಿ ಕಾಡಲಿದೆ ಎಂದು ತಜ್ಞರು ವರದಿ ನೀಡಿದ್ದಾರೆ. ಹೀಗಾಗಿ ದೇಶದಲ್ಲಿ ಚುರುಕಿನಿಂದ ನಡೆಯುತ್ತಿರುವ ಕೊರೋನಾ ಲಸಿಕಾ ಅಭಿಯಾನದ ವೇಗ ಹೆಚ್ಚಿಸಲು ನಿರ್ಧರಿಸಲಾಗಿದೆ.
ಬೊಮ್ಮಾಯಿ ಸಿಎಂ ಆದ ಬಳಿಕ ಲಸಿಕಾ ಅಭಿಯಾನ ಚುರುಕು
ಭಾರತದಲ್ಲಿ ಒಟ್ಟು ಕೋವಿಡ್-19 ಲಸಿಕೆ ಅಭಿಯಾನದ ವ್ಯಾಪ್ತಿ 58.25 ಕೋಟಿ (58,25,49,595) ದಾಟಿದೆ. 021ರ ಜೂನ್ 21ರಿಂದ ಸಾರ್ವತ್ರಿಕ ಕೋವಿಡ್-19 ಲಸಿಕೀಕರಣದ ಹೊಸ ಹಂತ ಆರಂಭವಾಗಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಕೋವಿಡ್-19 ಲಸಿಕೀಕರಣ ವ್ಯಾಪ್ತಿ ಮತ್ತು ವೇಗವನ್ನು ವೃದ್ಧಿಸಲು ಬದ್ಧವಾಗಿದೆ.
ಕಳೆದ 24 ಗಂಟೆಗಳಲ್ಲಿ 44,157 ರೋಗಿಗಳು ಚೇತರಿಸಿಕೊಳ್ಳುವುದರೊಂದಿಗೆ (ಸಾಂಕ್ರಾಮಿಕ ಆರಂಭವಾದ ನಂತರ) ಒಟ್ಟು ಸೋಂಕಿತರ ಪೈಕಿ ಈಗಾಗಲೇ 3,16,80,626. ಸೋಂಕಿತರು ಗುಣಮುಖರಾಗಿದ್ದಾರೆ. ಇದರಿಂದಾಗಿ ಕ್ರಮೇಣ ಭಾರತದ ಚೇತರಿಕೆ ಪ್ರಮಾಣ ಶೇ. 97.63%, ತಲುಪಿದ್ದು, ಇದು ಕಳೆದ 2020 ರ ಮಾರ್ಚ್ ನಿಂದೀಚೆಗೆ ಅತ್ಯಧಿಕವಾಗಿದೆ.
ಜೈಕೋವ್-ಡಿ ಕೋವಿಡ್ ಲಸಿಕೆ ತುರ್ತು ಬಳಕೆ ಅನುಮತಿಗೆ ಮೋದಿ ಸಂತಸ; 57.22 ಕೋಟಿ ದಾಟಿತು ವ್ಯಾಕ್ಸಿನ್
ಕೇಂದ್ರ ಸರ್ಕಾರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಹಾಗೂ ಸಹಭಾಗಿತ್ವದ ಪ್ರಯತ್ನಗಳಿಂದಾಗಿ ಸತತ 57 ದಿನಗಳಿಂದ ಪ್ರತಿ ದಿನ ಹೊಸ ಪ್ರಕರಣಗಳ ಸಂಖ್ಯೆ 50,000ಕ್ಕಿಂತಲೂ ಕಡಿಮೆ ಇದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 25,072 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇದು ಕಳೆದ 160 ದಿನಗಳಲ್ಲಿಯೇ ಅತಿ ಕಡಿಮೆ.ಹೆಚ್ಚಿನ ಸಂಖ್ಯೆಯ ಸೋಂಕಿತರು ಗುಣಮುಖವಾಗುತ್ತಿರುವುದರಿಂದ ಮತ್ತು ಹೊಸ ಪ್ರಕರಣಗಳ ಸಂಖ್ಯೆ ತಗ್ಗುತ್ತಿರುವುದರಿಂದ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು 3,33,924 ಇದ್ದು, ಇದು ಕಳೆದ 155 ದಿನಗಳಲ್ಲಿಯೇ ಅತಿ ಕಡಿಮೆಯಾಗಿದೆ ಮತ್ತು ಕಳೆದ ಮಾರ್ಚ್ 2020ರಿಂದೀಚೆಗೆ ದೇಶದ ಒಟ್ಟಾರೆ ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. 1.03% ರಷ್ಟಾಗಿದೆ.
ದೇಶದಲ್ಲಿ ಒಟ್ಟಾರೆ ಕೋವಿಡ್ ಸೋಂಕು ಪರೀಕ್ಷೆಗಳ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಲಾಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 12,95,160 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆ ಭಾರತ ಈವರೆಗೆ 50.75 ಕೋಟಿ(50,75,51,399) ಪರೀಕ್ಷೆಗಳನ್ನು ನಡೆಸಲಾಗಿದೆ.
ಒಂದೆಡೆ ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಲಾಗುತ್ತಿದೆ. ಮತ್ತೊಂದೆಡೆ ವಾರದ ಪಾಸಿಟಿವಿಟಿ ದರ ಇಳಿಕೆಯಾಗುತ್ತಿರುವುದು ಕಂಡುಬಂದಿದೆ. ವಾರದ ಪಾಸಿಟಿವಿಟಿ ದರ ಸದ್ಯ ಶೇ.1.91ರಷ್ಟಿದ್ದು, ಇದು ಕಳೆದ 59 ದಿನಗಳಲ್ಲಿ ಶೇ.3ಕ್ಕಿಂತ ಕಡಿಮೆಯಾಗಿದೆ. ದಿನದ ಪಾಸಿಟಿವಿಟಿ ದರ ಇಂದು ಶೇ1.94ರಷ್ಟಿದೆ. ದಿನದ ಪಾಸಿಟಿವಿಟಿ ದರ ಕಳೆದ 28 ದಿನಗಳಿಂದ ನಿರಂತರವಾಗಿ ಶೇ.3ಕ್ಕಿಂತ ಕಡಿಮೆ ಇದೆ ಮತ್ತು ಕಳೆದ 77 ದಿನಗಳಿಂದ ಶೇ.5ಕ್ಕಿಂತ ಕಡಿಮೆ ಮುಂದುವರಿದಿದೆ.