ನವದೆಹಲಿ(ಜು.17): ಬೇಹುಗಾರಿಕೆಯ ಸುಳ್ಳು ಆರೋಪ ಹೊರಿಸಿ ಭಾರತೀಯ ನಾಗರಿಕ ಕುಲಭೂಷಣ್‌ ಜಾಧವ್‌ಗೆ ಗಲ್ಲು ಶಿಕ್ಷೆ ವಿಧಿಸುವಂತೆ ನೋಡಿಕೊಂಡಿದ್ದ ಪಾಕಿಸ್ತಾನ ಸರ್ಕಾರ, ಇದೀಗ ಮುಕ್ತ ರಾಯಭಾರ ಸಂಪರ್ಕ ಕಲ್ಪಿಸುವ ವಿಷಯದಲ್ಲೂ ತನ್ನ ಕಪಟತನ ಮೆರೆದಿದೆ.

ಭಾರತದ ಬೇಡಿಕೆಯಂತೆ ಗುರುವಾರ ಇಸ್ಲಾಮಾಬಾದ್‌ನ ಜೈಲಿನಲ್ಲಿ ಇಬ್ಬರು ಭಾರತೀಯ ರಾಯಭಾರ ಸಿಬ್ಬಂದಿಗೆ ಕುಲಭೂಷಣ್‌ ಜಾಧವ್‌ರನ್ನು ಭೇಟಿ ಮಾಡಲು ಪಾಕ್‌ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಕಳೆದ 4 ವರ್ಷಗಳಲ್ಲಿ ನಡೆಯುತ್ತಿರುವ ಈ 2ನೇ ರಾಯಭಾರ ಭೇಟಿ ವೇಳೆ ಮುಕ್ತ ಸಂಪರ್ಕದ ಭರವಸೆ ನೀಡಿತ್ತು.

ಅದರಂತೆ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ತೆರಳಿದ್ದರಾದರೂ, ಈ ವೇಳೆ ಅಡೆತಡೆರಹಿತ, ಬೇಷರತ್‌ ಮತ್ತು ಮುಕ್ತವಾಗಿ ಮಾತನಾಡುವ ಅವಕಾಶವನ್ನು ಪಾಕಿಸ್ತಾನ ಕಲ್ಪಿಸಲಿಲ್ಲ. ಮಾತುಕತೆ ವೇಳೆ ತನ್ನ ಅಧಿಕಾರಿಗಳನ್ನು ಜಾಧವ್‌ ಪಕ್ಕದಲ್ಲೇ ಕೂರಿಸುವ ಮೂಲಕ ಅವರು ಮುಕ್ತವಾಗಿ ಮಾತನಾಡದಂತೆ ಬೆದರಿಕೆ ತಂತ್ರವನ್ನೂ ಪ್ರಯೋಗಿಸಿದೆ.

ಗಲ್ಲು ಶಿಕ್ಷೆ, ಪರಿಶೀಲನಾ ಅರ್ಜಿ ಸಲ್ಲಿಸಲು ನಿರಾಕರಿಸಿದ ಕುಲಭೂಷಣ್ ಜಾಧವ್: ಪಾಕಿಸ್ತಾನ

ಈ ಬಗ್ಗೆ ಗುರುವಾರ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾತ್ಸವ, ‘ಜಾಧವ್‌ ಭೇಟಿ ಮಾಡಿದ ಭಾರತದ ರಾಯಭಾರಿ ಅಧಿಕಾರಿಗಳ ಮುಂದೆ ಜಾಧವ್‌ ಅವರು ಒತ್ತಡದಲ್ಲಿದ್ದಂತೆ ಕಂಡುಬಂದಿದ್ದರು. ಅಲ್ಲದೆ, ಭಾರತದ ಅಧಿಕಾರಿಗಳ ಜೊತೆ ಜಾಧವ್‌ ಅವರು ಮುಕ್ತವಾಗಿ ಮಾತನಾಡಲು ಪೂರಕ ವಾತಾವರಣ ಕಲ್ಪಿಸಿರಲಿಲ್ಲ. ಅಲ್ಲದೆ, ಜಾಧವ್‌ ಅವರಿಗೆ ಇರುವ ಕಾನೂನು ಹಕ್ಕುಗಳ ವಿವರಿಸುವುದರಿಂದ ತಡೆಯಲಾಗಿದ್ದು, ಕಾನೂನು ಪ್ರಾತಿನಿಧ್ಯಕ್ಕೆ ಜಾಧವ್‌ ಅವರಿಂದ ಲಿಖಿತ ಒಪ್ಪಿಗೆ ಪಡೆಯದಂತೆ ಪಾಕಿಸ್ತಾನ ತಡೆದಿದೆ’ ಎಂದು ಹೇಳಿದ್ದಾರೆ.