ನವದೆಹಲಿ (ಫೆ.12):  ಪೂರ್ವ ಲಡಾಖ್‌ ಗಡಿಯಲ್ಲಿ ಭಾರತ ಹಾಗೂ ಚೀನಾ ನಡುವೆ ಕಳೆದ ಒಂಬತ್ತು ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷದ ವಾತಾವರಣ ತಿಳಿಗೊಳಿಸುವ ನಿಟ್ಟಿನಲ್ಲಿ ಮಹತ್ತರ ಬೆಳವಣಿಗೆಯಾಗಿದೆ. ಪ್ಯಾಂಗಾಂಗ್‌ ಸರೋವರದ ಉತ್ತರ ಹಾಗೂ ದಕ್ಷಿಣದ ದಂಡೆಯಿಂದ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿದ್ದು, ಬುಧವಾರದಿಂದಲೇ ಸೇನಾಪಡೆಗಳ ಹಿಂತೆಗೆತ ಆರಂಭವಾಗಿದೆ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಇದರೊಂದಿಗೆ ಗಡಿಯಲ್ಲಿ ಭಾರೀ ಸೇನೆ, ಶಸ್ತ್ರಾಸ್ತ್ರ ಜಮಾವಣೆ ಮೂಲಕ ಭಾರತಕ್ಕೆ ಯುದ್ಧದ ಎಚ್ಚರಿಕೆ ನೀಡಿದ್ದ ಚೀನಾ ಕೊನೆಗೂ ಮೆತ್ತಗಾಗಿದೆ.

ಪ್ಯಾಂಗಾಂಗ್‌ ಸರೋವರದ ಬಳಿ ಯೋಧರ ವಾಪಸಾತಿ ಆರಂಭವಾಗಿದೆ ಎಂದು ಬುಧವಾರವಷ್ಟೇ ಚೀನಾ ಹೇಳಿಕೊಂಡಿತ್ತು. ಗುರುವಾರ ರಾಜ್ಯಸಭೆಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಆ ಪ್ರಕ್ರಿಯೆಯ ವಿವರಗಳನ್ನು ನೀಡಿದರು. ಇದೇ ವೇಳೆ, ಚೀನಾ ಜತೆ ನಡೆಸಿದ ನಿರಂತರ ಮಾತುಕತೆ ವೇಳೆ ಯಾವುದೇ ವಿಷಯದಲ್ಲೂ ರಾಜಿ ಮಾಡಿಕೊಂಡಿಲ್ಲ. ಯಾರೇ ಆಗಲಿ ಭಾರತದ ಒಂದಿಂಚೂ ಜಾಗವನ್ನು ಕಬಳಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

'ಡ್ರ್ಯಾಗನ್‌ಗೆ ಒಂದಿಂಚೂ ನೆಲ ಬಿಟ್ಟಿಲ್ಲ: ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಭಾರತ-ಚೀನಾ ಒಪ್ಪಂದ' ..

ಪ್ಯಾಂಗಾಂಗ್‌ ಸರೋವರದ ಬಳಿಯಿಂದ ಹಂತಹಂತವಾಗಿ, ಸಮನ್ವಯದೊಂದಿಗೆ, ಪರಿಶೀಲನೆಗೆ ಒಳಪಟ್ಟು ಸೇನಾಪಡೆಗಳ ಹಿಂತೆಗೆತ ನಡೆಯಲಿದೆ. ಮೇ 5ರಂದು ಸಂಘರ್ಷ ಆರಂಭವಾಗುವುದಕ್ಕೆ ಮುನ್ನ ಅಲ್ಲಿ ಯಾವ ಪರಿಸ್ಥಿತಿ ಇತ್ತೋ ಅದನ್ನು ಪುನರ್‌ಸ್ಥಾಪಿಸುವ ಸಂಬಂಧ ಒಪ್ಪಂದ ಮಾಡಿಕೊಂಡಿದ್ದು, ಅನುಷ್ಠಾನಕ್ಕೆ ತರಲಾಗುತ್ತದೆ. ಆದಷ್ಟುತ್ವರಿತವಾಗಿ ಯೋಧರ ವಾಪಸಾತಿಗೆ ಉಭಯ ದೇಶಗಳೂ ಒಪ್ಪಿಕೊಂಡಿವೆ ಎಂದು ತಿಳಿಸಿದರು.

ಸರೋವರದ ಉತ್ತರ ಹಾಗೂ ದಕ್ಷಿಣ ದಂಡೆಯಲ್ಲಿ ಕಳೆದ ವರ್ಷ ಏಪ್ರಿಲ್‌ ನಂತರ ನಿರ್ಮಿಸಲಾಗಿರುವ ಕಟ್ಟಡಗಳನ್ನು ತೆರವುಗೊಳಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ. ಸಾಂಪ್ರದಾಯಿಕ ಪ್ರದೇಶಗಳಲ್ಲಿ ಗಸ್ತು ಸೇರಿದಂತೆ ಎಲ್ಲ ಮಿಲಿಟರಿ ಚಟುವಟಿಕೆಗಳಿಗೆ ತಾತ್ಕಾಲಿಕ ನಿರ್ಬಂಧವಿರುತ್ತದೆ ಎಂದು ವಿವರಿಸಿದರು.

