* ವರ್ಷದಲ್ಲಿ 156 ಕೋಟಿ ಡೋಸ್‌ ವಿತರಣೆ* ಭಾರತದ ಲಸಿಕಾ ಅಭಿಯಾನಕ್ಕೆ 1 ವರ್ಷ

ನವದೆಹಲಿ(ಜ.16): ಕೋವಿಡ್‌ ನಿಯಂತ್ರಣದ ನಿಟ್ಟಿನಲ್ಲಿ ಭಾರತದಲ್ಲಿ ಆರಂಭಿಸಲಾದ ಕೋವಿಡ್‌ ಲಸಿಕಾ ಅಭಿಯಾನಕ್ಕೆ ಜ.16ರ ಭಾನುವಾರ ಒಂದು ವರ್ಷ ಪೂರ್ಣಗೊಳ್ಳಲಿದೆ. ಈ ಒಂದು ವರ್ಷದಲ್ಲಿ 156 ಕೋಟಿ ಡೋಸ್‌ ಲಸಿಕೆ ವಿತರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರ ಮೂಲಕ ಆರಂಭಗೊಂಡ ಅಭಿಯಾನ ಬಳಿಕ 65 ವರ್ಷ ಮೇಲ್ಪಟ್ಟವರು, ವಿವಿಧ ಆರೋಗ್ಯ ಸಮಸ್ಯೆಯಿಂದ ಮೇಲ್ಪಟ್ಟವರಿಗೆ ವಿಸ್ತರಿಸಲಾಯಿತು. ನಂತರ 18 ವರ್ಷ ಮೇಲ್ಪಟ್ಟಎಲ್ಲರಿಗೂ ಲಸಿಕೆ ನೀಡಿಕೆ ಆರಂಭವಾಯಿತು. ಇನ್ನು ಕಳೆದ ಜ.3ರಿಂದ 15-18ರ ವಯೋಮಾನದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದ್ದು, ಜ.10ರಿಂದ ಮುಂಜಾಗ್ರತಾ ಲಸಿಕೆಯನ್ನು ನೀಡಲಾಗುತ್ತಿದೆ.

* 156 ಕೋಟಿ ವಿತರಿಸಿದ ಒಟ್ಟು ಡೋಸ್‌ ಪ್ರಮಾಣ

* 90.89 ಕೋಟಿ ಮೊದಲ ಡೋಸ್‌ ಪಡೆದವರು

* 65.44 ಕೋಟಿ ಎರಡನೇ ಡೋಸ್‌ ಪಡೆದವರು

* 3.51 ಕೋಟಿ ಲಸಿಕೆ ಪಡೆದ ಮಕ್ಕಳ ಪ್ರಮಾಣ

* 41.83 ಲಕ್ಷ ಮುಂಜಾಗ್ರತಾ ಲಸಿಕೆ ಪಡೆದವರು

* 79.75 ಕೋಟಿ ಲಸಿಕೆ ಪಡೆದ ಪುರುಷರ

* 76.13 ಕೋಟಿ ಲಸಿಕೆ ಪಡೆದ ಮಹಿಳೆಯರು

* 135 ಕೋಟಿ ವಿತರಿಸಿದ ಕೋವಿಶೀಲ್ಡ್‌ ಲಸಿಕೆ

* 20 ಕೋಟಿ ವಿತರಿಸಿದ ಕೋವ್ಯಾಕ್ಸಿನ್‌ ಲಸಿಕೆ

2.68 ಲಕ್ಷ ಕೇಸ್‌, 402 ಸಾವು

ದೇಶದಲ್ಲಿ ಶನಿವಾರ ಒಂದೇ ದಿನ 2,68,833 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದ್ದು, 402 ಮಂದಿ ಮೃತಪಟ್ಟಿದ್ದಾರೆ. ಶುಕ್ರವಾರ 2.64 ಲಕ್ಷ ಜನರಲ್ಲಿ ಸೋಂಕು ಪತ್ತೆಯಾಗಿದ್ದಕ್ಕೆ ಹೋಲಿಸಿದರೆ ಶನಿವಾರ ಸುಮಾರು 4000 ಪ್ರಕರಣಗಳು ಮಾತ್ರ ಏರಿಕೆಯಾಗಿವೆ. ಶನಿವಾರದ ಪಾಸಿಟಿವಿಟಿ ದರ ಶೇ.16.66 ಇದೆ. ಮರಣ ದರ ಶೇ.1.32ರಷ್ಟಿದೆ.

ದೇಶದಲ್ಲಿ ಸಕ್ರಿಯ ಕೊರೋನಾ ಸೋಂಕಿತರ ಸಂಖ್ಯೆ 14.17 ಲಕ್ಷಕ್ಕೆ ಏರಿಕೆಯಾಗಿದೆ. ಇದು 223 ದಿನಗಳ ಗರಿಷ್ಠವಾಗಿದೆ. ಈವರೆಗೆ 6041 ಜನರಿಗೆ ಒಮಿಕ್ರೋನ್‌ ಸೋಂಕು ತಗಲಿದೆ. ಕೊರೋನಾದಿಂದ ಗುಣಮುಖರಾಗುವ ದರ ಶೇ.94.83ಕ್ಕೆ ಇಳಿಕೆಯಾಗಿದೆ. ಶನಿವಾರ ಮೃತಪಟ್ಟ402 ಜನರ ಪೈಕಿ ಕೇರಳದಲ್ಲೇ 199 ಜನರು ಹಾಗೂ ದೆಹಲಿಯಲ್ಲಿ 34 ಜನರು ಮೃತಪಟ್ಟಿದ್ದಾರೆ. ಈವರೆಗೆ ಕೊರೋನಾದಿಂದ ದೇಶದಲ್ಲಿ 1.41 ಲಕ್ಷ ಜನರು ಮೃತಪಟ್ಟಿದ್ದು, ಮಹಾರಾಷ್ಟ್ರದಲ್ಲಿ ಅತಿಹೆಚ್ಚು, ಕೇರಳದಲ್ಲಿ 2ನೇ ಅತಿಹೆಚ್ಚು ಹಾಗೂ ಕರ್ನಾಟಕದಲ್ಲಿ 3ನೇ ಅತಿಹೆಚ್ಚು (36956) ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.