ನವದೆಹಲಿ(ಏ.10): ಲಕ್ಷದ್ವೀಪ ಸಮುದ್ರದಲ್ಲಿ ಭಾರತದ ಜತೆಗೆ ಅಮೆರಿಕ ತಗಾದೆ ತೆಗೆದಿರುವ ಅಪರೂಪದ ಬೆಳವಣಿಗೆಯೊಂದು ನಡೆದಿದೆ. ಲಕ್ಷದ್ವೀಪ ಸಮುದ್ರ ಭಾರತದ ವಿಶೇಷ ಆರ್ಥಿಕ ವಲಯ (ಇಇಝಡ್‌) ವ್ಯಾಪ್ತಿಗೆ ಬರುತ್ತದೆ. ಹಾಗಿದ್ದರೂ ಉದ್ದೇಶಪೂರ್ವಕವಾಗಿ ಭಾರತದ ಅನುಮತಿಯನ್ನು ಪಡೆಯದೆ ಅಮೆರಿಕದ ಯುದ್ಧ ನೌಕೆಯೊಂದು ಆ ಭಾಗದಲ್ಲಿ ಕಳೆದ ವಾರ ಗಸ್ತು ತಿರುಗಿದೆ.

ಇದರ ಬೆನ್ನಲ್ಲೇ ಅಮೆರಿಕದ ನಡೆಗೆ ಭಾರತ ಆಕ್ಷೇಪಿಸಿದೆ. ‘ಭಾರತದ ವಿಶೇಷ ಆರ್ಥಿಕ ವಲಯದಲ್ಲಿ ನಮಗೆ ಮಾಹಿತಿ ನೀಡದೇ ಅಮೆರಿಕದ ನೌಕೆ ಸಾಗಿದ್ದರ ಬಗ್ಗೆ ನಾವು ಕಳವಳವನ್ನು ಅಮೆರಿಕಕ್ಕೆ ತಲುಪಿಸಿದ್ದೇವೆ. ಇಇಝಡ್‌ನಲ್ಲಿ ಸಂಬಂಧಿಸಿದ ದೇಶಕ್ಕೆ ಮಾಹಿತಿ ನೀಡದೇ ಯುದ್ಧತಾಲೀಮು ಅಥವಾ ಸಂಚಾರ ನಡೆಸುವುದು ಅಂತಾರಾಷ್ಟ್ರೀಯ ನಿಯಮದ ಪ್ರಕಾರ ತಪ್ಪು’ ಎಂದು ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.

ಆಗಿದ್ದೇನು?:

‘ಅಮೆರಿಕದ ಯುಎಸ್‌ಎಸ್‌ ಜಾನ್‌ ಪಾಲ್‌ ಜೋನ್ಸ್‌ ಎಂಬ ನೌಕೆ ಲಕ್ಷದ್ವೀಪದಿಂದ ಪಶ್ಚಿಮಕ್ಕೆ 130 ನಾಟಿಕಲ್‌ ಮೈಲು ದೂರದಲ್ಲಿ ಗಸ್ತು ತಿರುಗಿದೆ. ಭಾರತದ ಅನುಮತಿಯನ್ನು ಪಡೆಯದೆ ಏ.7ರಂದು ಈ ಚಟುವಟಿಕೆ ನಡೆಸಿದ್ದೇವೆ. ಇದು ಅಂತಾರಾಷ್ಟ್ರೀಯ ನಿಯಮಗಳಿಗೆ ಅನುಗುಣವಾಗಿದೆ’ ಎಂದು ಅಮೆರಿಕ ನೌಕಾಪಡೆಯ 7ನೇ ಪಡೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