ಸೇನಾಪಡೆಗಳ ಹಿಂಪಡೆತ ಹೀಗೆ:

ಒಪ್ಪಂದದ ಪ್ರಕಾರ, ಚೀನಾ ಸೇನೆ ತನ್ನ ಪಡೆಗಳನ್ನು ಸರೋವರದ ಉತ್ತರ ದಂಡೆಯಿಂದ ಫಿಂಗರ್‌ 8ರ ಪೂರ್ವ ದಿಕ್ಕಿಗೆ ಸ್ಥಳಾಂತರಿಸಲಿದೆ. ಭಾರತೀಯ ಪಡೆಗಳನ್ನು ಫಿಂಗರ್‌ 3ರ ಬಳಿ ಇರುವ ಧಾನ್‌ ಸಿಂಗ್‌ ಥಾಪಾ ಪೋಸ್ಟ್‌ನಲ್ಲಿರುವ ಶಾಶ್ವತ ನೆಲೆಗೆ ಸ್ಥಳಾಂತರಿಸಲಾಗುತ್ತದೆ. ದಕ್ಷಿಣ ದಂಡೆಯಲ್ಲೂ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ರಾಜತಾಂತ್ರಿಕವಾಗಿ ಹಾಗೂ ಸೇನಾ ಮಟ್ಟದಲ್ಲಿ ಮಾತುಕತೆ ನಡೆಸಿ, ಒಪ್ಪಂದವೇರ್ಪಟ್ಟಬಳಿಕವೇ ಪ್ಯಾಂಗಾಂಗ್‌ ಸರೋವರದ ಬಳಿ ಗಸ್ತು ಪ್ರಕ್ರಿಯೆ ಪ್ರಾರಂಭವಾಗಲಿದೆ.

ಪ್ಯಾಂಗಾಂಗ್‌ ಸರೋವರದ ಬಳಿ ಗಸ್ತು ತಿರುಗುವ ವಿಚಾರವಾಗಿ ಮೇ 5ರಂದು ಭಾರತ ಹಾಗೂ ಚೀನಾ ನಡುವೆ ಸಂಘರ್ಷ ಏರ್ಪಟ್ಟಿತ್ತು. ಬಳಿಕ ಉಭಯ ದೇಶಗಳ ನಡುವೆ ಯುದ್ಧ ಸದೃಶ ವಾತಾವರಣ ನಿರ್ಮಾಣವಾಗಿ ಲಕ್ಷಕ್ಕೂ ಹೆಚ್ಚು ಯೋಧರನ್ನು ಮತ್ತು ಅತ್ಯಾಧುನಿಕ ಉಪಕರಣಗಳನ್ನೂ ಜಮಾವಣೆ ಮಾಡಲಾಗಿತ್ತು. ಜೂ.15ರಂದು ಗಲ್ವಾನ್‌ ಕಣಿವೆಯಲ್ಲಿ ಎರಡೂ ದೇಶಗಳ ನಡುವೆ ಯೋಧರ ನಡುವೆ ಮುಷ್ಠಿ ಕಾಳಗ ನಡೆದಿತ್ತು. 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಚೀನಾದ ಕಡೆಯೂ ಭಾರೀ ಸಾವುನೋವು ಸಂಭವಿಸಿತ್ತು. ಬಳಿಕ ಎರಡೂ ದೇಶಗಳ ಮಿಲಿಟರಿ ಅಧಿಕಾರಿಗಳ ನಡುವೆ ಮಾತುಕತೆ ನಡೆದಿತ್ತು. ಜ.24ರಂದು 16 ತಾಸುಗಳ ಕಾಲ ನಡೆದ 9ನೇ ಸುತ್ತಿನ ಮಾತುಕತೆ ವೇಳೆ ಸೇನಾ ಪಡೆಗಳ ಹಿಂತೆಗೆತಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ನಾವು ಯಾವುದಕ್ಕೂ ರಾಜಿ ಮಾಡ್ಕೊಂಡಿಲ್ಲ

ಮುಂಚೂಣಿ ನೆಲೆಯಿಂದ ಹಂತಹಂತವಾಗಿ ಸೇನಾಪಡೆಗಳ ಹಿಂತೆಗೆತ ನಡೆಯಲಿದೆ. ಮೇ 5ರ ಸಂಘರ್ಷಕ್ಕೂ ಮುನ್ನ ಇದ್ದ ಪರಿಸ್ಥಿತಿ ಪುನರ್‌ಸ್ಥಾಪಿಸುವ ಸಂಬಂಧ ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿವೆ. ಚೀನಾ ಜತೆ ನಡೆಸಿದ ನಿರಂತರ ಮಾತುಕತೆ ವೇಳೆ ಯಾವುದೇ ವಿಷಯದಲ್ಲೂ ರಾಜಿ ಮಾಡಿಕೊಂಡಿಲ್ಲ. ಯಾರೇ ಆಗಲಿ ಭಾರತದ ಒಂದಿಂಚೂ ಜಾಗವನ್ನು ಕಬಳಿಸಲು ಬಿಡುವುದಿಲ್ಲ.

ರಾಜ್‌ನಾಥ್‌ ಸಿಂಗ್‌, ರಕ್ಷಣಾ ಸಚಿವ