Asianet Suvarna News Asianet Suvarna News

ಬೊಮ್ಮಾಯಿ ಸಿಎಂ ಆದ ಬಳಿಕ ಲಸಿಕಾ ಅಭಿಯಾನ ಚುರುಕು

*  ಹಾವೇರಿ ಜಿಲ್ಲೆಯಲ್ಲಿ 20 ದಿನಗಳಲ್ಲಿ 1.63 ಲಕ್ಷ ಜನರಿಗೆ ಲಸಿಕೆ
*  ಲಸಿಕೆ ಪೂರೈಕೆ ಪ್ರಮಾಣ, ಕೆಂದ್ರವೂ ಹೆಚ್ಚಳ
*  ನವಂಬರ್‌ ಅಂತ್ಯಕ್ಕೆ ಎಲ್ಲರಿಗೂ ಲಸಿಕೆ
 

Increased Covid Vaccine Drive in Haveri after Basavaraj Bommai Became As CM grg
Author
Bengaluru, First Published Aug 23, 2021, 1:34 PM IST
  • Facebook
  • Twitter
  • Whatsapp

ಹಾವೇರಿ(ಆ.23):  ಲಸಿಕೆ ಕೊರತೆ ಕಾರಣದಿಂದ ಕೆಲವು ತಿಂಗಳಿಂದ ನಿಧಾನಗತಿಯಲ್ಲಿದ್ದ ಕೋವಿಡ್‌ ವ್ಯಾಕ್ಸಿನೇಶನ್‌ ಪ್ರಮಾಣ ಈಗ ಜಿಲ್ಲೆಯವರೇ ಆದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ಚುರುಕು ಪಡೆದುಕೊಂಡಿದೆ. ಕಳೆದ 12 ದಿನಗಳಲ್ಲಿ ನಾಲ್ಕು ಬಾರಿ ರಾಜಧಾನಿ ಬೆಂಗಳೂರು ನಂತರದ ಸ್ಥಾನದಲ್ಲಿ ಜಿಲ್ಲೆಯೂ ಕಾಣಿಸಿಕೊಂಡಿದೆ.

ಲಸಿಕಾಕರಣ ಆರಂಭಗೊಂಡ ಎಂಟು ತಿಂಗಳ ಅವಧಿಯಲ್ಲಿ ಆಗಸ್ಟ್‌ ತಿಂಗಳಲ್ಲಿಯೇ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಕೋವಿಡ್‌ ಲಸಿಕೆ ಹಾಕಲಾಗಿದೆ. ಕೊರೋನಾ ಲಸಿಕೆ ನೀಡುವ ಪ್ರಕ್ರಿಯೆ ಜಿಲ್ಲೆಯಲ್ಲಿ ಜನವರಿಯಲ್ಲೇ ಆರಂಭಗೊಂಡಿದ್ದರೂ ನಿಧಾನಗತಿಯಲ್ಲಿ ಸಾಗಿತ್ತು.

ಜನವರಿಯಿಂದ ಜುಲೈ ಅಂತ್ಯದ ವರೆಗೆ ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ. 38.20ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿತ್ತು. ಅಲ್ಲದೇ ಲಸಿಕೆ ಪೂರೈಕೆಯೂ ಸಮರ್ಪಕವಾಗಿ ಆಗದೇ ಇರುವುದರಿಂದ ಲಸಿಕೆಗಾಗಿ ಜನರು ಪರದಾಡುವಂತಾಗಿತ್ತು. ಯಾವಾಗ ಜಿಲ್ಲೆಯವರೇ ಆಗಿರುವ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದರೋ ಅಂದಿನಿಂದ ಜಿಲ್ಲೆಗೆ ಪೂರೈಕೆಯಾಗುವ ಲಸಿಕೆಯ ಪ್ರಮಾಣವೂ ಹೆಚ್ಚಳಗೊಂಡಿದೆ. ಲಸಿಕೆ ಪೂರೈಕೆ ಹೆಚ್ಚಳವಾದಂತೆಲ್ಲ ಅಂದಿನ ಪೂರೈಕೆಯನ್ನು ಅಂದೇ ಖಾಲಿ ಮಾಡಲು ಆರೋಗ್ಯ ಇಲಾಖೆಯೂ ಲಸಿಕಾ ಕೇಂದ್ರಗಳನ್ನು ಹೆಚ್ಚಿಸಿತು. ಇದರಿಂದಾಗಿ 20 ದಿನಗಳ ಅವಧಿಯಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಲಸಿಕಾ ಪ್ರಮಾಣವು ಶೇ. 12ರಷ್ಟು ಹೆಚ್ಚಳ ಕಂಡಿದೆ.

