Asianet Suvarna News Asianet Suvarna News

ಹಿಂದೆ ಇಂದು ಮುಂದೆ ಎಂದೆಂದೂ ಅರುಣಾಚಲ ಭಾರತದ ಅವಿಭಾಜ್ಯ ಅಂಗ: ಚೀನಾಗೆ ಭಾರತ ತಿರುಗೇಟು

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದಕ್ಕೆ  ವಿರೋಧ ವ್ಯಕ್ತಪಡಿಸಿದ ಚೀನಾಗೆ ಭಾರತ ತಿರುಗೇಟು ನೀಡಿದೆ.  

India condemns Chinas opposition on Amit Shahs Arunachal visit, Past Today Future Forever Arunachal is an integral part of India akb
Author
First Published Apr 12, 2023, 12:59 PM IST

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದಕ್ಕೆ  ವಿರೋಧ ವ್ಯಕ್ತಪಡಿಸಿದ ಚೀನಾಗೆ ಭಾರತ ತಿರುಗೇಟು ನೀಡಿದೆ.  ಅರುಣಾಚಲ ಪ್ರದೇಶವೂ ಹಿಂದೆ ಇಂದು ಮುಂದೆ ಹಾಗೂ ಎಂದೆಂದೂ ಭಾರತದ ಅವಿಭಾಜ್ಯ ಅಂಗವಾಗಿರಲಿದೆ ಎಂದು ಭಾರತ ಹೇಳಿದೆ.  ಚೀನಾದ ವಿದೇಶಾಂಗ ಸಚಿವ ವಾಂಗ್ ವೆನ್‌ಬಿನ್ (Wang Wenbin) ಝಾಂಗ್ನಾನ್‌(Zangnan) (ಅರುಣಾಚಲ ಪ್ರದೇಶಕ್ಕೆ ಚೀನಾ ಇಟ್ಟಿರುವ ಹೆಸರು) ಚೀನಾದ ಅವಿಭಾಜ್ಯ ಅಂಗ ಎಂದು ಹೇಳಿದ್ದರು.  

ಅಲ್ಲದೇ ಎಪ್ರಿಲ್ 10 ರಂದು ಅರುಣಾಚಲ ಪ್ರದೇಶಕ್ಕೆ ಅಮಿತ್ ಷಾ ಭೇಟಿ ನೀಡಿದ್ದಕ್ಕೆ ಚೀನಾ ತೀವ್ರ ವಿರೋಧ ವ್ಯಕ್ತಪಡಿಸಿತ್ತು.  ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಅವರು ಈ ಬಗ್ಗೆ ಮಾತನಾಡಿದ್ದು, ಅಮಿತ್ ಷಾ ಭೇಟಿಗೆ ಚೀನಾ ವಿರೋಧ ತೋರುವುದಕ್ಕೆ ಯಾವುದೇ ಅರ್ಥವಿಲ್ಲ. ವಿರೋಧ ತೋರಿದ ಕೂಡಲೇ ವಾಸ್ತವ ಬದಲಾಗುವುದಿಲ್ಲ ಎಂದು ಅರಿಂದಮ್ ಬಗ್ಚಿ ಹೇಳಿದ್ದಾರೆ. 

ಸೂಜಿಮೊನೆಯಷ್ಟು ಜಾಗವನ್ನೂ ಕಬಳಿಸಲಾಗದು: ಅರುಣಾಚಲ ಪ್ರದೇಶದಲ್ಲಿ ಚೀನಾ ವಿರುದ್ಧ ಅಮಿತ್‌ ಶಾ ಗುಡುಗು

ಅಮಿತ್ ಷಾ ಭೇಟಿಯನ್ನು ವಿರೋಧಿಸಿದ ಚೀನಾ, ಈ ಭೇಟಿಯೂ ಚೀನಾದ ಪ್ರಾದೇಶಿಕ ಏಕತೆಯ ಉಲ್ಲಂಘನೆಯಾಗಿದೆ. ಹಾಗೂ ಇದು ಗಡಿಯಲ್ಲಿ ಶಾಂತಿ ಹಾಗೂ ನೆಮ್ಮದಿಗೆ ಅನುಕೂಲವಾಗಿಲ್ಲ ಎಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ,  ಚೀನಾದ ಅಧಿಕೃತ ಅಧಿಕಾರಿಗಳು ಅರುಣಾಚಲ ಬಗ್ಗೆ ನೀಡಿದ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ ಹಾಗೂ ತಿರಸ್ಕರಿಸುತ್ತೇವೆ.  ಭಾರತದ ನಾಯಕರು ಭಾರತದ ಇತರ ರಾಜ್ಯಗಳಿಗೆ ಆಗಾಗ ಹೋಗುತ್ತಿರುವಂತೆ ಅರುಣಾಚಲಕ್ಕೂ ಹೋಗುತ್ತಿರುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. 

ಅರುಣಾಚಲ ಪ್ರದೇಶ ಹಿಂದೆ ಇಂದು ಮುಂದೆ ಎಂದೆಂದೂ ಭಾರತದ ಅವಿಭಾಜ್ಯ ಭಾಗವಾಗಿರಲಿದೆ. ಇಂತಹ ವಿರೋಧಗಳು ವಾಸ್ತವವನ್ನು ಬದಲಿಸದು ಎಂದು ಅವರು ಹೇಳಿದ್ದಾರೆ. 

ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರು ನಾಮಕರಣ ಮಾಡಿದ್ದ ಚೀನಾ

ಕೆಲದಿನಗಳ ಹಿಂದೆ ಚೀನಾ ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಚೀನಿ ಹೆಸರಿಟ್ಟು ಮರುನಾಮಕರಣ ಮಾಡಿತ್ತು.  ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶವನ್ನು ತನ್ನದೇ ಎಂದು ಚೀನಾ ಆಗಾಗ್ಗೆ ಹೇಳಿಕೊಳ್ಳುತ್ತಿರುತ್ತದೆ. ಇದೇ ರೀತಿ, ಅರುಣಾಚಲ ಪ್ರದೇಶದ ಮೇಲಿನ ತನ್ನ ಹಕ್ಕನ್ನು ಮತ್ತೊಮ್ಮೆ ಒತ್ತಿಹೇಳುವ ಪ್ರಯತ್ನದ ಭಾಗವಾಗಿ ಚೀನಾವು ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಹೊಸ ಹೆಸರುಗಳನ್ನು ಬಿಡುಗಡೆ ಮಾಡಿತ್ತು. ಹಾಗಂತ ಚೀನಾ ಈ ರೀತಿ ಮಾಡಿರುವುದು ಇದೇ ಮೊದಲೇನಲ್ಲ. ಮೂರನೇ ಬಾರಿಗೆ ಚೀನಾವು ಅರುಣಾಚಲ ಪ್ರದೇಶದ ಸ್ಥಳಗಳಿಗೆ 'ಮರುನಾಮಕರಣ' ಮಾಡಿದ್ದು, ಅದನ್ನು "ಜಂಗ್ನಾನ್, ಟಿಬೆಟ್‌ನ ದಕ್ಷಿಣ ಭಾಗ" ಎಂದು ಕರೆದಿತ್ತು. 

ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಎಪ್ರಿಲ್ 3 ರಂದು ಚೀನಾದ ಕ್ಯಾಬಿನೆಟ್, ಸ್ಟೇಟ್ ಕೌನ್ಸಿಲ್ ನೀಡಿದ ಭೌಗೋಳಿಕ ಹೆಸರುಗಳ ಮೇಲಿನ ನಿಯಮಗಳಿಗೆ ಅನುಸಾರವಾಗಿ ಚೈನೀಸ್‌, ಟಿಬೆಟಿಯನ್ ಮತ್ತು ಪಿನ್ಯಿನ್ ಅಕ್ಷರಗಳಲ್ಲಿ ಹೆಸರುಗಳ ಗುಂಪನ್ನು ಬಿಡುಗಡೆ ಮಾಡಿರುವುದಾಗಿ ಹೇಳಿಕೊಂಡಿತ್ತು. ಚೀನಾ ಬಿಡುಗಡೆ ಮಾಡಿರುವ ಹೆಸರುಗಳ ಪಟ್ಟಿಯಲ್ಲಿ ಐದು ಪರ್ವತ ಶಿಖರಗಳು, ಎರಡು ಭೂ ಪ್ರದೇಶಗಳು, ಎರಡು ವಸತಿ ಪ್ರದೇಶಗಳು ಮತ್ತು ಎರಡು ನದಿಗಳು ಸೇರಿವೆ. ಈ ಬಗ್ಗೆ ಚೀನಾದ ಸರ್ಕಾರಿ ಟ್ಯಾಬ್ಲಾಯ್ಡ್ ಗ್ಲೋಬಲ್ ಟೈಮ್ಸ್ ಸರ್ಕಾರದ ಅಧಿಸೂಚನೆಯ ವರದಿಯಲ್ಲಿ ತಿಳಿಸಿದೆ.

ಮತ್ತೆ ಚೀನಾ ಕಿರಿಕ್‌: ಇಬ್ಬರು ಭಾರತೀಯ ಪತ್ರಕರ್ತರ ವೀಸಾ ಫ್ರೀಜ್‌ ಮಾಡಿದ ಜಿನ್‌ಪಿಂಗ್‌ ಸರ್ಕಾರ..!

ಈ ಹಿಂದೆಯೂ 2017 ಮತ್ತು 2021 ರಲ್ಲಿ ಅಂತಹ ಪಟ್ಟಿಗಳನ್ನು ಬಿಡುಗಡೆ ಮಾಡಲಾಗಿತ್ತು. ಚೀನಾ 2017 ರಲ್ಲಿ ಆರು ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದರೆ, ಮತ್ತೆ 2021 ರಲ್ಲಿ ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ 'ಮರುನಾಮಕರಣ' ಮಾಡಿದೆ. ಆದರೆ, ಆ ಎರಡೂ ಸಂದರ್ಭಗಳಲ್ಲಿ ರಾಜ್ಯವು "ಯಾವಾಗಲೂ" ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿತ್ತು. 

Follow Us:
Download App:
  • android
  • ios