‘ತನ್ನ ಇಇಝಡ್‌ನಲ್ಲಿ ಮಿಲಿಟರಿ ಚಟುವಟಿಕೆ ನಡೆಸಲು ಪೂರ್ವಾನುಮತಿ ಪಡೆಯಬೇಕು ಎಂದು ಭಾರತ ಹೇಳುತ್ತದೆ. ಆದರೆ ಅಂತಾರಾಷ್ಟ್ರೀಯ ಕಾನೂನಿಗೆ ಇದು ತದ್ವಿರುದ್ಧವಾಗಿದೆ. ಅಮೆರಿಕ ಪಡೆಗಳು ಪ್ರತಿನಿತ್ಯ ಭಾರತ- ಪೆಸಿಫಿಕ್‌ ವಲಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಂತಾರಾಷ್ಟ್ರೀಯ ಕಾಯ್ದೆಗೆ ಅನುಗುಣವಾಗಿಯೇ ಈ ಚಟುವಟಿಕೆ ನಡೆಯುತ್ತಿದೆ. ಆ ಕಾಯ್ದೆಗೆ ಅನುಗುಣವಾಗಿ ಅಮೆರಿಕ ಎಲ್ಲಿ ಬೇಕಾದರೂ ಹಾರಾಡಬಹುದು, ತೇಲಬಹುದು, ಕಾರ್ಯನಿರ್ವಹಿಸಬಹುದು’ ಎಂದು ಹೇಳಿದೆ.

ಏನಿದು ಇಇಝಡ್‌?

ಯಾವುದೇ ದೇಶದ ಕರಾವಳಿಯಿಂದ 200 ನಾಟಿಕಲ್‌ ಮೈಲು (370 ಕಿ.ಮೀ.) ದೂರದವರೆಗಿನ ಸಮುದ್ರ ಪ್ರದೇಶ ಆಯಾ ದೇಶಗಳಿಗೆ ಸೇರಿರುತ್ತದೆ. ಅಲ್ಲಿನ ನೀರು, ತೈಲ, ನೈಸರ್ಗಿಕ ಅನಿಲ, ಮೀನು ಸೇರಿ ಎಲ್ಲ ಬಗೆಯ ಸಂಪನ್ಮೂಲಕ್ಕೆ ಆ ದೇಶಕ್ಕೆ ಮಾತ್ರ ವಿಶೇಷ ಹಕ್ಕು ಇರುತ್ತದೆ. ಇದನ್ನು ವಿಶೇಷ ಆರ್ಥಿಕ ವಲಯ ಅಥವಾ ಎಕ್ಸ್‌ಕ್ಲೂಸಿವ್‌ ಎಕನಾಮಿಕ್‌ ಝೋನ್‌ (ಇಇಝಡ್‌) ಎಂದು ಕರೆಯಲಾಗುತ್ತದೆ. ಇಂತಹ ಪ್ರದೇಶದಲ್ಲಿ ಯಾವುದೇ ಮಿಲಿಟರಿ ಚಟುವಟಿಕೆ ನಡೆಸುವ ಮುನ್ನ ಸಂಬಂಧಿಸಿದ ದೇಶದ ಅನುಮತಿಯನ್ನು ಪಡೆದುಕೊಳ್ಳಬೇಕು. 2019ರಲ್ಲಿ ಇದೇ ರೀತಿ ಚೀನಾ ನೌಕೆಯೊಂದು ಅಂಡಮಾನ್‌- ನಿಕೋಬಾರ್‌ ದ್ವೀಪಕ್ಕೆ ಬಂದಾಗ ಭಾರತೀಯ ನೌಕಾಪಡೆ ಹಿಮ್ಮೆಟ್ಟಿಸಿತ್ತು.

ಅಚ್ಚರಿ

ದಕ್ಷಿಣ ಚೀನಾ ಸಮುದ್ರ ತೀರದ ದೇಶಗಳಿಗೆ ಸವಾಲೊಡ್ಡಿರುವ ಚೀನಾಕ್ಕೆ ಸಡ್ಡು ಹೊಡೆಯಲು ಆ ಸಮುದ್ರದಲ್ಲಿ ಇಂತಹ ಗಸ್ತನ್ನು ಅಮೆರಿಕ ನೌಕೆಗಳು ತಿರುಗುತ್ತವೆ. ಆದರೆ ಭಾರತದ ವಿಶೇಷ ಆರ್ಥಿಕ ವಲಯದಲ್ಲೂ ಅಂತಹ ಗಸ್ತನ್ನು ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಭಾರತ- ಪೆಸಿಫಿಕ್‌ ವಲಯದಲ್ಲಿ ಬಲವೃದ್ಧಿಗೆ ಭಾರತದ ಸಹಕಾರ ಕೇಳುತ್ತಿರುವ ಅಮೆರಿಕ ಈ ವರ್ತನೆ ತೋರಿರುವುದು ಸಂಚಲನಕ್ಕೆ ಕಾರಣವಾಗಿದೆ.