'ರಾಜಕಾರಣಿಗಳ ನಿರ್ಲಕ್ಷ್ಯದಿಂದ ಮಹದಾಯಿ ಯೋಜನೆಗೆ ಹಿನ್ನಡೆ'

20 ದಿನದಲ್ಲಿ 1.63 ಲಕ್ಷ ಜನರಿಗೆ ಲಸಿಕೆ:

ಆ. 1ರಿಂದ ಆ. 20ರ ಅವಧಿಯಲ್ಲಿ ಜಿಲ್ಲೆಗೆ ದಾಖಲೆ ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗಿದ್ದು, ಅದನ್ನೆಲ್ಲ ಸಮರ್ಪಕವಾಗಿ ಜನರಿಗೆ ನೀಡುವಲ್ಲಿಯೂ ಆರೋಗ್ಯ ಇಲಾಖೆ ಶ್ರಮಿಸಿದೆ. ಇದರ ಪರಿಣಾಮ 20 ದಿನದಲ್ಲಿ ಲಸಿಕಾಕರಣದಲ್ಲಿ ನಾಲ್ಕು ಬಾರಿ ರಾಜಧಾನಿ ಬೆಂಗಳೂರು ನಂತರ ಸ್ಥಾನದಲ್ಲಿ ಜಿಲ್ಲೆಯೂ ಕಾಣಿಸಿಕೊಂಡಿದೆ. ದಿನವೊಂದಕ್ಕೆ ಗರಿಷ್ಠ 20 ಸಾವಿರಕ್ಕೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ. 1,63,583 ಜನರಿಗೆ ಮೊದಲ ಹಾಗೂ 2ನೇ ಡೋಸ್‌ ಲಸಿಕೆಯನ್ನು 20 ದಿನಗಳಲ್ಲಿ ನೀಡಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಲಸಿಕೆಗಾಗಿ ಜನರು ಸರದಿಯಲ್ಲಿ ಕಾಯುವುದು, ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುವುದು ನಿಂತಿದೆ.

ಜಿಲ್ಲೆಯಲ್ಲಿ ಒಟ್ಟು 12,19,886 ಜನರಿಗೆ ಲಸಿಕೆ ಹಾಕುವ ಗುರಿ ನಿಗದಿಯಾಗಿದೆ. ಈ ವರೆಗೆ ಮೊದಲ ಡೋಸ್‌ ಲಸಿಕೆ ಪಡೆದವರ ಸಂಖ್ಯೆ 5,06,460ರಷ್ಟು, 2ನೇ ಡೋಸ್‌ ಲಸಿಕೆಯನ್ನು 1,23,064 ಜನರು ಹಾಕಿಸಿಕೊಂಡಿದ್ದಾರೆ. ಕೋವ್ಯಾಕ್ಸಿನ್‌ಗಿಂತ ಕೋವಿಶೀಲ್ಡ್‌ ಲಸಿಕೆಯನ್ನು ಹೆಚ್ಚು ಜನರು ಪಡೆದಿದ್ದಾರೆ. ಮೊದಲಿನಿಂದಲೂ ಕೋವಿಶೀಲ್ಡ್‌ ಲಸಿಕೆ ಹೆಚ್ಚಾಗಿ ಪೂರೈಕೆಯಾಗುತ್ತಿದೆ. ಹಾಗಾಗಿಯೇ ಜನರು ಅನಿವಾರ್ಯವಾಗಿ ಕೋವಿಶೀಲ್ಡ್‌ ಲಸಿಕೆಯತ್ತ ವಾಲಿದ್ದಾರೆ. ಮೊದಲ ಡೋಸ್‌ನಲ್ಲಿ ಕೋವ್ಯಾಕ್ಸಿನ್‌ ಪಡೆದವರು ಮಾತ್ರ ಕೋವ್ಯಾಕ್ಸಿನ್‌ ಪಡೆಯುತ್ತಿದ್ದಾರೆ. ಜನರಿಗೆ ಕೋವಿಡ್‌ ಲಸಿಕೆ ನೀಡಲು ಆರಂಭಿಸಿದಾಗಿನಿಂದ ಒಟ್ಟು 5,27,530 ಜನರು ಕೋವಿಶೀಲ್ಡ್‌, 77,850 ಜನರು ಕೋವ್ಯಾಕ್ಸಿನ್‌ ಲಸಿಕೆ ಪಡೆದಿದ್ದಾರೆ.

ಮೊದಲ ಹಂತದಲ್ಲಿ 10,661 ಆರೋಗ್ಯ ಇಲಾಖೆಯ ವಾರಿಯರ್ಸ್‌ಗಳಿಗೆ ಲಸಿಕೆ ನೀಡಲು ಆದ್ಯತೆ ನೀಡಲಾಗಿತ್ತು. ಇದರಲ್ಲಿ 10,315 ಜನರು ಲಸಿಕೆ ಪಡೆದಿದ್ದು, ಶೇ. 97ರಷ್ಟುಸಾಧನೆಯಾಗಿದೆ. 2ನೇ ಹಂತದಲ್ಲಿ ಫ್ರಂಟ್‌ಲೈನ್‌ ವಾರಿಯ​ರ್‍ಸ್ಗೆ ಲಸಿಕೆ ನೀಡಲು ಆರಂಭಿಸಲಾಯಿತು. ಆಗ ಲಸಿಕೆ ಪಡೆಯಲು ಬಹಳಷ್ಟು ಜನರು ಮುಂದೆ ಬಂದಿರಲಿಲ್ಲ. ಆನಂತರ ಲಸಿಕೆ ಪಡೆಯಲು ವಾರಿಯರ್ಸ್‌ ಮುಂದಾಗಿದ್ದರಿಂದ ಒಟ್ಟು ಗುರಿ 9,662ರಲ್ಲಿ 9,175 ಜನರು ಈ ವರೆಗೆ ಲಸಿಕೆ ಪಡೆದಿದ್ದು, ಶೇ. 95ರಷ್ಟು ಸಾಧನೆಯಾಗಿದೆ.

ಲಸಿಕೆ ವಿತರಣೆಯಲ್ಲಿ ಸಿಎಂ ತವರು ಜಿಲ್ಲೆಗೆ ಲಾಸ್ಟ್‌ ಸ್ಥಾನ!

ಆನಂತರ 60 ವರ್ಷ ಮೇಲ್ಪಟ್ಟವರಿಗೆ ಲಸಿಕಾಕರಣ ಆರಂಭವಾಯಿತು. 1,35,145 ಜನರಿಗೆ ಲಸಿಕೆ ಹಾಕುವ ಗುರಿ ಇತ್ತು. 1,04,274 ಜನರು ಈ ವರೆಗೆ ಲಸಿಕೆ ಪಡೆದಿದ್ದು, ಶೇ. 77ರಷ್ಟುಸಾಧನೆಯಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಲಸಿಕಾಕರಣಕ್ಕೆ 2,80,280 ಜನರು ಲಸಿಕೆಗೆ ನೋಂದಾಯಿಸಿಕೊಂಡಿದ್ದರು. ಈ ವರೆಗೆ ಇದರಲ್ಲಿ ಶೇ. 52ರಷ್ಟುಸಾಧನೆಯಾಗಿದೆ. ಕೊನೆಯ ಹಂತದಲ್ಲಿ 18ರಿಂದ 44 ವರ್ಷದೊಳಗಿನವರಿಗೆ ಲಸಿಕೆ ಹಾಕಲು ಆರಂಭಿಸಿದಾಗ 7,84,138 ಜನರು ಲಸಿಕೆಗೆ ನೋಂದಾಯಿಸಿಕೊಂಡಿದ್ದು, ಅದರಲ್ಲಿ 2,37,083 ಜನರಿಗೆ ಲಸಿಕೆ ಹಾಕಲಾಗಿದೆ. ಶೇ. 30ರಷ್ಟುಮಾತ್ರ ಸಾಧನೆಯಾಗಿದೆ.

ನವಂಬರ್‌ ಅಂತ್ಯಕ್ಕೆ ಎಲ್ಲರಿಗೂ ಲಸಿಕೆ:

ಆರಂಭದಲ್ಲಿ ಲಸಿಕೆ ಪಡೆಯಲು ಹೆಚ್ಚಿನ ಪ್ರಮಾಣದಲ್ಲಿ ಜನರು ಮುಂದೆ ಬರಲಿಲ್ಲ. ಯಾವಾಗ ಕೊರೋನಾ 2ನೇ ಅಲೆ ಅಬ್ಬರ ಜೋರಾಯಿತೋ ಆಗ ಲಸಿಕೆಗೆ ಜನರು ಒಮ್ಮೆಲೆ ಮುಗಿಬಿದ್ದರು. ಹೀಗಾಗಿ ಜೂನ್‌ ಹಾಗೂ ಜುಲೈ ತಿಂಗಳಲ್ಲಿ ಲಸಿಕೆಯ ಅಭಾವ ಸೃಷ್ಟಿಯಾಗಿತ್ತು. ಈಗ ದಿನಕ್ಕೆ 15ರಿಂದ 20 ಸಾವಿರದಷ್ಟುಜನರಿಗೆ ಲಸಿಕೆ ಹಾಕಲಾಗುತ್ತಿದೆ. ಇದು ಹೀಗೆ ಮುಂದುವರಿದರೆ ನವಂಬರ್‌ ಅಂತ್ಯದೊಳಗೆ ಎಲ್ಲರಿಗೂ ಲಸಿಕೆ ಸಿಗುವ ನಿರೀಕ್ಷೆಯಿದೆ.

ಲಸಿಕಾಕರಣದ ಪ್ರಗತಿಯ ವಿವರ

ತಾಲೂಕು ಶೇಕಡಾವಾರು ಸಾಧನೆ

ಬ್ಯಾಡಗಿ 58.88
ಹಾನಗಲ್ಲ 48.29
ಹಾವೇರಿ 53.46
ಹಿರೇಕೆರೂರು 51.90
ರಾಣಿಬೆನ್ನೂರು 48.31
ಸವಣೂರು 52.39
ಶಿಗ್ಗಾಂವಿ 53.16
ಒಟ್ಟು ಶೇ. 51.61

ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಲಸಿಕಾಕರಣವನ್ನು ತೀವ್ರಗೊಳಿಸಲಾಗಿದೆ. ಲಸಿಕೆ ಯಾವ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆಯೋ ಅದೇ ಮಾದರಿಯಲ್ಲಿ ಹೆಚ್ಚಿನ ಕೇಂದ್ರಗಳನ್ನು ತೆರೆದು ಅಂದು ಪೂರೈಕೆಯಾದ ಲಸಿಕೆಯನ್ನು ಅಂದೇ ಖಾಲಿ ಮಾಡುತ್ತಿದ್ದೇವೆ. ಪ್ರತಿದಿನ ಬೇಡಿಕೆಗೆ ತಕ್ಕಂತೆ ಲಸಿಕೆ ಬಂದರೆ ಶೀಘ್ರದಲ್ಲಿಯೇ ಜಿಲ್ಲೆಯಲ್ಲಿನ ಎಲ್ಲರಿಗೂ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಎಂ. ಜಯಾನಂದ ತಿಳಿಸಿದ್ದಾರೆ. 
 

Follow Us:
Download App:
  • android
  • ios